ನಾನು ಎದ್ದು ಬಂದು ಎದೆಮೇಲೆ ಬಿಗುವಾಗಿ ಕೈಕಟ್ಟಿಕೊಂಡು ಕೀಲಿ ಕೊಟ್ಟವನಂತೆ ಹಿಂದಕ್ಕೂ ಮುಂದಕ್ಕೂ ಓಲಾಡುತ್ತಾ..ಕಾಗೆ ಕಾಗೆ ಕವ್ವ.. ಯಾರು ಬಂದಾರವ್ವ.. ಮಾವ ಬಂದಾನವ್ವ.. ಮಾವನಿಗೇನ್ ಊಟ’ ಅಂತ ಆತುರಾತುರವಾಗಿ ಹೇಳಿ ಮುಗಿಸಿ ಓಡಿಬಂದು ಮಣೆಮೇಲೆ ಕೂರುತ್ತಿದ್ದೆ.
ಆಗೆಲ್ಲಾ ನಮ್ಮ ಹಳ್ಳಿ ಶಾಲೆಗಳಲ್ಲಿ ಶುಕ್ರವಾರ ಬಂತೆಂದರೆ ಹಬ್ಬದ ಸಂಭ್ರಮ. ಅದು ನಮ್ಮದೇ ದಿನವಾಗಿರುತ್ತಿತ್ತು. ಶಾರದಾಪೂಜೆಗಾಗಿ ಮುಂಚಿನ ದಿನವೇ ಮಕ್ಕಳಿಗೆಲ್ಲ ಎಂಟಾಣೆ ತರಲು ಹೇಳಿರುತ್ತಿದ್ದ ಸ್ಕೂಲ್ ಮಾನೀಟರ್. ಮಧ್ಯಾಹ್ನ ಕಳೆದ ಮೇಲೆ ತಯಾರಿ ಶುರು. ಒಂದು ತಂಡ ತೆಂಗಿನಕಾಯಿ, ಪೂಜಾ ಸಾಮಗ್ರಿಗಳನ್ನು ಕೊಂಡು, ಉಳಿದಿದ್ದರಲ್ಲಿ ಚಾಕೊಲೆಟ್‌ಗಳನ್ನೂ ತರುತ್ತಿತ್ತು. ತಲಾ ಒಂದೊಂದು ಬರದಿದ್ದಲ್ಲಿ ಒಂದು ಚಾಕೊಲೆಟ್ ಎರಡು ಅಥವಾ ಮೂರು ಭಾಗವಾಗುತ್ತಿದ್ದವು. ಇನ್ನೊಂದು ತಂಡ, ಮೇಲಿನಿಂದ ಶಾರದೆಯ ಫೋಟೊವನ್ನು ಕೆಳಗಿಳಿಸಿ, ಒರೆಸಿಡುತ್ತಿತ್ತು.
ಹೆಣ್ಣುಮಕ್ಕಳು ಅಕ್ಕಪಕ್ಕದ ಮನೆಗಳ ಹಿತ್ತಲಿನ ಮಲ್ಲಿಗೆ-ಅಬ್ಬಲಿಗೆ ಹೂಗಳನ್ನು ಕೊಯ್ದುತಂದು ಮಾಲೆಮಾಡಿ ಮುಡಿಸುತ್ತಿದ್ದರು. ಶಾಲೆಯ ಒಳ-ಹೊರಗೂ ಧೂಳು-ಕಸವನ್ನೆಲ್ಲಾ ಗುಡಿಸಿ, ಒರೆಸಿ, ಒಪ್ಪ ಓರಣವಾದ ಮೇಲೆ ಕೊನೆಯ ಅವಧಿಯಲ್ಲಿ ಕಾರ್ಯಕ್ರಮ ಶುರು. ಮಾನೀಟರ್ ಪೂಜೆಗೆ ನಿಲ್ಲುತ್ತಿದ್ದ. ಇಡೀ ಶಾಲೆಯು ಜೋರುದನಿಯಲ್ಲಿ “ತಾಯಿ ಶಾರದೆ, ಲೋಕಪೂಜಿತೆ’ ಹಾಡುತ್ತಿತ್ತು. ನಮ್ಮ ದನಿ ಕಿವಿಗೆ ಬಿದ್ದ ದಾರಿಹೋಕರೂ ಶಾಲೆಯತ್ತ ಇಣುಕುತ್ತಿದ್ದರು. ಆನಂತರ, ಮನರಂಜನಾ ಕಾರ್ಯಕ್ರಮ. ನನ್ನೊಟ್ಟಿಗಿನ ಚೋಟುಮೋಟು ಗೆಳೆಯರಾಗಿದ್ದ ರವಿ, ವಿಷ್ಣು, ಉಜ್ಜನಿ, ಹರೀಶರದ್ದು ಆಗಾಗ ಒಂದೊಂದು ಕಥೆ, ಜೋಕ್‌ಗಳನ್ನು ಕೇಳಿಸಿಕೊಳ್ಳುವುದು ಬಿಟ್ಟರೆ ಬೇರೇನೂ ಮಾಡುತ್ತಿರಲಿಲ್ಲ. ಕೆಲವು ಹುಡುಗಿಯರಂತೂ ತಲೆ ಎತ್ತುತ್ತಿದ್ದುದೇ ಅಪರೂಪ. ಪೂಜೆಯಂದು ಹಾಡು ಕಂಪಲ್ಸರಿಯಾಗಿತ್ತು. ಕೊನೆಗೆ ಮೇಷ್ಟ್ರು, “ಹುಡುಗರ ಕಡೆಯಿಂದ ಯಾರಾದ್ರೂ ಬರ್ರೂ ಒಂದು ಹಾಡ್ ಹೇಳ್ರೊ’ ಅಂತ ಬೆಟ್ಟುಮಾಡಿ ಕರೆದರೂ ಯಾರೂ ಬರುತ್ತಿರಲಿಲ್ಲ. ಮೇಷ್ಟ್ರು, ತಮ್ಮ ಕೀರಲು ಧ್ವನಿಯಿಂದ, “ಹಿಂದೆ ಒಂದೆರಡು ಕ್ಲಾಸಿನಲ್ಲಿ ಕೂಸಿದ್ದ ಮನೆಗೆ ಬೀಸಣಿಕೆ ಯಾತಕ್ಕ ‘ ಎಂಬ ಜಾನಪದ ಪದ್ಯಭಾಗವನ್ನು ರಾಗವಾಗಿ ಹಾಡಲು ಹೋಗಿ, ನಗೆಪಾಟಲಿಗೀಡಾದ ಮೇಲೆ ಹಾಡುವ ಪ್ರಯತ್ನವನ್ನು ಕೈಬಿಟ್ಟಿದ್ದರು. ಹಾಗಾಗಿ, ಶಾಲೆಗೆ ಉಳಿದಿದ್ದ ಏಕೈಕ ಹಾಡುಗಾರ ನಾನೇ ಆಗಿದ್ದೆ.
ಕೊನೆಗೆ ಎಂದಿನಂತೆ, ಮೇಷ್ಟ್ರು “ಲೇ.. ಸತೀಶ.. ನೀನೇ ಹೇಳ್ಳೋ’ ಅನ್ನೋರು. ನಾನು ಎದ್ದು ಬಂದು ಎದೆಮೇಲೆ ಬಿಗುವಾಗಿ ಕೈಕಟ್ಟಿಕೊಂಡು ಕೀಲಿ ಕೊಟ್ಟವನಂತೆ ಹಿಂದಕ್ಕೂ ಮುಂದಕ್ಕೂ ಓಲಾಡುತ್ತಾ..ಕಾಗೆ ಕಾಗೆ ಕವ್ವ.. ಯಾರು ಬಂದಾರವ್ವ.. ಮಾವ ಬಂದಾನವ್ವ.. ಮಾವನಿಗೇನ್ ಊಟ’ ಅಂತ ಆತುರಾತುರವಾಗಿ ಹೇಳಿ ಮುಗಿಸಿ ಓಡಿಬಂದು ಮಣೆಮೇಲೆ ಕೂರುತ್ತಿದ್ದೆ. ಆ ಪದ್ಯಕ್ಕೆ ಅದೇನು ಅರ್ಥವಿದೆಯೋ ಇವತ್ತಿಗೂ ನನಗೆ ತಿಳಿಯಲಿಲ್ಲ!.ಆ ಸಾಹಿತ್ಯ-ಸಂಗೀತ ಕಲಿಸಿದ ಗುರುವಿನ ನೆನಪೂ ಇಲ್ಲ. ಆದರೂ ಅವತ್ತಿನ ಕಾಲಕ್ಕೆ ನಮ್ಮ ಶಾಲೆಯ ಸಮಸ್ತ ವಿದ್ಯಾರ್ಥಿವೃಂದದ ಅಚ್ಚುಮೆಚ್ಚಿನ ಗಾಯಕನೆಂದರೆ ನಾನೇ; ಈ ಹಾಡಿನ ಮೂಲಕ. ಯಾವ ಲಯ, ಶೃತಿ, ರಾಗ, ತಾಳಮೇಳಗಳ ಹಂಗಿರದ, ಕಡೇಪಕ್ಷ, ಸಂಗೀತ ಸಾಹಿತ್ಯದ ಪರಿಜ್ಞಾನವೂ ಇಲ್ಲದೇನೆ ಪಾಠ ಒಪ್ಪಿಸಿದಂತೆ ಪದ್ಯಹೇಳಿ ಬರುತ್ತಿದ್ದವನಿಗೆ ಗು..ಡ್ ಅನ್ನುವ ಮೇಷ್ಟ್ರ ಮೆಚ್ಚುಗೆ ಮತ್ತು ಮಕ್ಕಳೆಲ್ಲರ ದೊಡ್ಡ ಚಪ್ಪಾಳೆಯ ಖಾತ್ರಿ ಇರುತ್ತಿತ್ತು. ಕೊನೆ ಕೊನೆಗೆ ನನಗಿಂತ ಮೊದಲೇ ಉಳಿದವರು ಶುರುಮಾಡಿ ಆಮೇಲೆ ನನ್ನೊಡನೆ ಆಲಾಪದಂತೆ ಜತೆಗೂಡುತ್ತಿದ್ದರು. ನನ್ನ ಹಾಡಿನ ಹವಾ ಹಾಗಿತ್ತು. ಅಲ್ಲಿ ನಾನು ಮತ್ತು ನನ್ನ ಹಾಡು ಎರಡೂ ಫುಲ್‌ಹಿಟ್ ಆಗಿದ್ದವು. ಕೆಲವರಿಗೆ ಸ್ಫೂರ್ತಿಯೂ ಆಗಿದ್ದಿರಬಹುದು!. ಇನ್ನಷ್ಟು ವರ್ಲ್x ಫೇಮಸ್ ಆಗಲು ಇವತ್ತಿನ ಮೊಬೈಲು-ಟಿವಿಗಳು ಆಗ ಎಲ್ಲಿದ್ದವು ಹೇಳಿ!?.
ನಾನೊಬ್ಬ ಅದ್ಭುತ ಹಾಡುಗಾರನಿರಬಹುದೆಂಬ ಅನುಮಾನ ಬಂದಿದ್ದಿದ್ದೇ ಆಗ. ಈಗ ಮಕ್ಕಳು ಟಿ.ವಿಯಲ್ಲಿ ಹಾಡುವುದನ್ನು ನೋಡಿದಾಗೆಲ್ಲ ನನ್ನ ಈ ಗಾಯನ ಕಛೇರಿ ನೆನಪಾಗುತ್ತದೆ.
ಸತೀಶ್.ಜಿ.ಕೆ.ತೀರ್ಥಹಳ್ಳಿ