Advertisement

ಮಿಲೇನಿಯಲ್ಸ್‌ , ತಂತ್ರಜ್ಞಾನ ಮತ್ತು ಜೀವನ ಶೈಲಿ

09:57 AM Jan 03, 2020 | mahesh |

ನಮ್ಮ ಜೀವನ ಶೈಲಿ ರೂಪಾಂತರಗೊಳ್ಳುತ್ತಿದೆ. ನಿನ್ನೆ ಇದ್ದ ಹಾಗೆ ನಾವು ಇವತ್ತು ಇಲ್ಲ. ಇವತ್ತು ಇದ್ದ ಹಾಗೆ ನಾವು ನಾಳೆ ಇರುವುದಿಲ್ಲ. ನಮ್ಮ ಬದುಕುವ ರೀತಿ, ನೀತಿ ಪ್ರತಿ ಕ್ಷಣಕ್ಕೂ ಬದಲಾಗುತ್ತಿದೆ. ಬದಲಾಗಬೇಕಾಗಿದೆ. ಇಲ್ಲದಿದ್ದರೆ ಜಗತ್ತೇ ನಮ್ಮನ್ನು ಬದಲಿಸುತ್ತದೆ.

Advertisement

ಮಿಲೇನಿಯಲ್ಸ್‌ ಯಾರು?
ಸರಳ ರೀತಿಯಲ್ಲಿ ವಿವರಿಸುವುದಾದರೆ ಇವರು 2000ನೇ ಇಸವಿಯ ನಂತರದಲ್ಲಿ ಜನಿಸಿದ ಯುವ ಜನರು. ಆರ್ಥಿಕಾಭಿವೃದ್ಧಿ, ಜಾಗತೀಕರಣದ ನಂತರದ ಎಲ್ಲ ಲಾಭವನ್ನು ಉಂಡು ಅನುಭವಿಸುತ್ತಿರುವ ವರ್ಗ. 1980-90ರವರೆಗಿನ ಆರ್ಥಿಕ ಸ್ಥಿತಿಯೇ ಬೇರೆ ಇತ್ತು. ಮೊಬೈಲ್‌ ಕೈಯಲ್ಲಿರಲಿಲ್ಲ. ಎಟಿಎಂ ಕಾರ್ಡ್‌ ಇಲ್ಲ. ಎಲ್ಲಾ ನಗದು ವ್ಯವಹಾರ, ಅಂದಿನ ಜೀವನ ಶೈಲಿಯೇ ಬೇರೆ. ಅದನ್ನು ಈ ಮಿಲೇನಿಯಲ್ಸ್‌ನವರಲ್ಲಿ ಹೇಳಿಕೊಂಡರೆ ಅದು ಸುಳ್ಳು, ನಂಬಲಸಾಧ್ಯವಾದದ್ದು ಎಂದು ವಾದಿಸಬಹುದು. ಇವರನ್ನು ಜನರೇಶನ್‌-ಎಂದು ಕರೆಯುವುದುಂಟು. ಹಾಗಾದ್ರೆ ಜನರೇಶನ್‌-ಗಿಯಾರು? 1960-80ರ ದಶಕದಲ್ಲಿ ಹುಟ್ಟಿ ಬೆಳೆದವರು.

ವ್ಯತ್ಯಾಸ ಏನು?
ಈಗಿನ ಮಿಲೇನಿಯಲ್ಸ್‌ ಮತ್ತು ಅದಕ್ಕೂ ಹಿಂದೆ ಜನಿಸಿದ ವರ್ಗಕ್ಕೆ ವ್ಯತ್ಯಾಸವಾದರೂ ಏನು? ಈ ಯುವ ಜನರು ಆಧುನಿಕ ತಂತ್ರಜ್ಞಾನವನ್ನು ಅತೀ ವೇಗದಲ್ಲಿ ಬಳಸಿಕೊಳ್ಳುವುದರಲ್ಲಿ ಎತ್ತಿದ ಕೈ. ಈ ವರ್ಗದ ಜನರು ಯಾವುದೇ ವೇಳಾಪಟ್ಟಿಗೆ ಕೆಲಸವನ್ನು ನಿರ್ವಹಿಸಲು ತಯಾರು. ಇವರು ಹಣ, ಹೆಸರು , ಇಮೇಜ್‌ಗೆ ಹೆಚ್ಚು ಪ್ರಾಶಸ್ತ್ಯ ನೀಡುವವರು. ಮೊಬೈಲ್‌, ಇಂಟರ್‌ನೆಟ್‌ಗಳ ವ್ಯಾಪಕ ಬಳಕೆದಾರರು. ಮೊಬೈಲ್‌ ಇಲ್ಲದೆ ಒಂದು ಕ್ಷಣವೂ ಇರಲಾರರು. ಸೋಶಿಯಲ್‌ ಮೀಡಿಯಾಕ್ಕೆ ಹೆಚ್ಚು ಅಂಟಿಕೊಂಡವರು. ಜಟಿಲ ಪ್ರಶ್ನೆಗೆ ಉತ್ತರ ಸಿಗದಿದ್ದರೆ ಸರಿಯಾದ ಉತ್ತರವನ್ನು ಎಲ್ಲಿಂದ ಪಡೆಯಬೇಕೆಂಬ ಪರಿಜ್ಞಾನ ಇರುವವರು. ಸಮಸ್ಯೆಗೆ ಉತ್ತರವನ್ನು let me google for you ಎನ್ನುವ ವರ್ಗ. ಇವರ ವರ್ಗವೇ ಇವತ್ತು ಸಿಟಿಬಸ್‌ನಿಂದ ಹಿಡಿದು ಮಾಲ್‌ ನ ವರೆಗೂ ಕಾಣಸಿಗುವವರು. ಇವರು ತಮ್ಮ ಜೀವನವನ್ನು ನೋಡುವ ದೃಷ್ಟಿಯೇ ಬೇರೆಯದ್ದು. ಹಿಂದಿನ ತಲೆಮಾರಿನಂತವರಲ್ಲ. ಸಾಮಾಜಿಕ ತಾಣದಲ್ಲಿ ಬಹಳವಾಗಿ ಹಬ್ಬಿಕೊಂಡಿರುವ ಈ ವರ್ಗ ತಾವು ಬೆಳಗ್ಗೆ ಎದ್ದಂದಿನಿಂದ ನಾವು ಏನನ್ನು ತಿಂದೆವು? ಏನು ಮಾಡುತ್ತಿದ್ದೇವೆ ? ಮುಂದೆ ಏನು ಮಾಡಲಿರುವೆವು ? ಹೀಗೆ ಇಡೀ ದಿನದ ದಿನಚರಿಯನ್ನು ಜಗತ್ತಿಗೇ ತಿಳಿಸುವವರು. ತಂತ್ರಜ್ಞಾನದ ಈ ಲಾಭವನ್ನು ನೋಡಿ ಹಿಂದಿನ ತಲೆಮಾರಿನವರ ಆಧುನಿಕ ತಂತ್ರಜ್ಞಾನದ ವ್ಯಾಪಕ ಬಳಕೆಯತ್ತ ಪ್ರಯತ್ನ ಸಾಗಿದೆ. ಮೈಲ್‌ ಚೆಕ್‌ ಮಾಡುವುದು, ವಸ್ತುಗಳನ್ನು ಆನ್‌ಲೈನ್‌ನಲ್ಲಿ ಕೊಳ್ಳುವುದು, ಭಾವಚಿತ್ರ ತೆಗೆಯುವುದು ಇತ್ಯಾದಿ . ಮನೆಯೊಳಗೇ ಕುಳಿತು ಜಗತ್ತಿನ ಯಾವುದೇ ಮೂಲೆಯಲ್ಲಿ ಏನಾಗುತ್ತದೆ ಎಂದು ತಿಳಿದುಕೊಳ್ಳುವ ಹಂಬಲ. ಹಿಂದಿನ ತಲೆಮಾರಿನವರಿಗೆ ದಿನದ ಆಗುಹೋಗುಗಳ ವಿಷಯವನ್ನು ತಿಳಿದಾಗ ಈ ಮಿಲೇನಿಯಲ್ಸ್‌ ವರ್ಗದ ಜನರಿಗೆ ಈ ವಿಷಯ ಹಳತು. ಡಿಜಿಟಲ್‌ ಇಂಡಿಯಾದ ಕನಸು ನನಸು ಮಾಡುವವರೇ ಈ ವರ್ಗದ ಯುವಜನರು.

ಪಾರದರ್ಶಕ ಆರ್ಥಿಕತೆಯತ್ತ ದೇಶವನ್ನು ಕೊಂಡೊಯ್ಯಲಿರುವ ವರ್ಗ. ಉದ್ಯೋಗವನ್ನು ಬದಲಿಸುವ ಅಭ್ಯಾಸ ಇವರದ್ದು. ಉದ್ಯೋಗಕ್ಕೆ ಸೇರಿದ ನಂತರ ನಿಧಾನವಾಗಿ ಉತ್ತಮ ಭವಿಷ್ಯವಿರುವ ಉದ್ಯೋಗವನ್ನು ಹರಸುತ್ತಾ ಹೋಗುವವರು. ಈ ಯುಗದಲ್ಲಿ ಯುವಜನರಿಗೆ ಉದ್ಯೋಗಿಗಳ ಭರವಸೆಯೂ ಇಲ್ಲ. ಸಿಕ್ಕಿದ ಉದ್ಯೋಗದಲ್ಲಿ ಆದಷ್ಟು ದುಡಿಯುವ ಮುಂದೇನೋ? ಹಿಂದಿನ ತಲೆಮಾರಿನವರು ಹಾಗಿಲ್ಲ. ಒಂದು ಕೆಲಸಕ್ಕೆ ಸೇರಿದರೆ ಅದೇ ಕೆಲಸದಲ್ಲಿ ನಿವೃತ್ತಿಯನ್ನು ಹೊಂದುವವರು. ನಾವೆಲ್ಲಾದರೂ 20-30 ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿದೆನೆಂದು ಹೇಳಿಕೊಂಡರೆ ಅಬ್ಟಾ! ಎಂದು ಹುಬ್ಬೇರಿಸುವುದುಂಟು. ತಮ್ಮಿಂದ ಅಸಾಧ್ಯ ಎನ್ನುವುದುಂಟು. ಇವರಿಗೆ ಮನೆ ಮಾಲಿಕತ್ವದ ಮೋಹವಿಲ್ಲ. ವಾಹನಗಳನ್ನು ಹೊಂದುವುದರ ಬಗ್ಗೆಯೂ ಆಸಕ್ತಿ ಇಲ್ಲ. ಈ ಕಾರಣಕ್ಕಾಗಿಯೇ ಉಬರ್‌, ಓಲಾ, ಬೈಕ್‌ ಸೇವೆ ಹೆಚ್ಚೆಚ್ಚು ಜನಪ್ರಿಯವಾಗುತ್ತಿದೆ. ಇವರಿಗೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇದೆ. ಈ ವರ್ಗದ ಜನರು ನಮಗಿಂದು ಎಲ್ಲೆಲ್ಲೂ ಕಾಣಸಿಗುತ್ತಾರೆ.

ಜಗತ್ತಿನ ಒಟ್ಟು 7.4 ಬಿಲಿಯನ್‌ ಜನಸಂಖ್ಯೆಯಲ್ಲಿ ಶೇ. 27 (440 ಮಿಲಿಯನ್‌) ಮಿಲೇನಿಯಲ್ಸ್‌ ಗಳಿಸಿದ ಹಣದಲ್ಲಿ ಖರ್ಚು ಮಾಡುವುದೇ ಹೆಚ್ಚು. ಉಳಿತಾಯದ ಪ್ರಮಾಣ ಕಡಿಮೆ. ಆದರೆ ಹಿಂದಿನ ತಲೆಮಾರಿನವರು ಹಾಗಿಲ್ಲ. ದುಡಿದ ಹಣವನ್ನು ಉಳಿತಾಯ ಮಾಡುವವರು. ಖರ್ಚು ಕಡಿಮೆ ಮಾಡುವವರು. ಈ ಅಂಶವನ್ನು ಅವಲೋಕಿಸುವಾಗ ನಮ್ಮ ಮಿಲೇನಿಯಲ್ಸ್‌ ಯುವ ಜನರು ಗಳಿಸಿದ ಹಣದಲ್ಲಿ ಹೆಚ್ಚಿನ ಹಣವನ್ನು ಖರ್ಚು ಮಾಡುವ ಮೂಲಕ ದೇಶದ ಅಭಿವೃದ್ಧಿಗೂ ಕಾರಣವಾಗುತ್ತಾರೆ. ಖರ್ಚು ಹೆಚ್ಚಿದರೆ ಬೇಡಿಕೆ ಏರುತ್ತದೆ. ದೇಶದ ಆಂತರಿಕ ಉತ್ಪನ್ನ ಹೆಚ್ಚುತ್ತದೆ. ದೇಶದ ಆರ್ಥಿಕ ನೀತಿಗಳು, ಕಾರ್ಪೊರೇಟ್‌ಗಳು ಉತ್ಪಾದಿಸುವ ವಸ್ತುಗಳೆಲ್ಲವೂ ಮಿಲೇನಿಯಲ್ಸ್‌ ವರ್ಗವನ್ನು ಗಮನದಲ್ಲಿಟ್ಟುಕೊಂಡು ರೂಪಿಸಬೇಕಾದ ಕಾಲ ಬಂದಿದೆ.

Advertisement

ಬೆಳವಣಿಗೆಗೆ, ಅಭಿವೃದ್ಧಿಗೆ ಬದಲಾವಣೆಯೊಂದೇ ದಾರಿ. ಬದಲಾಗುತ್ತಿರುವ ನಮ್ಮ ಯುವ ಜನರ ರೀತಿ ನೀತಿ ದೇಶವನ್ನು ಸುಸ್ಥಿತಿಯತ್ತ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ.

– ಡಾ| ರಾಘವೇಂದ್ರ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next