ಈಗಂತೂ ಬ್ಲೂವೇಲ್ ಎಂಬ ಮೈಂಡ್‌ಗೇಮ್‌ನಂತಹ ಸಾವಿನ ಆಟದ್ದೇ ಹಾವಳಿ. ಎಷ್ಟೋ ಮಕ್ಕಳು ಈ ಬ್ಲೂವೇಲ್ ಮೈಂಡ್‌ಗೇಮ್‌ಗೆ ಮಾರುಹೋಗಿ, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈಗ ಬ್ಲೂವೇಲ್‌ನಂತಹ ಮೈಂಡ್‌ಗೇಮ್ ಕುರಿತ ಸಿನಿಮಾವೊಂದು ತಯಾರಾಗುತ್ತಿದೆ.
ಅದು ಕನ್ನಡದಲ್ಲಿ ಆಗುತ್ತಿದೆ ಎಂಬುದು ವಿಶೇಷ. ಈ ಹಿಂದೆ “ಲೂಸ್‌ಗಳು’ ಚಿತ್ರವನ್ನು ನಿರ್ದೇಶಿಸಿದ್ದ ಅರುಣ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು, “ಸ್ಟೋರಿ ಆಫ್ ತಸ್ಕರ’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದ ರಾಜೇಶ್ ಗಣಪತಿ ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
“ಬ್ಲೂವೇಲ್‌ನಂತಹ ಭಯಾನಕ ಗೇಮ್ ಹಾಗು ಯುವ ಜನತೆಯ ಕುರಿತ ಕಥೆ ಇದಾಗಿದ್ದು, ಇಂದಿನ ತಂತ್ರಜ್ಞಾನ ಯುವಜನತೆಯ ಮೇಲೆ ಎಂತಹ ಪರಿಣಾಮ ಬೀರುತ್ತಿದೆ ಎಂಬುದನ್ನು ಥ್ರಿಲ್ಲಿಂಗ್ ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಇಲ್ಲಿ ಮುಖ್ಯಪಾತ್ರದ ಜತೆ ನಾಲ್ವರು ವಿದ್ಯಾರ್ಥಿಗಳೊಂದಿಗೆ ಕಥೆ ಸಾಗಲಿದ್ದು, ಈಗಿನ ವಿದ್ಯಾರ್ಥಿಗಳ ನಿತ್ಯದ ಬದುಕಲ್ಲಿ ನಡೆಯುವ ಪ್ರಮುಖ ಘಟನೆಗಳೇ ಚಿತ್ರದ ಹೈಲೈಟ್ ಎನ್ನುತ್ತಾರೆ ರಾಜೇಶ್ ಗಣಪತಿ.
ಈ ಚಿತ್ರಕ್ಕೆ “ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಎಂಬ ಶೀರ್ಷಿಕೆ ಇಡಲಾಗಿದ್ದು, ಈ ಚಿತ್ರದಲ್ಲಿ ನಿರ್ದೇಶಕ ಅರುಣ್ ಅವರೊಂದಿಗೆ “ತಸ್ಕರ’ ಚಿತ್ರ ನಿರ್ದೇಶಿಸಿದ್ದ ದೇವರಾಜ್ ಪೂಜಾರಿ ಹಾಗೂ ಕಿರುತೆರೆಯ ಸಂಭಾಷಣೆಗಾರ ರಾಜು ಶಾನ್‌ಭಾಗ್ ಕಥೆ ಮತ್ತು ಚಿತ್ರಕಥೆ ಬಗ್ಗೆ ಚರ್ಚಿಸಿ, ಹೊಸ ಅಂಶಗಳೊಂದಿಗೆ ಕಮರ್ಷಿಯಲ್ ಅಂಶಗಳನ್ನೂ ಸೇರಿಸಿ, ಕಥೆಗೊಂದು ಹೊಳಪು ತಂದಿದ್ದಾರೆ.
ಇನ್ನು, ಈ ಕಥೆಗೆ ನಾಲ್ವರು ನಿರ್ಮಾಪಕರು ಹಣ ಹಾಕಲು ಮುಂದಾಗಿದ್ದು, ಇಷ್ಟರಲ್ಲೇ ಹೊಸ ಪ್ರೊಡಕ್ಷನ್ ಹೌಸ್ ಮೂಲಕ “ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ ಎಂಬುದು ರಾಜೇಶ್ ಗಣಪತಿ ಮಾತು. ಕೆಲವೇ ದಿನಗಳಲ್ಲಿ ಉಳಿದ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.