Advertisement

ಅಮೆರಿಕದೊಂದಿಗೆ ಹಾಲಿನ ಉತ್ಪನ್ನ ಒಪ್ಪಂದ ರೈತರಿಗೆ ಮಾರಕ

09:05 PM Feb 23, 2020 | Lakshmi GovindaRaj |

ಹುಳಿಯಾರು: ಹಾಲು ಮತ್ತು ಹಾಲಿನ ಉತ್ಪನ್ನಗಳ ಒಪ್ಪಂದ ಅಮೆರಿಕ ಅಧ್ಯಕ್ಷ ಟ್ರಂಪ್‌ ಜೊತೆ ಮಾಡಿಕೊಳ್ಳುವುದು ಬೇಡ ಎಂದು ಪ್ರಧಾನಿ ಮೋದಿ ಮೇಲೆ ಒತ್ತಡ ಹಾಕಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

Advertisement

ಹುಳಿಯಾರಿನ ಎಂಪಿಎಸ್‌ ಶಾಲಾ ಆವರಣದಲ್ಲಿ ಭಾನುವಾರ ತಾಲೂಕು ಕೃಷಿ ಇಲಾಖೆ, ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬರ್ಡ್ಸ್‌ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ 2019-20ನೇ ಸಾಲಿನ ಕೃಷಿ ಅಭಿಯಾನದಡಿ ಏರ್ಪಡಿಸಿದ್ದ ಹೋಬಳಿ ಮಟ್ಟದ ಕೃಷಿ ವಸ್ತು ಪ್ರದರ್ಶನ, ರೈತರೊಂದಿಗೆ ಸಂವಾದ ಹಾಗೂ ರೈತರ ಮೇಳ ಉದ್ಘಾಟಿಸಿ ಮಾತನಾಡಿದರು.

ಮಳೆ ಬೆಳೆಯಿಲ್ಲದೆ ಕಂಗಾಲಾಗಿದ್ದ ರಾಜ್ಯದ ರೈತರಿಗೆ ಹೈನುಗಾರಿಗೆ ವರದಾನವಾಗಿದ್ದು, ಇದರಿಂದ ಅದೆಷ್ಟೋ ಕುಟುಂಬಗಳು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಅಮೆರಿಕದೊಂದಿಗೆ ಹಾಲಿನ ಉತ್ಪನ್ನಗಳಿಗೆ ಒಪ್ಪಂದ ಮಾಡಿಕೊಂಡರೆ ರಾಜ್ಯದ ಅರ್ಧದಷ್ಟು ರೈತರ ನೆಮ್ಮದಿಗೆ ಭಂಗವಾಗಲಿದೆ. ಹಾಗಾಗಿ ಒಪ್ಪಂದ ಬೇಡ ಎಂದು ರಾಜ್ಯದಿಂದ ಒತ್ತಡ ತರಲಾಗಿದೆ. ಕಳೆದ 6 ತಿಂಗಳ ಹಿಂದೆಯೂ ಒಪ್ಪಂದದ ವಿಚಾರ ಬಂದಾಗ ತಡೆಯಲಾಗಿತ್ತು ಎಂದು ವಿವರಿಸಿದರು.

ಸರ್ಕಾರದ ಬಹುತೇಕ ಇಲಾಖೆಗಳನ್ನು ಕೆಲವೇ ಮಂದಿ ಗುತ್ತಿಗೆಗೆ ಪಡೆಸವರಂತೆ ಬರುವ ಸಹಾಯಧನ, ಕೊಡುಗೆ, ಸೌಲಭ್ಯ ಕಬಳಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇದನ್ನು ತಡೆಯಲು ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕೊಟ್ಟು ಅವರ ಬದುಕು ಹಸನಾಗುವಂತೆ ಮಾಡುವ ಸಲುವಾಗಿ ಅಧಿಕಾರಿಗಳ ದಂಡು ಕಟ್ಟಿಕೊಂಡು ಸೌಲಭ್ಯಗಳ ಮಾಹಿತಿ ತಿಳಿಸುತ್ತಿದ್ದೇನೆ. ಹಾಗಾಗಿ ಅಧಿಕಾರಿಗಳು ಬರುವ ಸಭೆಗೆ ಜಾತಿ, ಪಕ್ಷ ಬಿಟ್ಟು ಬಂದು ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಸದ್ಬಳಕೆ ಮಾಡಿಕೊಳ್ಳಿ ಎಂದರು.

ಕರು ಭಾಗ್ಯ: ಪಶು ಭಾಗ್ಯ ಯೋಜನೆಯಲ್ಲಿ ಭ್ರಷ್ಟಾಚಾರದ ವಾಸನೆ ಬರುತ್ತಿದ್ದು, ಪಶು ಖರೀದಿಸದೆ ಯಾರಧ್ದೋ ಹಸುವಿನ ಕಿವಿಗೆ ಓಲೆ ಹಾಕಿಸಿ ಯೋಜನೆ ಹಣ ಪಡೆಯುತ್ತಿರುವ ದಂಧೆ ನಡೆಯುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪಶು ಭಾಗ್ಯದ ಬದಲು ಕರು ಭಾಗ್ಯ ಯೋಜನೆಯಾಗಿ ಮಾರ್ಪಡಿಸುವ ಚಿಂತನೆ ನಡೆದಿದೆ. ಒಂದು ಪಶು ಹಣದಲ್ಲಿ 12 ಕರು ಕೊಡಬಹುದು. ಅಲ್ಲದೆ ಅಗತ್ಯ ಉಳ್ಳವರು ಮಾತ್ರ ಕರು ಪಡೆದು ಸಾಕಿ ಹೈನುಗಾರಿಕೆ ಮಾಡುತ್ತಾರೆ ಎಂದು ಹೇಳಿದರು.

Advertisement

ಸಿಒಡಿ ತನಿಖೆ: ತಾಲೂಕಿನ ರೈತರಿಗೆ ಅನುಕೂಲ ಆಗಲೆಂದು ತೆಂಗಿನಕಾಯಿ ಬೋರ್ಡ್‌ಗೆ 3 ಟ್ರಾಕ್ಟರ್‌, 2 ಟ್ಯಾಂಕರ್‌, 10 ಲೋಡ್‌ ಗೊಬ್ಬರ ಕೊಡಿಸಲಾಗಿತ್ತು. ಗೊಬ್ಬರ ಉಚಿತವಾಗಿ ಕೊಟ್ಟು ಟ್ರಾಕ್ಟರ್‌, ಟ್ಯಾಂಕರ್‌ ಬಾಡಿಗೆ ಆಧಾರದ ಮೇಲೆ ಕೊಡಿ ಎಂದರೆ ಅದನ್ನೆಲ್ಲಾ ತೆಗೆದುಕೊಂಡ ವ್ಯಕ್ತಿ ಅದೆಲ್ಲೋದನೋ ಗೊತ್ತಾಗಲಿಲ್ಲ. ಹಾಗಾಗಿ ಇದನ್ನು ಸಿಒಡಿ ತನಿಖೆಗೆ ಕೇಳಲಾಗಿದೆ ಎಂದು ತಿಳಿಸಿದರು.

2 ಲಕ್ಷ ಮೆಟ್ರಿಕ್‌ ಟನ್‌ ಮಾತ್ರ ರಾಗಿ ಖರೀದಿ: ಬೆಂಬಲ ಬೆಲೆಯಲ್ಲಿ 2 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಮಾತ್ರ ಖರೀದಿಸಲು ಸರ್ಕಾರ ನಿರ್ಧರಿಸಿದ್ದು, 2 ಲಕ್ಷ ಗುರಿ ತಲುಪಿದ ನಂತರ ರಾಗಿ ಕೊಡುವವರು ಇದ್ದರೂ ಸ್ಥಗಿತಗೊಳಿಸಲಾಗುತ್ತೆ. ಹಾಗಾಗಿ ರೈತರು ಬೇಗ ಹೆಸರು ನೋಂದಾಯಿಸಿ ರಾಗಿ ಮಾರಬೇಕು. ಈ ಯೋಜನೆ ಎಲ್ಲಾ ರೈತರಿಗೆ ಅನುಕೂಲವಾಗಲೆಂದು ಎಕರೆಗೆ 15 ಕ್ವಿಂಟಲ್‌ ಖರೀದಿಸುವ ನಿಯಮ ಬದಲಾಯಿಸಿ 10 ಕ್ವಿಂಟಲ್‌ಗೆ ಇಳಿಸಲಾಗಿದೆ ಎಂದು ಹೇಳಿದರು.

ತಾಪಂ ಅಧ್ಯಕ್ಷೆ ಚೇತನಾ ಗಂಗಾಧರ್‌, ಜಿಪಂ ಸದಸ್ಯರಾದ ಕಲ್ಲೇಶ್‌, ವೈ.ಸಿ.ಸಿದ್ದರಾಮಯ್ಯ, ಮಂಜುಳಮ್ಮ, ತಾಪಂ ಉಪಾಧ್ಯಕ್ಷ ಯತೀಶ್‌, ಸದಸ್ಯರಾದ ಏಜೆಂಟ್‌ ಕುಮಾರ್‌, ಕೇಶವಮೂರ್ತಿ, ಟಿ.ವಿ.ತಿಮ್ಮಯ್ಯ, ಶ್ರೀಹರ್ಷ, ಕಲ್ಯಾಣಿಬಾಯಿ, ಕಲಾವತಿ, ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ, ತೋಟಗಾರಿಗೆ ಉಪನಿರ್ದೆಶಕ ರಘು, ಮಣ್ಣು ವಿಜ್ಞಾನಿಗಳಾದ ಡಾ.ಅನಿತಾ. ಸಸ್ಯ ಸಂರಕ್ಷಣೆ ವಿಜ್ಞಾನಿಗಳಾದ ಡಾ.ಶ್ರೀನಿವಾಸ್‌, ಸಹಾಯಕ ಕೃಷಿ ನಿರ್ದೇಶಕ ಡಾ.ಡಿ.ಆರ್‌.ಹನುಮಂತರಾಜು ಮತ್ತಿತರರು ಇದ್ದರು.

ಮರುಭೂಮಿ ಆಗುತ್ತೆ ಎಚ್ಚರ: ಸಮುದ್ರ ತೀರದ ತೆಂಗು, ಅಡಕೆ ಬೆಳೆಯನ್ನು ಚಿಕ್ಕನಾಯಕನಹಳ್ಳಿ ತಾಲೂಕಿಗೆ ತಂದು ಅವುಗಳ ಉಳಿವಿಗಾಗಿ ಅಂತರ್ಜಲ ಬರಿದು ಮಾಡಿದ್ದರಿಂದ ರಾಜ್ಯದಲ್ಲಿ ಮರುಭೂಮಿ ಆಗುವ ತಾಲೂಕಿನ ಪಟ್ಟಿಯಲ್ಲಿ ಚಿ.ನಾ.ಹಳ್ಳಿ ಮೊದಲ ಸ್ಥಾನದಲ್ಲಿದೆ. ಇದರ ಬಗ್ಗೆ ಎಚ್ಚೆತ್ತು ಕಡಿಮೆ ನೀರಿನಿಂದ ಬೆಳೆಯುವ ಗೋಡಂಬಿ, ಖರ್ಜೂರ ಮತ್ತಿತರ ಬೆಳೆ ಬೆಳೆಯಿರಿ. ಸಾಧ್ಯವಾದಷ್ಟು ನೀರು ಆವಿಯಾಗುವುದನ್ನು ತಡೆಯಲು ಹನಿ ನೀರಾವರಿ ಬಳಸಿ. ಇಲ್ಲವಾದಲ್ಲಿ ಬೆಳೆಗೂ ನೀರು ಸಿಗಲ್ಲ, ಕುಡಿಯುವುದಕ್ಕೂ ನೀರು ಸಿಗಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next