ಬೆಂಗಳೂರು: ಹಾಲಿನ ಬೇಡಿಕೆ ಹೆಚ್ಚಾಗಿರುವುದರಿಂದ ಹೊರರಾಜ್ಯಗಳಿಗೆ ಸರಬರಾಜು ಮಾಡುವುದನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಂತೆ ಬೃಹತ್ ಬೆಂಗಳೂರು ಹೋಟೆಲುಗಳ ಸಂಘ ಇದೀಗ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್)ಕ್ಕೆ ಮನವಿ ಮಾಡಿದೆ.
ಈ ಬಗ್ಗೆ ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್, ಇತ್ತೀಚೆಗೆ ನಂದಿನಿ ಹಾಲು ಮತ್ತು ನಂದಿನಿ ಹಾಲಿನ ಉತ್ಪನ್ನಗಳ ಕೊರತೆ ಬಹಳಷ್ಟು ಉಂಟಾಗಿದೆ. ಬೆಂಗಳೂರಿನ ಹೋಟೆಲ್‌ಗಳಲ್ಲಿ ಹೆಚ್ಚಾಗಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನ ಅಧಿಕವಾಗಿ ಬಳಸಲಾಗುತ್ತಿದೆ. ಆದರೆ ಈಗ ಅಗತ್ಯವಿರುವಷ್ಟು ಹಾಲಿನ ಪೂರೈಕೆ ಆಗದೆ ಇರುವುದರಿಂದ ಮಾಲೀಕರು ಬಹಳಷ್ಟು ತೊಂದರೆ ಎದುರಿಸುವಂತಾಗಿದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟವು ಹೊರ ರಾಜ್ಯಗಳಿಗೆ ಹಾಲು ಸರಬರಾಜು ಮಾಡುವುದನ್ನು ತಾತ್ಕಾಲಿಕವಾಗಿ ತಡೆ ಹಿಡಿಯಬೇಕು. ಅಗತ್ಯವಿದ್ದರೆ ಹೊರ ದೇಶಗಳಿಂದ ಆಮದು ಮಾಡಿಕೊಂಡು ಸದ್ಯದ ಬೇಡಿಕೆಯನ್ನು ಪೂರೈಸಬೇಕು. ಹಾಲು ಜನಸಾಮಾನ್ಯರಿಗೆ ಅತ್ಯವಶ್ಯಕವಾಗಿರುವುದರಿಂದ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.