ಶಿರಸಿ: ಹೃದಯ ಕಾಯಿಲೆಗೆ ಸಂಬಂಧಿಸಿದ ಲಕ್ಷಾಂತರ ರೂ. ಮೌಲ್ಯದ ಔಷಧ ವಸ್ತುಗಳನ್ನು ಇಲ್ಲಿಯ ಚಿಪಗಿ ರಸ್ತೆಯ ಗಟಾರದಲ್ಲಿ ಎಸೆದ ಘಟನೆ ನಡೆದಿದ್ದು, ಈ ಕುರಿತು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಕಾಲೇಜು ರಸ್ತೆಯಿಂದ ಚಿಪಗಿ ವೃತ್ತದ ರಸ್ತೆಯಂಚಿನ ಎರಡೂ ಕಡೆಗಳಲ್ಲಿ ಹೆಬ್ಟಾರ ಮುಂದಾಳತ್ವದಲ್ಲಿ ಸ್ವಚ್ಛಗೊಳಿಸಲಾಗಿತ್ತು. ಆದರೆ ಇದೇ ರಸ್ತೆಯ ಗಟಾರದಲ್ಲಿ ಹೃದಯ ಕಾಯಿಲೆ ಔಷಧಗಳ ಜೊತೆಗೆ ಕ್ವಿಂಟಲ್ ಅಕ್ಕಿಯನ್ನೂ ಎಸೆದಿರಬಹುದು ಎಂದು ಶಂಕಿಸಲಾಗಿದೆ. ಸುಮಾರು 40ರಿಂದ 50ಕ್ಕೂ ಅಧಿಕ ಮಾತ್ರೆಗಳ ಪೆಟ್ಟಿಗೆ ಎಸೆಯಲಾಗಿದ್ದು ಅವುಗಳಲ್ಲಿ ಕೆಲವು ಬಳಕೆಗೆ ಬಂದರೆ ಕೆಲವು ಅವಧಿ ಮೀರಿದ ಮಾತ್ರೆಗಳಾಗಿವೆ.
ಗಟಾರದಲ್ಲಿ ಮೊದಲಿಗೆ ಅಕ್ಕಿ ಕಂಡು ಬಂದಿದ್ದರಿಂದ ಸ್ವತಃ ಹೆಬ್ಟಾರ ಹಾಗೂ ಕಾರ್ಯಪಡೆಯ ಎಂ.ಎಂ. ಭಟ್, ಶ್ರೀಕಾಂತ ಹೆಗಡೆ, ಅಶೋಕ ಭಟ್, ಮಂಜು ಮೊಗೇರ್ ಮುಂತಾದವರು ಗಟಾರದಲ್ಲಿಳಿದು ಕೋಲಿನಿಂದ ಜಾಲಾಡಿದಾಗ ಅಕ್ಕಿ ಕೆಳೆಗೆ ಮೈಕ್ರೊ ಕಂಪನಿ ಮಾತ್ರೆಗಳು ದೊರಕಿವೆ. ಕೂಡಲೆ ನಗರಸಭೆ ವಾಹನದ ಮೂಲಕ ಕಸ ವಿಲೇವಾರಿ ಮಾಡಲಾಗಿದೆ. ಈಗಾಗಲೇ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ್ ಬೇಕಾಬಿಟ್ಟಿ ಕಸ ಚೆಲ್ಲುವವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ನಿರಂತರ ಕಾವಲು ಕಾರ್ಯವನ್ನೂ ಮಾಡುತ್ತಿದ್ದಾರೆ.
ಕ್ರಮಕ್ಕೆ ಸೂಚನೆ: ಚಿಪಗಿ ರಸ್ತೆಯಲ್ಲಿ ಪತ್ತೆಯಾಗಿರುವ ಲಕ್ಷಾಂತರ ರೂ. ಬೆಲೆಯ ಹೃದಯ ಕಾಯಿಲೆ ಮಾತ್ರೆ ಪ್ರಕರಣವನ್ನು ಜಿಲ್ಲಾ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಯಾವುದೇ ಮಾತ್ರೆಯಾದರೂ ಈ ರೀತಿಯಾಗಿ ಎಸೆಯುವುದು ಕಾನೂನು ಪ್ರಕಾರವೂ ಸರಿಯಲ್ಲ. ಈ ಮಾತ್ರೆಗಳು ನೀರಿಗೆ ಸೇರಿದರೆ, ಪ್ರಾಣಿಗಳು ತಿಂದರೆ ಅವುಗಳ ಮೇಲೆ ಕೆಟ್ಟ ಪರಿಣಾಮ ಆಗಲಿವೆ. ಮಾತ್ರೆಗಳು ಉಳಿದರೆ ಅದನ್ನು ಕಂಪನಿಗೆ ವಾಪಸ್ ಕಳುಹಿಸಬೇಕು. ಅದು ಬಿಟ್ಟು ಚೆಲ್ಲುವದಲ್ಲ. ಈ ಮಾತ್ರೆಗಳ ಕುರಿತು ವರದಿ ತರಿಸಿಕೊಂಡು ಆರೋಪಿಗಳ ಪತ್ತೆ ಮಾಡಲು ಡಿಎಚ್ಒ ಡಾ| ಜಿ.ಎನ್. ಅಶೋಕ ಕುಮಾರ ತಾಲೂಕು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ನಡುವೆ ಗಟಾರದಲ್ಲಿ ಯಾರೋ ಬಿಸಾಕಿರುವ ಲಕ್ಷಾಂತರ ರೂ ಬೆಲೆಯ ಮಾತ್ತೆಯನ್ನು ಪತ್ತೆ ಮಾಡಿರುವ ಜೀವ ಜಲ ಕಾರ್ಯಪಡೆ ಅದ್ಯಕ್ಷ ಶ್ರೀನಿವಾಸ ಹೆಬ್ಟಾರ ಮತ್ತವರ ತಂಡಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.