Advertisement

ರಾಗಿ ಕೇಂದ್ರ ತೆರೆದರೂ ಹಿಂಗಾರು ರೈತರಿಗಿಲ್ಲ ಅನುಕೂಲ

12:17 PM Feb 20, 2021 | Team Udayavani |

ಪಿರಿಯಾಪಟ್ಟಣ: ಸರ್ಕಾರ 2020-21ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಹಾಗೂ ಭತ್ತ ಖರೀದಿ ಕೇಂದ್ರ ಆರಂಭಿಸಿ ರಾಜ್ಯ ಮಾರಾಟ ಮಂಡಳಿಗೆ ಜವಾಬ್ದಾರಿವಹಿಸಿದ್ದರೂ ಸರ್ಕಾರ ರೂಪಿಸಿರುವ ಮಾನದಂಡಗಳು ರೈತರನ್ನು ಸಂಕಷ್ಟಕ್ಕೆಸಿಲುಕಿಸಿವೆ. ಹಲವು ನಿರ್ಬಂಧ ವಿಧಿಸಿರುವುದರಿಂದ ರೈತರು ರಾಗಿ ಮಾರಾಟ ಮಾಡಲು ಆಗದೆ ಪರಿತಪಿಸುವಂತಾಗಿದೆ.

Advertisement

ನೋಂದಣಿಗೆ ತಡೆ: ಈ ಬಾರಿ ಸರ್ಕಾರ ಮುಂಗಾರು ಹಂಗಾಮಿನಲ್ಲಿ ಬೆಳೆದ ರಾಗಿಯನ್ನು ಮಾತ್ರಖರೀದಿಸಲು ಆದೇಶಿಸಿದೆ. ಪಿರಿಯಾಪಟ್ಟಣ ಅರೆಮಲೆನಾಡು ಪ್ರದೇಶವಾಗಿದ್ದು, ಮುಂಗಾರು ಮಳೆಪ್ರಾರಂಭಕ್ಕೂ ಮೊದಲು ಮಳೆಗಾಲ ಆರಂಭವಾಗಿ ಏಪ್ರಿಲ್‌ ಅಂತ್ಯಕ್ಕೆ ಪೂರ್ವ ಮುಂಗಾರಿನಲ್ಲಿ ತಂಬಾಕು ನಾಟಿ ಮಾಡಲು ಪ್ರಾರಂಭವಾಗಿ ಆಗಸ್ಟ್‌ ಅಂತ್ಯಕ್ಕೆ ಈಬೆಳೆ ಮುಗಿದ ನಂತರ ಎರಡನೆ ಬೆಳೆಯಾಗಿ ರಾಗಿ ಬೆಳೆಯುವರು. ತಡ ಮುಂಗಾರು ಅಂದರೆ ಹಿಂಗಾರು ಹಂಗಾಮಿನಲ್ಲಿ ಇಲ್ಲಿನ ರೈತರು ರಾಗಿ ಬೆಳೆಯನ್ನು ಬೆಳೆಯಲು ಪ್ರಾರಂಭಿಸುತ್ತಾರೆ.

ಸರ್ಕಾರ ರೈತರು ಬೆಳೆದ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು 3295 ರೂ.ನಿಗದಿ ಮಾಡಿದೆ. ರೈತರು ಈ ಯೋಜನೆಯಡಿ ಮಾರಾಟ ಮಾಡಲು ನೋಂದಣಿ ಮಾಡಿಸಲು ಹೋದರೆಪಹಣಿಯಲ್ಲಿ ಮುಂಗಾರು ಹಂಗಾಮಿನಲ್ಲಿ ರಾಗಿ ಎಂದು ನಮೂದಾಗಿದ್ದರೆ ಮಾತ್ರ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಅವಕಾಶ ಸಿಗುತ್ತದೆ. ಇಲ್ಲದಿದ್ದರೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ. ಆದರೆ, ಬಹುತೇಕ ರೈತರ ಪಹಣಿಯಲ್ಲಿ ರಾಗಿ ಬೆಳೆ ನಮೂದಾಗಿಯೇ ಇಲ್ಲ. ಈಗಾಗಲೇ ರೈತರು ನೋಂದಣಿ ವಿಚಾರದಲ್ಲಿ ಅಧಿಕಾರಿಗಳೊಂದಿಗೆ ಜಟಾಪಟಿಗೆ ಇಳಿದಿದ್ದು, ಜಮೀನಿನಲ್ಲಿ ರಾಗಿ ಬೆಳೆದಿದ್ದೇವೆ. ಆದರೆ, ಪಹಣಿಯಲ್ಲಿ ನೋ ಕ್ರಾಫ್, ಹಿಂಗಾರು ರಾಗಿ ಎಂದು ನಮೂದಾಗಿದೆ. ಈ ಹಿಂದೆ ಇದೇ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಪಹಣಿಯಲ್ಲಿ ಬೆಳೆ ನಮೂದು ಮಾಡುವ ಕೆಲಸ ಮಾಡಿದ್ದರು. ಇವರು ರಾಗಿ ಖರೀದಿಸುವುದನ್ನು ತಪ್ಪಿಸಿಕೊಳ್ಳಲು ಹಾಗೂ ವರ್ತಕರಿಗೆ ಲಾಭವಾಗಲಿ ಎಂಬ ಕಾರಣಕ್ಕೆ ಕುಂಟು ನೆಪ ಹೇಳುತ್ತಿದ್ದಾರೆ.

ನೋಂದಣಿ: ಈ ಬಾರಿ ಪೂರ್ವ ಮುಂಗಾರಿನಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಕೆ.ಆರ್‌.ನಗರ, ಹುಣಸೂರು, ಎಚ್‌.ಡಿ.ಕೋಟೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ರಾಗಿ ಬೆಳೆಯನ್ನು ಬೆಳೆಯಲಾಗಿದ್ದು, ಪಿರಿಯಾಪಟ್ಟಣ ತಾಲೂಕಿನಲ್ಲಿ 15ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ 2,25,000 ಕ್ವಿಂಟಲ್‌ ರಾಗಿ ಬೆಳೆಯಲಾಗಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಪಿರಿಯಾಪಟ್ಟಣ ಖರೀದಿ ಕೇಂದ್ರದಲ್ಲಿ 1200 ರೈತರು ನೋಂದಣಿಯಾಗಿದ್ದು, 35,000 ಕ್ವಿಂಟಲ್‌ ರಾಗಿಯನ್ನು ಮಾರಾಟ ಮಾಡಲು ಸಿದ್ಧರಾಗಿದ್ದಾರೆ. ಬೆಟ್ಟದಪುರ ಕೇಂದ್ರದಲ್ಲಿ 1,700 ರೈತರು ನೋಂದಾಯಿಸಿದ್ದು, 48 ಸಾವಿರ ಕ್ವಿಂಟಲ್‌ ಮಾರಾಟಕ್ಕೆ ಹೆಸರು ನಮೂದಿಸಿದ್ದಾರೆ. ಈ ಪೈಕಿ ಶೇ.36 ರಷ್ಟು ಮಾತ್ರ ಮಾರಾಟಕ್ಕೆ ಅವಕಾಶ ಸಿಕ್ಕಂತಾಗಿದ್ದು, ಇನ್ನುಳಿದ 1,42,000 ಕ್ವಿಂಟಲ್‌ ನಷ್ಟು ರಾಗಿ ನೋಂದಣಿಗೆ ಅವಕಾಶ ಸಿಗದೆ ರೈತರು ಪರಿತಪಿಸುವಂತಾಗಿದೆ.

ವರ್ತಕರಿಗೆ ಲಾಭ ಮಾಡಿಕೊಡುವ ಹುನ್ನಾರ :

Advertisement

ರಾಗಿಗೆ ಮುಕ್ತ ಮಾರುಕಟ್ಟೆಯಲ್ಲಿ ಸುಮಾರು 2,500 ರೂ.ವರೆಗೂ ವರ್ತಕರು ಖರೀದಿ ಮಾಡಿ, ಅದನ್ನು ಸರ್ಕಾರದ ಬೆಂಬಲ ಬೆಲೆಗೆ ಮಾರಾಟ ಮಾಡಿ ಹೆಚ್ಚು ಲಾಭಗಳಿಸಲು ಅಧಿಕಾರಿಗಳು ಅವಕಾಶ ಮಾಡಿಕೊಡುತ್ತಾರೆ. ಈ ವರ್ಷ ಉತ್ತಮ ಮಳೆ ಯಾದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ರಾಗಿ ಇಳುವರಿ ಹೆಚ್ಚಾಗಿದ್ದು ಪ್ರತಿ ಎಕರೆಗೆ ಸರಾಸರಿ 20 ಕ್ವಿಂಟಲ್‌ಇಳುವರಿ ಬಂದಿದ್ದರೂ ತಾಲೂಕಿನ ಎಲ್ಲಾ ರೈತರು ಬೆಂಬಲ ಬೆಲೆ ಅವಕಾಶ ಸಿಗದೆ ಪರಿತಪಿಸುವಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ಹಿಂಗಾರು ಮತ್ತು ಮುಂಗಾರಿನಲ್ಲಿ ರಾಗಿ ಬೆಳೆದ ಎಲ್ಲಾ ರೈತರಿಗೂ ಬೆಂಬಲ ಬೆಲೆ ಯೋಜನೆಯಡಿ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ ಕೋವಿಡ್‌ ಕಾರಣದಿಂದ ಈ ಸಮಸ್ಯೆ ತಲೆದೋರಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದು, ಸದ್ಯದಲ್ಲಿಯೇ ಇದಕ್ಕೆ ಪರಿಹಾರ ಸಿಗಲಿದೆ. ಶ್ವೇತಾ ಎನ್‌.ರವೀಂದ್ರ, ತಹಶೀಲ್ದಾರ್‌

 

-ಪಿ.ಎನ್‌.ದೇವೇಗೌಡ

Advertisement

Udayavani is now on Telegram. Click here to join our channel and stay updated with the latest news.

Next