ನಮ್ಮ ಉತ್ತಮ ಮಿತ್ರ ಮತ್ತು ಪರಮ ಶತ್ರು ಯಾರೆಂದು ಕೇಳಿದರೆ ನಾವು ನಮಗೆ ಅತ್ಯಂತ ಹತ್ತಿರವಿರುವ ವ್ಯಕ್ತಿ ಮಿತ್ರ ಎನ್ನಬಹುದು. ಕಂಡರೆ ನೆತ್ತಿಗೇರುವಷ್ಟು ಕೋಪ ಬರುವ ವ್ಯಕ್ತಿಯನ್ನು ಪರಮಶತ್ರು ಎನ್ನಬಹುದು. ಆದರೆ ನಮ್ಮ ನಿಜವಾದ ಶತ್ರು ಹಗೂ ಮಿತ್ರ ಇವೆರಡೂ ನಮ್ಮ ಮನಸ್ಸು.
ನಿಮ್ಮ ಮನಸ್ಸಿನ ಭಾವನೆಗಳಿಗೆ ತಕ್ಕಹಾಗೆ ನಿಮ್ಮ ಸುತ್ತಲಿನ ಪ್ರಪಂಚ ನಿಮಗೆ ಹಲವಾರು ರೀತಿಯಲ್ಲಿ ಕಾಣುತ್ತದೆ. ಒಬ್ಬರಿಗೆ ಅಂದವಾಗಿ ಕಾಣುವ ವಸ್ತು ಮತ್ತೂಬ್ಬರಿಗೆ ಅಂದವಾಗಿ ಕಾಣ ಬೇಕಂತೇನೂ ಇಲ್ಲ. ಎಲ್ಲವೂ ಅವರವರ ಭಾವನೆಗಳಿಗೆ ಬಿಟ್ಟಿದ್ದು. ಈ ಭಾವನೆಗಳಿಗೆ ಮೂಲವೇ ಮನಸ್ಸು.
ಒಮ್ಮೆ ಸನ್ಯಾಸಿಯೊಬ್ಬರು ತಪಸ್ಸನ್ನು ಆಚರಿಸಲು ಸೂಕ್ತ ಜಾಗದ ಹುಡುಕಾಟ ನಡೆಸುತ್ತಿದ್ದರು. ಅಲೆದಾಡಿ ಅಲೆದಾಡಿ ಕೊನೆಗೆ ಒಂದು ಶ್ಮಶಾನವನ್ನು ತಪಸ್ಸಿಗೆ ಸೂಕ್ತ ಜಾಗವೆಂದು ಆಯ್ದುಕೊಂಡರು. ತೀವ್ರ ಚಳಿಯಿದ್ದ ಕಾರಣ ಸ್ಮಶಾನವೇ ಉತ್ತಮ ಜಾಗವೆಂಬುದು ಅವರ ನಿಲುವು. ಕುತ್ತಿಗೆಯ ತನಕ ಕಂಬಳಿ ಹೊದ್ದು ತಮ್ಮ ಪಾಡಿಗೆ ಅವರು ತಪಸ್ಸನ್ನು ಆಚರಿಸುತ್ತಿದ್ದರು.
ರಾತ್ರಿ ಪಾಳಿಯಲ್ಲಿದ್ದ ಇಬ್ಬರು ಪೊಲೀಸ್ ಪೇದೆಗಳು ಇವರನ್ನು ನೋಡಿ ಇದು ಯವುದೋ ಪ್ರೇತವಾಗಿರಬೇಕು ಎಂದು ಹೆದರಿ ಓಡಿಹೋದರು. ಅದೇ ದಾರಿಯಲ್ಲಿ ಬರುತ್ತಿದ್ದ ದೈವ ಭಕ್ತನೊಬ್ಬ ಇವರನ್ನು ದೂರದಿಂದಲೇ ನೋಡಿ ಇತ ನಿಜವಾಗಿಯೂ ಮಹಾ ಪುರುಷ. ಶ್ಮಶಾನದಲ್ಲಿ ಕೂತು ತಪಸ್ಸನ್ನು ಆಚರಿಸುತ್ತಿದ್ದಾನೆ ಎಂದು ಕೈ ಮುಗಿದು ಹೋದ.
ಈ ಕತೆಯನ್ನೇ ನೋಡಿ. ಇಲ್ಲಿ ಪೊಲೀಸ್ ಪೇದೆಗಳು, ದೈವಭಕ್ತ ಇಬ್ಬರೂ ನೋಡಿದ್ದು ಆ ಸನ್ಯಾಸಿಯನ್ನೆ. ಆದರೆ ಅವರ ಮನಸ್ಸು ಅವರನ್ನು ಮಾರ್ಗದರ್ಶನ ಮಾಡಿಸಿದ್ದು ಮಾತ್ರ ಬೇರೆ ಬೇರೆ ತರಹ. ಇಂತಹ ಎಷ್ಟೋ ಘಟನೆಗಳು ನಮ್ಮ ನಡುವೆಯೂ ನಡೆದಿವೆ. ಸುಖಃ -ದುಃಖ, ನೋವು-ನಲಿವು ಇವೆಲ್ಲವೂ ನಿರ್ಧಾರವಾಗುವುದು ನಿಮ್ಮ ಮನಸ್ಸನ್ನು ನೀವು ಎಷ್ಟು ಹಿಡಿತದಲ್ಲಿ ಇಟ್ಟುಕೊಂಡಿದ್ದೀರಿ ಎನ್ನುವುದರ ಮೇಲೆಯೇ ಅವಲಂಬಿತ.
ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡ ಬಡವನೂ ನೂರುಕಾಲ ಖುಷಿಯಿಂದ ಬಾಳಬಹುದು. ಮನೋನಿಯಂತ್ರಣವೇ ಇಲ್ಲದ ಕೋಟ್ಯಾಧೀಶ ಎಲ್ಲ ಇದ್ದು ಏನೂ ಇಲ್ಲದಂತೆ ಬಾಳಬೇಕಾಗಬಹುದು.
ಪ್ರಸನ್ನ ಹೆಗಡೆ ಊರಕೇರಿ