Advertisement

ಫೈನಲ್‌ಗೆ ಗುಜರಾತ್‌ ಟೈಟನ್ಸ್‌; ಮಿಲ್ಲರ್‌ ಆಕ್ರಮಣಕಾರಿ ಆಟಕ್ಕೆ ಸೋತ ರಾಜಸ್ತಾನ

12:32 AM May 25, 2022 | Team Udayavani |

ಕೋಲ್ಕತಾ: ಡೇವಿಡ್‌ ಮಿಲ್ಲರ್‌ ಅವರ ಆಕ್ರಮಣಕಾರಿ ಆಟ…, ಪಾಂಡ್ಯ, ಗಿಲ್‌, ವೇಡ್‌ ಅವರ ಸಹಕಾರದೊಂದಿಗೆ ಗುಜರಾತ್‌ ಟೈಟನ್ಸ್‌, ಚೊಚ್ಚಲ ಐಪಿಎಲ್‌ನಲ್ಲೇ ಫೈನಲ್‌ ಪ್ರವೇಶಿಸಿದೆ.

Advertisement

ಟಾಸ್‌ ಸೋತು, ಬ್ಯಾಟಿಂಗ್‌ಗೆ ಇಳಿದಿದ್ದ ರಾಜಸ್ಥಾನ ರಾಯಲ್ಸ್‌ ಜೋಸ್‌ ಬಟ್ಲರ್‌ ಅವರ ಅಮೋಘ 89 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 188 ರನ್‌ ಗಳಿಸಿತ್ತು. ಈ ಮೊತ್ತ ಬೆನ್ನತ್ತಿದ ಗುಜರಾತ್‌, ಇನ್ನೂ ಮೂರು ಎಸೆತ ಬಾಕಿ ಇರುವಂತೆಯೇ 7 ವಿಕೆಟ್‌ಗಳ ಜಯ ಗಳಿಸಿದೆ.

ರಾಜಸ್ಥಾನದ ಕಠಿಣ ಗುರಿ ಬೆನ್ನತ್ತಿದ್ದ ಗುಜರಾತ್‌ಗೆ ಮೊದಲ ಓವರ್‌ನಲ್ಲೇ ಆಘಾತ ಕಾದಿತ್ತು. ಎರಡನೇ ಎಸೆತದಲ್ಲೇ ಆರಂಭಿಕ ಆಟಗಾರ ವೃದ್ಧಿಮಾನ್‌ ಸಹಾ ಶೂನ್ಯಕ್ಕೆ ಔಟಾದರು. ಈ ವಿಕೆಟ್‌ ಬೌಲ್ಟ್ ಪಾಲಾಯಿತು.

ಆದರೆ, ನಂತರ ಬಂದು ಗಿಲ್‌ ಜತೆಗೆ ಕೂಡಿಕೊಂಡ ಮ್ಯಾಥ್ಯೂ ವೇಡ್‌ ಉತ್ತಮ ಜತೆಯಾಟ ಪ್ರದರ್ಶಿಸಿದರು. ತಂಡದ ಮೊತ್ತ 72 ರನ್‌ಗಳಾಗಿದ್ದಾಗ, ಕೊಂಚ ಗೊಂದಲದಿಂದಾಗಿ 35 ರನ್‌ ಗಳಿಸಿ ಚೆನ್ನಾಗಿ ಆಡುತ್ತಿದ್ದ ಗಿಲ್‌ ರನೌಟ್‌ ಆದರು. ಈ ವೇಳೆ ವೇಡ್‌ ಮೇಲೆ ಅಸಮಾಧಾನಗೊಂಡೇ ಗಿಲ್‌ ಪೆವಿಲಿಯನ್‌ ಸೇರಿದರು. ಬಳಿಕ 85 ರನ್‌ಗಳಾಗಿದ್ದಾಗ ಮ್ಯಾಥ್ಯೂ ವೇಡ್‌ ಕೂಡ ಮೆಕೇಗೆ ವಿಕೆಟ್‌ ಒಪ್ಪಿಸಿದರು. ಆಗ ಅವರ ಮೊತ್ತ 35 ರನ್‌ಗಳಾಗಿತ್ತು. ಇವರಿಬ್ಬರ ಬಳಿಕ ಕ್ರೀಸ್‌ಗೆ ಬಂದ ನಾಯಕ ಹಾರ್ದಿಕ್‌ ಪಾಂಡ್ಯ ಮತ್ತು ಡೆವಿಡ್‌ ಮಿಲ್ಲರ್‌ ಇನ್ನಿಂಗ್ಸ್‌ ಕಟ್ಟತೊಡಗಿದರು. ಇವರಿಬ್ಬರ ಜತೆಯಾಟದಲ್ಲಿ 61 ಎಸೆತಗಳಲ್ಲಿ 106 ರನ್‌ ಬಂದವು. ಕಡೇ ಓವರ್‌ನಲ್ಲಿ 16 ರನ್‌ ಬೇಕಿತ್ತು. ಆಗ ಕ್ರೀಸ್‌ನಲ್ಲಿದ್ದ ಮಿಲ್ಲರ್‌ ಸತತ ಮೂರು ಸಿಕ್ಸ್‌ ಬಾರಿಸಿ ತಂಡವನ್ನು ಗೆಲುವಿನ ದಡ ಹತ್ತಿಸಿದರು. ಈ ಇನ್ನಿಂಗ್ಸ್‌ನಲ್ಲಿ ಮಿಲ್ಲರ್‌ 38 ಎಸೆತಗಳಲ್ಲಿ 5 ಸಿಕ್ಸರ್‌, 3 ಬೌಂಡರಿಗಳ ಸಹಾಯದೊಂದಿಗೆ 68 ರನ್‌ ಗಳಿಸಿದರು. ಪಾಂಡ್ಯ 27 ಎಸೆತಗಳಲ್ಲಿ 40 ರನ್‌ ಹೊಡೆದರು.

ಮಿಂಚಿದ ಬಟ್ಲರ್‌: ಪ್ರಸಕ್ತ ಐಪಿಎಲ್‌ನಲ್ಲಿ ಅತ್ಯಮೋಘ ಬ್ಯಾಟಿಂಗ್‌ ಪ್ರದರ್ಶಿಸುತ್ತಿರುವ ರಾಜಸ್ಥಾನ ರಾಯಲ್ಸ್‌ನ ಜೋಸ್‌ ಬಟ್ಲರ್‌ ಮತ್ತೂಮ್ಮೆ ಸಿಡಿದಿದ್ದಾರೆ. ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ 56 ಎಸೆತಗಳಲ್ಲಿ 89 ರನ್‌ ಗಳಿಸಿ, ರಾಜಸ್ಥಾನ 6 ವಿಕೆಟ್‌ಗೆ 188 ರನ್‌ ಪೇರಿಸುವಲ್ಲಿ ನೆರವಾದರು.

Advertisement

ರಾಜಸ್ಥಾನ 11 ರನ್‌ ಗಳಿಸಿದ್ದಾಗ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಅವರು ಯಶ್‌ ದಯಾಳ್‌ಗೆ ವಿಕೆಟ್‌ ಒಪ್ಪಿಸಿದರು. ಆಗ ಬಟ್ಲರ್‌ಗೆ ನಾಯಕ ಸಂಜು ಸ್ಯಾಮ್ಸನ್‌ ಜತೆಯಾದರು. ಇವರಿಬ್ಬರು ಎರಡನೇ ವಿಕೆಟ್‌ಗೆ 68 ರನ್‌ ಪೇರಿಸಿದರು. ಇದರಲ್ಲಿ ಬಟ್ಲರ್‌ 15 ರನ್‌, ಸ್ಯಾಮ್ಸನ್‌ 46 ರನ್‌ ಗಳಿಸಿದರು. ತಂಡದ ಮೊತ್ತ 79 ಆಗಿದ್ದಾಗ ಹೊಡಿಬಡಿ ಆಟವಾಡುತ್ತಿದ್ದ ಸ್ಯಾಮ್ಸನ್‌, ಸಾಯಿ ಕಿಶೋರ್‌ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಬಳಿಕ ಬಂದ ಪಡಿಕ್ಕಲ್‌ ಕೂಡ 28 ರನ್‌ ಗಳಿಸಿ ಔಟಾದರು. ಇನ್ನೊಂದು ಕಡೆ ಗಟ್ಟಿಯಾಗಿ ನಿಂತು ಆಟವಾಡುತ್ತಿದ್ದ ಬಟ್ಲರ್‌, ಪಡಿಕ್ಕಲ್‌ ಔಟಾದ ಮೇಲೆ ಗರ್ಜಿಸತೊಡಗಿದರು. ಕಡೆಗೆ 12 ಫೋರ್‌, 2 ಸಿಕ್ಸರ್‌ ನೆರವಿನಿಂದ 56 ಎಸೆತಗಳಲ್ಲಿ 89 ರನ್‌ ಗಳಿಸಿ 19ನೇ ಓವರ್‌ನ 5ನೇ ಎಸೆತದಲ್ಲಿ ರನ್‌ ಔಟ್‌ ಆದರು. ಗುಜರಾತ್‌ ಪರ ಶಮಿ, ಯಶ್‌ ದಯಾಳ್‌, ಸಾಯಿ ಕಿಶೋರ್‌, ಹಾರ್ದಿಕ್‌ ಪಾಂಡ್ಯ ತಲಾ ಒಂದು ವಿಕೆಟ್‌ ಪಡೆದರು.

ಪವರ್‌ಪ್ಲೇನಲ್ಲಿ ಉತ್ತಮ ಆಟ
ರಾಜಸ್ಥಾನ ಪವರ್‌ ಪ್ಲೇನಲ್ಲಿ ಉತ್ತಮ ಆಟ ಪ್ರದರ್ಶಿಸಿತು. ಈ ಅವಧಿಯಲ್ಲಿ ಒಂದು ವಿಕೆಟ್‌ ಕಳೆದುಕೊಂಡು 55 ರನ್‌ ಗಳಿಸಿತು. ಹಾಗೆಯೇ 13.1 ಓವರ್‌ನಲ್ಲಿ 100 ರನ್‌ ದಾಟಿದರೆ, ಉಳಿದ ಏಳು ಓವರ್‌ನಲ್ಲಿ 89 ರನ್‌ ಬಂದಿತು. ಬೌಲರ್‌ಗಳ ಕಡೆಯಿಂದ ರಶೀದ್‌ ಖಾನ್‌ ವಿಕೆಟ್‌ ಪಡೆಯದಿದ್ದರೂ, ರನ್‌ ಹೆಚ್ಚು ನೀಡಲಿಲ್ಲ. ಇವರು 4 ಓವರ್‌ಗಳಲ್ಲಿ ಕೇವಲ 15 ರನ್‌ ಮಾತ್ರ ಕೊಟ್ಟರು. ಆದರೆ, 4 ಓವರ್‌ಗಳಲ್ಲಿ ಶಮಿ 43 ರನ್‌, ದಯಾಳ್‌ 46, ಸಾಯಿ ಕಿಶೋರ್‌ 43 ರನ್‌ ಬಿಟ್ಟುಕೊಟ್ಟರು. ಹಾರ್ದಿಕ್‌ ಪಾಂಡ್ಯ 2 ಓವರ್‌ ಎಸೆದು 1 ವಿಕೆಟ್‌ ಪಡೆದದ್ದು ವಿಶೇಷ.

ಪ್ರಸಕ್ತ ಐಪಿಎಲ್‌ನಲ್ಲಿ ಜೋಸ್‌ ಬಟ್ಲರ್‌ ಅವರ ಬ್ಯಾಟಿಂಗ್‌ ಬಗ್ಗೆ ಯಾರು ಮಾತನಾಡುವಂತೆ ಇಲ್ಲವೇ ಇಲ್ಲ. ಏಕೆಂದರೆ, ಒಟ್ಟು 15 ಪಂದ್ಯಗಳನ್ನಾಡಿರುವ ಬಟ್ಲರ್‌ ಈ ಪಂದ್ಯವೂ ಸೇರಿ ಒಟ್ಟು 718 ರನ್‌ ಗಳಿಸಿದ್ದಾರೆ. ಇದರಲ್ಲಿ ಮೂರು ಶತಕ, ನಾಲ್ಕು ಅರ್ಧಶತಕ ಸೇರಿವೆ ಎಂಬುದು ವಿಶೇಷ. 116 ರನ್‌ ಅತಿ ಹೆಚ್ಚು, ಆವರೇಜ್‌ 51.29 ಇದೆ. ಇಡೀ ಪಂದ್ಯಾವಳಿಯಲ್ಲಿ 39 ಸಿಕ್ಸ್‌, 68 ಬೌಂಡರ್‌ಗಳನ್ನೂ ಬಾರಿಸಿದ್ದಾರೆ.

ಅಹ್ಮದಾಬಾದ್‌ನಲ್ಲಿ ಫೈನಲ್‌
ಮೊದಲ ಕ್ವಾಲಿಫೈಯರ್‌ ಕೋಲ್ಕತಾದಲ್ಲಿ ನಡೆದಿದ್ದು, ಫೈನಲ್‌ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಲ್ಲದೆ, ಮೊದಲ ಕ್ವಾಲಿಫೈಯರ್‌ನಲ್ಲಿ ಸೋತಿದ್ದರೂ, ರಾಜಸ್ಥಾನಕ್ಕೆ ಇನ್ನೊಂದು ಅವಕಾಶವಿದೆ. ಬುಧವಾರ ಬೆಂಗಳೂರು ಮತ್ತು ಲಕ್ನೋ ನಡುವೆ ಎಲಿಮಿನೇಟರ್‌ ಪಂದ್ಯ ನಡೆಯಲಿದ್ದು, ಇದರಲ್ಲಿ ಗೆದ್ದವರು ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ ಎದುರಿಸಲಿದ್ದಾರೆ. ಹೀಗಾಗಿ, ಸಂಜು ಸ್ಯಾಮ್ಸನ್‌ ತಂಡ ನಿರಾಸೆಯಾಗಬೇಕಾಗಿಲ್ಲ.

ಸಂಕ್ಷಿಪ್ತ ಸ್ಕೋರ್‌
ರಾಜಸ್ಥಾನ ರಾಯಲ್ಸ್‌: 188/6, 20 ಓವರ್‌(ಜೋಸ್‌ ಬಟ್ಲರ್‌ 89, ಸಂಜು ಸ್ಯಾಮ್ಸನ್‌ 47, ಪಾಂಡ್ಯ 14/1). ಗುಜರಾತ್‌ ಟೈಟನ್ಸ್‌: 191/2, 20 ಓವರ್‌(ಡೆವಿಡ್‌ ಮಿಲ್ಲರ್‌ 68, ಹಾರ್ದಿಕ್‌ ಪಾಂಡ್ಯ 40, ಬೌಲ್ಟ್ 38/1). ಗುಜರಾತ್‌ಗೆ 7 ವಿಕೆಟ್‌ಗಳ ಗೆಲುವು.

Advertisement

Udayavani is now on Telegram. Click here to join our channel and stay updated with the latest news.

Next