ಧಾರವಾಡ: ನಾಟಕ ಎನ್ನುವುದು ಮನಸ್ಸಿಗೆ ಮುದ ನೀಡುವುದರ ಜೊತೆಗೆ ಪ್ರೇಕ್ಷಕನಿಗೆ ಜೀವನ ದರ್ಶನ ನೀಡಿ ಹಿತ ಎನಿಸುವ ನೀತಿಯನ್ನು ಬೋಧಿಸಿ ಜೀವನದ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕಲೆಯಾಗಿದೆ ಎಂದು ಜೆಎಸ್‌ಎಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ|ಜಿನದತ್ತ ಹಡಗಲಿ ಹೇಳಿದರು.
ನಗರದ ಕವಿಸಂನಲ್ಲಿ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಮಾರ್ಗದರ್ಶನಲ್ಲಿ ಶಿವಕುಮಾರ ಕಲಾ ಸಂಘ ಶಿವಸಂಚಾರ-2016-17 ಸಾಣೇಹಳ್ಳಿ ವತಿಯಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ನಾಟಕೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದೃಶ್ಯ, ಕಾವ್ಯಕ್ಕೆ ಪ್ರಸಿದ್ಧಿ ಪಡೆದ ನಾಟಕ ಸಾಹಿತ್ಯ, ಸಂಗೀತ, ನೃತ್ಯ, ಅಭಿನಯವೆಂಬ ಲಲಿತ ಕಲೆಗಳ ಸಂಗಮವಾಗಿದೆ ಎಂದರು.
90ರ ದಶಕದಲ್ಲಿ ಟಿ.ವಿ. ಹಾಗೂ ಸಿನೆಮಾಗಳು ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿಗೆ ಸವಾಲು ಒಡ್ಡಿದ್ದನ್ನು ನಂತರ ಮತ್ತೆ ರಂಗಭೂಮಿಯ ಕಡೆ ಪ್ರೇಕ್ಷಕರ ಒಲವು ಮೂಡುತ್ತಿರುವುದನ್ನು ನಾವು ಕಾಣುತ್ತೇವೆ. ರಂಗಭೂಮಿ ಎಂದರೆ ಜನತೆಯ ವಿಶ್ವವಿದ್ಯಾಲಯ. ಅಲ್ಲಿ ಪ್ರೇಕ್ಷಕರಾದವರು ಪಾತ್ರಗಳೊಂದಿಗೆ ನಕ್ಕು ಅವರೊಂದಿಗೆ ಅತ್ತು ಭಿನ್ನ ಭಾವಗಳನ್ನು ಅಂತರಂಗದಲ್ಲೇ ಅನುಭವಿಸಿ ಜೀವನದಲ್ಲಿ ಪಾಠ ಕಲಿಯುವಂತಿರಬೇಕು.
ಆ ರೀತಿಯಲ್ಲಿ ತಮ್ಮ ಮನೋಜ್ಞ ಹಾಗೂ ಪ್ರೌಢ ಅಭಿನಯದಿಂದ ಪಾತ್ರಗಳಿಗೆ ಜೀವತುಂಬಿ ಸಾಣೇಹಳ್ಳಿಯ ಶಿವಸಂಚಾರ ತಂಡದವರು ಅದ್ಭುತವಾಗಿ ಪ್ರೇಕ್ಷಕರಿಗೆ ತೋರಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.
ಮೋಹನ ನಾಗಮ್ಮನವರ, ಗುರು ಹಿರೇಮಠ, ಡಾ|ಶ್ರೀಶೈಲ ಹುದ್ದಾರ, ಡಾ|ಹೇಮಾ ಪಟ್ಟಣಶೆಟ್ಟಿ, ಸುಜಾತಾ ಹಡಗಲಿ, ಶಂಕರ ರಾಜಗೋಳ, ಮಾರ್ಕಂಡೇಯ ದೊಡಮನಿ, ನಿಂಗಣ್ಣ ಕುಂಟಿ, ಡಾ|ವಿಶ್ವನಾಥ ಚಿಂತಾಮಣಿ, ಪುಷ್ಪಾ ಹಿರೇಮಠ, ಲಕ್ಷ್ಮಣ ಬಕ್ಕಾಯಿ, ಪ್ರಕಾಶ ಮುಳಗುಂದ, ಬಿ. ಎಸ್. ಶಿರೋಳ, ಬಿ.ಕೆ.ಎಸ್. ವರ್ಧನ್, ವಿಜಯಾ ಲಿಂಬಣ್ಣದೇವರಮಠ, ಎಚ್.ಡಿ.ನದಾಫ್, ಯಕ್ಕೇರಪ್ಪ ನಡುವಿನಮನಿ, ಆಯ್.ಕೆ.ಬಳ್ಳೂರ ಇದ್ದರು.
ತಂಡದ ಮುಖ್ಯಸ್ಥ ಬಿ.ಆರ್.ಮಂಜುನಾಥ, ಶಿವಾನಂದ ಭಾವಿಕಟ್ಟಿ ಇದ್ದರು. ಶಂಕರ ಹಲಗತ್ತಿ ನಿರೂಪಿಸಿದರು. ಕೋಟಿಗಾನಹಳ್ಳಿ ರಾಮಯ್ಯ ರಚನೆಯ, ಗಜಾನನ ಟಿ. ನಾಯ್ಕ ಸಂಗೀತ ನಿರ್ದೇಶನದಲ್ಲಿ, ಪ್ರಮೋದ ಶಿಗ್ಗಾಂವ ನಿರ್ದೇಶನದಲ್ಲಿ “ನನ್ನ ಅಂಬೇಡ್ಕರ್’ ನಾಟಕ ಉತ್ತಮವಾಗಿ ಪ್ರದರ್ಶನಗೊಂಡಿತು.