Advertisement

ಕ್ಷೀರ ಕ್ರಾಂತಿಯ ಹರಿಕಾರ ಡಾ|ಕುರಿಯನ್‌

06:33 PM Nov 26, 2021 | Team Udayavani |
ಡಿ. ಎಸ್‌. ಹೆಗಡೆ, ಮಂಗಳೂರುಗುಜರಾತ್‌ನ ಅಮೂಲ್‌ ಡೈರಿಯಿಂದ ರೈಲು ಟ್ಯಾಂಕರ್‌ಗಳ ಮೂಲಕ ಪಶ್ಚಿಮ ಬಂಗಾಲದ ಕಲ್ಕತ್ತಾಕ್ಕೆ ಹಾಲನ್ನು ರವಾನಿಸುವ ಪ್ರತ್ಯೇಕ "ಕ್ಷೀರವಾಹಿನಿ' ಆರಂಭಿಸಿದ ಕೀರ್ತಿ ಡಾ| ಕುರಿಯನ್‌ಗೆ ಸಲ್ಲುತ್ತದೆ. ಸಹಕಾರಿ ಮಾದರಿಯಲ್ಲಿ ರೈತರಿಂದ, ರೈತರಿಗಾಗಿ, ರೈತರೇ ಸ್ಥಾಪಿಸಿದ ಪ್ರಾಥಮಿಕ ಹಾಲು ಉತ್ಪಾದಕರ ಸಂಘ ಮತ್ತು ಜಿಲ್ಲಾ ಹಾಲು ಒಕ್ಕೂಟ ಹಾಗೂ ಮಾರುಕಟ್ಟೆ ಮಹಾ ಮಂಡಳ ಹೀಗೆ ತ್ರಿಸ್ತರದ ವ್ಯವಸ್ಥೆಯನ್ನು ರೂಪಿಸಿ ಮಹಾತ್ಮಾ ಗಾಂಧೀಜಿ ಅವರ ಕನಸಾದ ಗ್ರಾಮೀಣ ಭಾರತದ ಜನಸಾಂದ್ರತೆಯ ಮಾನವೀಯ ಶಕ್ತಿಗಳನ್ನು ದ್ರುವೀಕರಿಸಿ
Now pay only for what you want!
This is Premium Content
Click to unlock
Pay with

ಸ್ವಾತಂತ್ರ್ಯೋತ್ತರ ಭಾರತವು ಸಾಧಿಸಿದ ಮಹತ್ಸಾಧನೆ ಗಳಲ್ಲಿ ಕ್ಷೀರ ಕ್ರಾಂತಿಯು ಅವಿಸ್ಮರಣೀಯವಾದದ್ದು. ಈ ಮಹತ್ಸಾಧನೆಯ ಹಿಂದಿನ ಶಕ್ತಿ ಡಾ| ವರ್ಗೀಸ್‌ ಕುರಿಯನ್‌. ತಮ್ಮ ಅದ್ಭುತ ಇಚ್ಛಾಶಕ್ತಿಯಿಂದ ಕ್ಷೀರೋತ್ಪಾದನೆಯಲ್ಲಿ ಭಾರತವನ್ನು ಸರ್ವಶ್ರೇಷ್ಠ ರಾಷ್ಟ್ರವನ್ನಾಗಿ ನಿರ್ಮಿಸಿದ ಇವರು ದೇಶದ “ಕ್ಷೀರ ಪಿತಾಮಹ’ ಎಂದೇ ಖ್ಯಾತರಾಗಿದ್ದಾರೆ.

Advertisement

1921ರ ನ. 26 ರಂದು ಕೇರಳದ ಕೋಯಿಕ್ಕೋಡ್‌ನ‌ಲ್ಲಿ ಕ್ರೈಸ್ತ ಸಿರಿಯನ್‌ ಕುಟುಂಬದಲ್ಲಿ ಜನಿಸಿದ ಕುರಿಯನ್‌ ತಮ್ಮ 22ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ತಮ್ಮ ಸೋದರ ಸಂಬಂಧಿಯಾದ ಮ್ಯಾಥ್ಯೂ ಅವರ ಆಶ್ರಯದಲ್ಲಿ ಬೆಳೆದರು. ಆರಂಭ ದಲ್ಲಿ ಮದ್ರಾಸಿನ ಲೊಯೆಲೋ ಕಾಲೇಜಿನಲ್ಲಿ, ಅನಂತರ ಗಿಂಡಿ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿ 1943ರಲ್ಲಿ ಮೆಕ್ಯಾನಿಕಲ್‌ ಎಂಜಿನಿಯ ರಿಂಗ್‌ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದರು. ಓರ್ವ ಉತ್ತಮ ಕುಸ್ತಿಪಟುವಾಗಿದ್ದ ಇವರಿಗೆ ಭಾರ ತೀಯ ಸೈನ್ಯ ಸೇರಬೇಕೆಂಬ ಅಭಿಲಾಷೆ ಇತ್ತಾದರೂ ತಾಯಿಯ ಆಶಯದಂತೆ ಜಮ್‌ಶೆಡ್‌ಪುರದ ಟಾಟಾ ಸ್ಟೀಲ್‌ ಕಂಪೆನಿಗೆ ಸೇರ್ಪಡೆಗೊಂಡರು. ಆದರೆ ಕೆಲವೇ ಸಮಯದಲ್ಲಿ ಭಾರತ ಸರಕಾರದಿಂದ ಉಚ್ಚ ವ್ಯಾಸಂಗಕ್ಕೆ ಶಿಷ್ಯ ವೇತನ ಪಡೆದು ಡೈರಿ ಎಂಜಿನಿಯರಿಂಗ್‌ ವಿದ್ಯಾಭ್ಯಾಸಕ್ಕೆ ಸೇರಿದರು. ಮುಂದೆ ಬೆಂಗಳೂರಿನ ಎನ್‌ಡಿಆರ್‌ಐ ಸಂಸ್ಥೆಯಲ್ಲಿ 9 ತಿಂಗಳು ಅಭ್ಯಸಿಸಿದ ಬಳಿಕ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ತೆರಳಿದರು. ಅಮೆರಿಕದ ಮಿಚಿಗನ್‌ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪೂರೈಸಿದ ಕುರಿಯನ್‌ ಅವರ ಮನ ಮತ್ತೆ ತಾಯ್ನಾಡ ಸೇವೆಗಾಗಿ ತುಡಿಯುತ್ತಿತ್ತು. ಆದರೂ ತಮ್ಮ ಸೋದರ ಮಾವನ ಇಚ್ಛೆಯಂತೆ ಮತ್ತೆ ಡೈರಿ ತಾಂತ್ರಿಕ ವಿಷಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನ್ಯೂಜಿಲೆಂಡ್‌ಗೆ ತೆರಳಿದರು.

ಸರಕಾರದ ಶಿಷ್ಯ ವೇತನದ ಕಾರಣದಿಂದ ಕೆಲವು ಕಾಲ ಗುಜರಾತಿನ ಸರಕಾರಿ ಡೈರಿ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆಯ ವೇಳೆ, ಇವರ ಪ್ರಾಮಾಣಿಕತೆ ಮತ್ತು ದಿಟ್ಟ ನಿಲುವನ್ನು ಗುರುತಿಸಿದ ಅಂದಿನ ಜನಪ್ರತಿನಿಧಿಗಳಾದ ತ್ರಿಭುವನ ದಾಸ್‌ ಪಟೇಲ್‌ ಮತ್ತು ಸರದಾರ ವಲ್ಲಭಭಾಯಿ ಪಟೇಲರು ಕುರಿಯನ್‌ ಅವರನ್ನು 1948ರಲ್ಲಿ ಆನಂದ್‌ ಸಹಕಾರಿ ಕ್ಷೀರಾಂದೋಲನಕ್ಕೆ ಆಹ್ವಾನಿಸಿದರು.

ಅದೇ ವೇಳೆಗೆ ಗುಜರಾತ್‌ ರಾಜ್ಯದ ಖೇಡಾ ಜಿಲ್ಲೆಯ ಆನಂದ್‌ ಪ್ರದೇಶದಲ್ಲಿ ಪಿಸ್ತೂಲ್‌ಜಿ ಎಡುಲ್‌ಜಿ ಪಾಲ್ಸನ್‌ ಎಂಬ ಪಾರ್ಸಿ ವ್ಯಾಪಾರಿ ಹಾಲು ವ್ಯಾಪಾರ ನಡೆಸುತ್ತಿದ್ದ. ಹಾಲು ಉತ್ಪಾದಕರು ಇವನ ಶೋಷಣೆಯಿಂದ ಬಸವಳಿದಿದ್ದರು. ಹಾಲಿನ ಅಧಿಕ ಉತ್ಪಾದನೆಯ ವೇಳೆ ನಿರಾಕರಿಸಲ್ಪಟ್ಟ ಹಾಲಿನಿಂದ ರೈತರಿಗೆ ಅಪಾರ ನಷ್ಟವಾಗುತ್ತಿತ್ತು. ಇದನ್ನು ಮನಗಂಡ ಡಾ| ತ್ರಿಭುವನ ದಾಸ್‌ ಪಟೇಲರು ಕುರಿಯನ್‌ ಅವರ ಸಹಕಾರದೊಂದಿಗೆ “ಕೈರಾ ಜಿಲ್ಲೆ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ’ ಎಂಬ ಸಂಸ್ಥೆಯನ್ನು ಆರಂಭಿಸಿದರು. ಇದು ಮುಂದೆ “ಅಮೂಲ್‌’ ಎಂಬ ಅಭಿದಾನ ಪಡೆದು ಜಗತøಸಿದ್ಧವಾಯಿತು.

ಎಮ್ಮೆ ಹಾಲು ಆಧಿಕವಾಗಿ ಉತ್ಪಾದಿಸಲ್ಪಡುತ್ತಿದ್ದ ಅಂದಿನ ಕಾಲದಲ್ಲಿ ಆ ಹಾಲಿನಿಂದ ಹಾಲಿನ ಪುಡಿ ತಯಾರಿಸುವ ವಿಧಾನ ದೇಶದಲ್ಲಿ ಎಲ್ಲಿಯೂ ಪ್ರಚಲಿತದಲ್ಲಿರಲಿಲ್ಲ. ವಿಶ್ವದ ಎಲ್ಲ ದೇಶಗಳು ಇದು ಅಸಾಧ್ಯ ಎಂದು ತಲೆಯಾಡಿಸಿದರೂ ವಿಚಲಿತರಾಗದ ಕುರಿಯನ್‌ ಎಮ್ಮೆ ಹಾಲಿನಿಂದ ಹಾಲು ಪುಡಿ ತಯಾ ರಿಸುವ ಘಟಕವನ್ನು ಅಮೂಲ್‌ನಲ್ಲಿ ಪ್ರಾರಂಭಿಸಿ, ಅಂದಿನ ಮಾರುಕಟ್ಟೆ ದೊರೆಗಳಾದ ನೆಸ್ಲೇ, ಗ್ಲಾಕೊÕà ಮುಂತಾದ ಪ್ರಖ್ಯಾತ ಕಂಪೆನಿಗಳಿಗೆ ಸಡ್ಡು ಹೊಡೆದರು. ಈ ಪುಡಿಯನ್ನು ಭಾರತದ ಸೈನಿಕ ವಲಯಕ್ಕೂ ಪೂರೈಸಿ ಪ್ರತಿಸ್ಪರ್ಧಿಗಳು ಹುಬ್ಬೇರಿಸುವಂತೆ ಮಾಡಿದರು.

Advertisement

ಗುಜರಾತ್‌ನ ಅಮೂಲ್‌ ಡೈರಿಯಿಂದ ರೈಲು ಟ್ಯಾಂಕರ್‌ಗಳ ಮೂಲಕ ಪಶ್ಚಿಮ ಬಂಗಾಲದ ಕಲ್ಕತ್ತಾಕ್ಕೆ ಹಾಲನ್ನು ರವಾನಿಸುವ ಪ್ರತ್ಯೇಕ “ಕ್ಷೀರವಾಹಿನಿ’ ಆರಂಭಿಸಿದ ಕೀರ್ತಿ ಡಾ| ಕುರಿಯನ್‌ಗೆ ಸಲ್ಲುತ್ತದೆ. ಸಹಕಾರಿ ಮಾದರಿಯಲ್ಲಿ ರೈತರಿಂದ, ರೈತರಿಗಾಗಿ, ರೈತರೇ ಸ್ಥಾಪಿಸಿದ ಪ್ರಾಥಮಿಕ ಹಾಲು ಉತ್ಪಾದಕರ ಸಂಘ ಮತ್ತು ಜಿಲ್ಲಾ ಹಾಲು ಒಕ್ಕೂಟ ಹಾಗೂ ಮಾರುಕಟ್ಟೆ ಮಹಾ ಮಂಡಳ ಹೀಗೆ ತ್ರಿಸ್ತರದ ವ್ಯವಸ್ಥೆಯನ್ನು ರೂಪಿಸಿ ಮಹಾತ್ಮಾ ಗಾಂಧೀಜಿ ಅವರ ಕನಸಾದ ಗ್ರಾಮೀಣ ಭಾರತದ ಜನಸಾಂದ್ರತೆಯ ಮಾನವೀಯ ಶಕ್ತಿಗಳನ್ನು ದ್ರುವೀಕರಿಸಿ ಭಾರತವನ್ನು ವಿಶ್ವದ ಕ್ಷೀರಭೂಪಟದಲ್ಲಿ ಪ್ರಥಮ ಸ್ಥಾನಕ್ಕೆ ತಂದ ಕೀರ್ತಿ ಡಾ| ಕುರಿಯನ್‌ರದ್ದು.

ಸಹಕಾರಿ ಕ್ಷೀರ ಆಂದೋಲನದ ಪ್ರಯೋಜನ ದೇಶದ ಇತರ ಭಾಗಗಳಿಗೂ ದೊರಕುವಂತಾಗಲು ರಾಷ್ಟ್ರೀಯ ಹೈನು ಅಭಿವೃದ್ಧಿ ನಿಗಮವನ್ನು ಆನಂದ್‌ ನಲ್ಲಿ ಸ್ಥಾಪಿಸಲಾಯಿತು. ಡಾ| ಕುರಿಯನ್‌ ಇದರ ಪ್ರಥಮ ಅಧ್ಯಕ್ಷರಾದರು. ರಾಷ್ಟ್ರೀಯ ಹೈನು ಅಭಿವೃದ್ಧಿ ನಿಗಮದ ಮಾರ್ಗದರ್ಶನದಲ್ಲಿ “ಕ್ಷೀರಧಾರಾ’ ಯೋಜನೆಯನ್ನು ಜಾರಿಗೊಳಿಸಿ ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಂಘಗಳನ್ನು ತೆರೆಯುವಲ್ಲಿ ಅಗತ್ಯ ನೆರ ವನ್ನು ನೀಡಲಾಯಿತು. ಈ ರೀತಿ ಗ್ರಾಮೀಣ ರೈತರು ಉತ್ಪಾದಿಸಿದ ಹಾಲನ್ನು ಉತ್ಪನ್ನಗಳನ್ನಾಗಿ ಪರಿವರ್ತಿಸಿ ಮಾರುಕಟ್ಟೆ ಮಾಡಲು ಕುರಿಯನ್‌ “ಗುಜರಾತ್‌ ಹಾಲು ಮಾರಾಟ ಮಹಾ ಮಂಡಳಿ’ ಸ್ಥಾಪಿಸಿದರು. ಆ ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿ ಅಮೂಲ್‌ ಮಾದರಿಯಲ್ಲಿ ಹಾಲು ಮಹಾಮಂಡಳಗಳು ಸ್ಥಾಪನೆಗೊಂಡವು. ರೈತರ ಮಕ್ಕಳೇ ಡೈರಿ ವ್ಯವಸ್ಥಾಪಕ ರಾಗಬೇಕೆಂಬ ಅಭಿಲಾಷೆಯಿಂದ 1979ರಲ್ಲಿ ಗುಜ ರಾತ್‌ನಲ್ಲಿ ಐಆರ್‌ಎಂಎ ಎಂಬ ಸಂಸ್ಥೆಯನ್ನು ಡಾ| ಕುರಿಯನ್‌ ಹುಟ್ಟು ಹಾಕಿದರು. ಈ ಸಂಸ್ಥೆ ಇಂದು ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ.

2010-2011ರಲ್ಲಿ ಭಾರತ ವಿಶ್ವದ ಅಗ್ರಮಾನ್ಯ ಹಾಲು ಉತ್ಪಾದನ ದೇಶವಾಗಿ ಮೂಡಿ ಬಂದಿದ್ದು ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಷಯ. 1976 ರಲ್ಲಿ ಗುಜರಾತ್‌ನ ರೈತರು ತಲಾ 2/- ರೂ ಹಣ ಹೂಡಿ ಆರಂಭಿಸಿದ ರಾಷ್ಟ್ರೀಯ ಭಾವೈಕ್ಯದ ಸಿನೆಮಾ “ಮಂಥನ ರಾಷ್ಟ್ರೀಯ ಪ್ರಶಸ್ತಿ ಪಡೆದುದಲ್ಲದೇ ಆಸ್ಕರ್‌ ಪ್ರಶಸ್ತಿಗೆ ಶಿಫಾರಿಸಲ್ಪಟ್ಟಿತ್ತು. “ಸುರಭಿ’ ಧಾರಾವಾಹಿ, ಅಮರ ಚಿತ್ರಕಥಾ ನಿರ್ಮಿಸಿದ “ಶತಕೋಟಿ ಲೀಟರ್‌’ ಚಿಂತನೆಯ ಸರದಾರ ಕುರಿಯನ್‌ ಕುರಿತಾದ ಕಾಮಿಕ್‌ ಪುಸ್ತಕ ದಾಖಲೆಯನ್ನು ಸೃಷ್ಟಿಸಿತು. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿರುವ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಕೃಷಿ ರತ್ನ ಮುಂತಾದ ಹಲವಾರು ಪ್ರಶಸ್ತಿಗಳಲ್ಲದೇ ರಾಮನ್‌ ಮ್ಯಾಗ್ಸೆಸ್ಸೆ ಅವಾರ್ಡ್‌, ವಿಶ್ವ ಆಹಾರ ಪಾರಿತೋಷಕ, 1993ರ “ಅಂತಾರಾಷ್ಟ್ರೀಯ ಡೈರಿ ವ್ಯಕ್ತಿ ಪ್ರಶಸ್ತಿ’, ನೆದರ್‌ಲ್ಯಾಂಡ್‌, ಜಪಾನ್‌, ಫ್ರಾನ್ಸ್‌, ಕೊರಿಯಾ ಮುಂತಾದ ಹಲವಾರು ದೇಶಗಳ ಅತ್ಯುನ್ನತ ಪ್ರಶಸ್ತಿ, ಅಲ್ಲದೇ ಸುಮಾರು 15 ಕ್ಕೂ ಹೆಚ್ಚು ದೇಶ-ವಿದೇಶಗಳ ವಿಶ್ವವಿದ್ಯಾನಿಲಯಗಳು ನೀಡಿದ ಗೌರವ ಡಾಕ್ಟರೇಟ್‌ ಡಾ| ಕುರಿಯನ್‌ ಅವರ ಸಾಧನೆಗೆ ಸಂದ ಗೌರವವಾಗಿದೆ. 2014ರಿಂದ ಡಾ| ಕುರಿಯನ್‌ ಅವರ ಜನ್ಮ ದಿನವಾದ ನ. 26 ರಂದು ದೇಶಾದ್ಯಂತ “ರಾಷ್ಟ್ರೀಯ ಕ್ಷೀರ ದಿನಾಚರಣೆ’ಯನ್ನು ಆಚರಿಸಲಾಗುತ್ತಿದೆ. ಈ ಬಾರಿ ಡಾ| ಕುರಿಯನ್‌ ಅವರ ಜನ್ಮಶತಮಾನೋತ್ಸವ ವರ್ಷವಾಗಿದ್ದು ರಾಷ್ಟ್ರೀಯ ಕ್ಷೀರ ದಿನಾಚರಣೆಗೆ ಹೆಚ್ಚಿನ ಮಹತ್ವ ಲಭಿಸಿದೆ.

2012ರ ಸೆ. 9ರಂದು ಕುರಿಯನ್‌ ಅವರು 90ನೇ ಇಳಿವಯಸ್ಸಿನಲ್ಲಿ ಗುಜರಾತ್‌ನ ತಮ್ಮ ಕರ್ಮ ಭೂಮಿಯಲ್ಲಿ ಕೊನೆಯುಸಿರನ್ನೆಳೆದರು. ಭಾರತದ ಪ್ರತಿಯೊಬ್ಬ ಹಾಲು ಉತ್ಪಾದಕರಿಗೆ ಜೀವನಾಧಾರ ವನ್ನು ಕಲ್ಪಿಸಿಕೊಟ್ಟು ವಿಶ್ವದಲ್ಲಿ ದೇಶವು ಹಾಲು ಉತ್ಪಾದನೆಯಲ್ಲಿ ಉತ್ತುಂಗಕ್ಕೇರಲು ಕಾರಣೀಭೂತ ರಾದ “ಮಿಲ್ಕ್ ಮ್ಯಾನ್‌ ಆಫ್ ಇಂಡಿಯಾ’ ಖ್ಯಾತಿಯ ಡಾ| ವರ್ಗೀಸ್‌ ಕುರಿಯನ್‌ ಪ್ರಾತಃಸ್ಮರಣೀಯರು.

-ಡಿ. ಎಸ್‌. ಹೆಗಡೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.