ದೇವನಹಳ್ಳಿ: ಜಿಲ್ಲೆಯಲ್ಲಿ ಬೇಸಿಗೆ ಶುರು ಆಗುತ್ತಿದ್ದಂತೆ ಹಾಲಿನ ಉತ್ಪಾದನೆಯಲ್ಲಿ ಕುಸಿತ ಕಂಡು ಬಂದಿದ್ದು, ಒಂದು ಕಡೆ ರೈತರ ಆದಾಯ ಕುಸಿಯುತ್ತಿರುವ ಆತಂಕ ಮನೆ ಮಾಡಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲೂ ರೈತರು ಹೈನು ಉದ್ಯಮವನ್ನು ಮಾಡಿಕೊಂಡು ಬಂದಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಬೆಳಗ್ಗೆ ಮತ್ತು ಸಂಜೆ ಹಾಲನ್ನು ರೈತರು ಸರಬರಾಜು ಮಾಡುತ್ತಾರೆ. ಆದರೂ ಸಹ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಡೀಸೆಲ್ ಹಾಗೂ ದಿನನಿತ್ಯ ಬಳಸುವ ಅಗತ್ಯ ವಸ್ತುಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಹೋಗುತ್ತಿದೆ. ರೈತರಿಗೆ ಪ್ರತಿ ಹದಿನೈದು ದಿವಸಕ್ಕೊಮ್ಮೆ ಹಾಲನ್ನು ಸರಬರಾಜು ಮಾಡಿದರೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ರೈತರ ಖಾತೆಗೆ ಹಣವನ್ನು ಹಾಕುತ್ತಾರೆ. ಎರಡು, ಮೂರು, ನಾಲ್ಕು, ಐದು ಹಸು ಸಾಕುವವರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಎಷ್ಟು ಹಾಕುತ್ತೇವೋ ಹಿಂಡಿ, ಬೂಸ, ಮೇವು, ಫೀಡ್, ಹಸು ಕೊಟ್ಟಿಗೆ ಸ್ವತ್ಛತೆ, ನಿರ್ವಹಣೆ ಸೇರಿದಂತೆ ಇತರೆ ಕೂಲಿ ಮಾಡುವವರಿಗೆ ಇಂತಿಷ್ಟು ಹಣವನ್ನು ನೀಡಬೇಕು. ಎಷ್ಟು ಖರ್ಚು ಆಯಿತು. ಎಷ್ಟು ಉಳಿಯುತ್ತದೆ ಎಂಬ ಲೆಕ್ಕಾಚಾರವನ್ನು ರೈತರು ಹಾಕುತ್ತಿದ್ದಾರೆ.
ಜಾನುವಾರುಗಳಿಗೆ ಚರ್ಮಗಂಟು ರೋಗ: ಮತ್ತೂಂದೆಡೆ ಇತ್ತೀಚೆಗೆ ಜಾನುವಾರುಗಳಿಗೆ ತೀವ್ರತರವಾಗಿ ಬಾಧಿಸುತ್ತಿರುವ ಚರ್ಮಗಂಟು ರೋಗದ ಪರಿಣಾಮ ದಿಂದಲೂ ಹೈನು ಉದ್ಯಮಕ್ಕೆ ಪೆಟ್ಟು ಬಿದ್ದಿದ್ದು ಗಣನೀಯ ಪ್ರಮಾಣದಲ್ಲಿ ಹಾಲು ಉತ್ಪಾದನೆ ಕುಸಿತ ಕಂಡಿದೆ. ಸದ್ಯ ಜಿಲ್ಲೆಯಲ್ಲಿ ರಣಬಿಸಿಲು ಶುರುವಾಗಿರುವುದರಿಂದ ಎಲ್ಲೆಡೆ ಹಸಿರು ಮೇವಿನ ಕೊರತೆ ಕಂಡು ಬಂದಿರುವುದರಿಂದ ಹಾಲು ಉತ್ಪಾದನೆ ಕ್ಷೀಣಿಸುತ್ತಿರುವುದು ಸದ್ಯ. ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತದ ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿಯ ಅಕ್ಕಪಕ್ಕದ ರೈತರು ಆಕರ್ಷಕ ಬೆಲೆ ನೀಡಿ ಗರ್ಭಧರಿಸಿದ ಮಿಶ್ರತಳಿ ಹಸುಗಳನ್ನು ಖರೀದಿಸಿ ಸಾಗಾಣಿಕೆಗಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಸಾಕಷ್ಟು ಪಶುಪಾಲಕರು ತಮ್ಮ ಗರ್ಭ ಧರಿಸಿದ ಹಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಒಟ್ಟಾರೆ ಹಾಲಿನ ಉತ್ಪಾದನೆ ಕುಂಠಿತಗೊಳ್ಳುತ್ತಿದೆ. ಗರ್ಭಕಟ್ಟಿದ ರಾಸುಗಳಿಗೆ ಬೇಡಿಕೆ ಹೆಚ್ಚಾಗಿದೆ. ದೇವನಹಳ್ಳಿ ತಾಲೂಕಿನಲ್ಲಿ 850 ಗರ್ಭಧರಿಸಿದ ರಾಸುಗಳು ಮಾರಾಟವಾಗಿದೆ ಎಂದು ಪಶುಪಾಲನಾ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ರಾಸುಗಳಿಗೆ ಹಸಿಮೇವಿನ ಕೊರತೆ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದಾಗಿ ರಾಸುಗಳಿಗೆ ಹಸಿಮೇವಿನ ಕೊರತೆ ಹಾಗೂ ರೈತರು, ರಾಸುಗಳನ್ನು ಮಾರಾಟ ಮಾಡುತ್ತಿರುವ ಕಾರಣ ಹಾಲಿನ ಉತ್ಪಾದನೆಯಲ್ಲಿ ಗಣನೀಚಿುವಾಗಿ ಇಳಿಮುಖವಾಗುತ್ತಿದ್ದು, ಒಕ್ಕೂಟದಲ್ಲಿ ಹಾಲಿನ ಬೇಡಿ ಕೆಯ ಪ್ರಮಾಣ 2 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ತಾಲೂಕಿನಲ್ಲಿ ಒಟ್ಟು 181 ಹಾಲು ಉತ್ಪಾದಕರ ಸಹಕಾರಿ ಸಂಘಗಳಿವೆ. ಬೇಸಿಗೆಗೂ ಮುಂಚೆ 1 ಲಕ್ಷ 15 ಸಾವಿರ ಲೀಟರ್ ಹಾಲು ತಾಲೂಕಿನಲ್ಲಿ ಉತ್ಪಾದನೆಯಾಗುತ್ತಿತ್ತು. ಬೇಸಿಗೆ ಆರಂಭವಾದ ನಂತರ, 89 ಸಾವಿರ ಲೀಟರ್‌ಗೆ ಇಳಿಮುಖವಾಗಿದ್ದು, ಉತ್ಪಾದನೆಯಾಗುತ್ತಿರುವ ಹಾಲು ಉತ್ತಮ ಗುಣಮಟ್ಟದಿಂದ ಕೂಡಿದ್ದು, 4.4 ರಷ್ಟು ಕೊಬ್ಬಿನಾಂಶ ಹೊಂದಿದೆ ಎಂದು ಒಕ್ಕೂಟದ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
Related Articles
ಪಶು ಆಹಾರದ ಬೆಲೆ ಏರಿಕೆ: ರೈತರು, ಪಶುಗಳ ಪೋಷಣೆಗಾಗಿ ಕಡ್ಡಾಯವಾಗಿ ಪಶು ಆಹಾರಗಳನ್ನು ಕೊಡಲೇಬೇಕು. ಒಂದು ಮೂಟೆ ಬೂಸ 1350 ರೂಪಾಯಿ, ಚಕ್ಕೆ 1600 (35 ಕೆ.ಜಿ), ಕೆಎಂಎಫ್ನಿಂದ ವಿತರಣೆ ಮಾಡುತ್ತಿರುವ ಫೀಡ್ 1180 ರೂಪಾಯಿ (ಕರುಗಳಿಗೆ ಮಾತ್ರ), ರೈತರಿಗೆ ಶೇ 50 ರಷ್ಟು ಸಬ್ಸಿಡಿ ಸಿಗುತ್ತಿದೆ. ಇದರ ಜೊತೆಗೆ ಹಸಿಮೇವಿನ ಬೆಲೆಯು ದುಬಾರಿಯಾಗಿದೆ. ಹಸಿರು ಮೇವು ಕೊಡದಿದ್ದರೆ, ಹಾಲಿನ ಉತ್ಪಾದನೆ ತೀರಾ ಕಡಿಮೆಯಾಗುತ್ತದೆ. ಹಾಲಿನ ಬೆಲೆ ಒಂದು ಲೀಟರ್ ಗೆ 31.20 ರೂಪಾಯಿ ನೀಡುತ್ತಿದ್ದಾರೆ. ಇದರೊಂದಿಗೆ ಪ್ರೋತ್ಸಾಹಧನವಾಗಿ ಲೀಟರ್ ಹಾಲಿಗೆ 5 ರೂ ನಂತೆ ನೀಡಲಾಗುತ್ತಿದೆ. ವರ್ಷಕ್ಕೊಮ್ಮೆ ಡೇರಿಗಳಿಂದ ಬೋನಸ್ ಕೊಡಲಾಗುತ್ತಿದೆ.
ಒಂದು ಹಸುವಿಗೆ ಇಬ್ಬರು: ಒಂದು ಮನೆಯಲ್ಲಿ ಒಂದು ಹಸುವನ್ನು ಪೋಷಣೆ ಮಾಡಲು ಇಬ್ಬರು ಇರಬೇಕು, ಒಬ್ಬರು ಹಸುವಿನ ಆರೈಕೆ ಮಾಡಿಕೊಂಡರೆ, ಮತ್ತೂಬ್ಬರು ಮೇವು ಹರಸಿಕೊಂಡು ಬಂದು ಆಹಾರ ನೀಡಬೇಕು. ಪ್ರತಿನಿತ್ಯ 20 ಲೀಟರ್ ಹಾಲು ಕರೆಯುವ ಹಸುವಿನಿಂದ 604 ರೂಪಾಯಿ ಸಂಪಾದನೆಯಾಗುತ್ತದೆ. ಇದರಲ್ಲಿ ಖರ್ಚು ಕಳೆದರೆ, 200- 250 ರೂಪಾಯಿ ಉಳಿತಾಯವಾಗುತ್ತದೆ. ಹೈನುಗಾರಿಕೆಯಿಚಿದ ಏನೂ ಲಾಭವಿಲ್ಲದಿದ್ದರೂ ಕುಟುಂಬ ನಿರ್ವಹಣೆಗೆ ಇರಲಿ ಎಂದು ಸಾಕುತ್ತಿದ್ದೇವೆ. ಗೊಬ್ಬರ ಮಾತ್ರ ನಮಗೆ ಉಳಿಯುತ್ತದೆ ಎಂದು ರೈತರು ಹೇಳುತ್ತಾರೆ.
ಬೆಂಗಳೂರು ಹಾಲು ಒಕ್ಕೂಟಕ್ಕೆ 16ಲಕ್ಷ ಹಾಲು ಸರಬರಾಜು ಆಗುತ್ತದೆ. ಅದರಲ್ಲಿ 3ಲಕ್ಷ ಲೀಟರ್ ಹಾಲು ಉತ್ಪಾದನೆ ಕುಸಿತ ಕಂಡಿದೆ. ಬೇಸಿಗೆ ಕಾಲದಲ್ಲಿ ಪ್ರತಿವರ್ಷವೂ ಹಾಲಿನ ಉತ್ಪಾದನೆ ಕುಂಠಿತಗೊಳ್ಳುತ್ತದೆ. ರೈತರಿಗೆ ಮೇವಿನ ಕೊರತೆ ಉಂಟಾಗುತ್ತದೆ. ರೈತರಿಗೆ ಪ್ರತಿ ಹದಿನೈದು ದಿನಕ್ಕೊಮ್ಮೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಹಾಲಿನ ಬಟವಾಡೆ ರೈತರ ಖಾತೆಗೆ ಬರುತ್ತದೆ. – ಬಿ.ಶ್ರೀನಿವಾಸ್, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ
ಹೈನುಗಾರಿಕೆ ಸಾವಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 1300 ರಿಂದ 1500ಲೀಟರ್ ಹಾಲು ಸರಬರಾಜು ಮಾಡಲಾಗುತ್ತಿತ್ತು. ಸರ್ಕಾರ ಹಿಂಡಿ ಮತ್ತು ಬೂಸ ದರ ಇಳಿಸಿ ಹಾಲಿನ ದರ ಹೆಚ್ಚಿಸಬೇಕು. – ಎಸ್.ಪಿ.ಮುನಿರಾಜು, ಸಾವಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ
ಬೇಸಿಗೆ ಕಾಲದಲ್ಲಿ ಹಸಿಮೇವಿನ ಕೊರತೆ ರೈತರನ್ನು ಹೆಚ್ಚು ಕಾಡುತ್ತಿದೆ. ಹದಿನೈದು ದಿನದ ಹಿಂದೆ ದಿನಕ್ಕೆ 5ಲಕ್ಷ ಲೀಟರ್ ಇದ್ದದ್ದು, 3.70 ಲಕ್ಷ ಲೀಟರ್‌ಗೆ ಬಂದಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕುಸಿತಗೊಳ್ಳುತ್ತದೆ. ಬೇಸಿಗೆಯಲ್ಲಿ ಹಸಿರು ಮೇವಿನ ಕೊರತೆಯಿರುವುದರಿಂದ ಹಾಲಿನ ಇಳುವರಿ ಕಡಿಮೆಯಾಗಿದೆ. – ಡಾ.ನಾಗರಾಜ್, ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ.
ಈಗಿನ ದುಬಾರಿ ಪಶು ಆಹಾರ, ಮೇವಿನ ದರ ಹೆಚ್ಚಾಗಿರುವುದರಿಂದ ಪಶುಗಳನ್ನು ಸಾಕಾಣಿಕೆ ಮಾಡಿ ಕೊಂಡು ಬಂದಿದ್ದೇವೆ. ಹೈನುಗಾರಿಕೆ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಒಣ ಹುಲ್ಲನ್ನು ಒಂದು ಲೋಡಿಗೆ 15 ರಿಂದ 20ಸಾವಿರ ರೂ. ಕೊಟ್ಟು ಹಸುಗಳನ್ನು ಸಾಕುತ್ತಿದ್ದೇವೆ. – ಲಕ್ಷ್ಮಮ್ಮ, ರೈತ ಮಹಿಳೆ
– ಎಸ್.ಮಹೇಶ್.ದೇವನಹಳ್ಳಿ