Advertisement

ಜನವರಿಯಿಂದ ಹಾಲಿನ ದರ 1 ರೂ. ಏರಿಕೆ

05:53 AM Dec 29, 2018 | Team Udayavani |

ಹುಣಸೂರು: ಜನವರಿಯಿಂದ ಪ್ರತಿ ಲೀಟರ್‌ ಹಾಲಿಗೆ ಒಂದು ರೂ. ಏರಿಕೆಯಾಗಲಿದ್ದು, ರೈತರು ಹೈನುಗಾರಿಕೆಯಲ್ಲಿ ತೊಡಗಿ ಮಕ್ಕಳ ಶಿಕ್ಷಣ, ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿರಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಲಹೆ ನೀಡಿದರು. ತಾಲೂಕಿನ ಮುದುಗನೂರಿನಲ್ಲಿ 6.5 ಲಕ್ಷ ರೂ. ವೆಚ್ಚದ ನೂತನ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಪರ್ಯಾಯ ಬೆಳೆ: ಇನ್ನು ಮುಂದೆ ತಂಬಾಕು ಬೆಳೆಗೆ ಉಳಿಗಾಲವಿಲ್ಲ. ಇನ್ನೆಷ್ಟು ದಿನ ತಂಬಾಕು ಬೆಳೆಯುತ್ತೀರಾ?, ತಾಲೂಕಿನಲ್ಲಿ ಉತ್ತಮ ಭೂಮಿ, ನೀರು ಲಭ್ಯವಿದ್ದು, ಇತರೆ ಬೆಳೆಗಳಿಗೆ ಆದ್ಯತೆ ನೀಡಬೇಕು. ರೈತರು ತಂಬಾಕು ಬಿಟ್ಟಾಕಿ  ಹೈನುಗಾರಿಕೆ, ತೋಟಗಾರಿಕೆ ಸೇರಿದಂತೆ ಪರ್ಯಾಯ ಬೆಳೆ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

7 ಲಕ್ಷ ಲೀ. ಹಾಲು ಪೂರೈಕೆ: ತಾಲೂಕಿನಲ್ಲಿ 183 ಹಾಲು ಉತ್ಪಾದಕ ಸಹಕಾರ ಸಂಘಗಳಿದ್ದು, ಮಹಿಳಾ ಡೇರಿಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಿತ್ಯ ಜಿಲ್ಲೆಯಲ್ಲಿ 7 ಲಕ್ಷ ಲೀ. ಹಾಲು ಮೈಮುಲ್‌ಗೆ ಪೂರೈಕೆ ಆಗುತ್ತಿದೆ. ಹುಣಸೂರಿನಿಂದ 90 ಸಾವಿರ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಸದಸ್ಯರು ಗುಣಮಟ್ಟದ ಹಾಲನ್ನೇ ಹಾಕಬೇಕು. ಕೃಷಿ ಪತ್ತಿನ ಸಹಕಾರ ಸಂಘಗಳು ರಾಜಕೀಯ ಪ್ರವೇಶದಿಂದಾಗಿ ಹಾಳಾಗುತ್ತಿದ್ದು, ಯಾವುದೇ ಕಾರಣಕ್ಕೂ ರಾಜಕೀಯ ಬೆರೆಸಬೇಡಿ ಎಂದು ಮನವಿ ಮಾಡಿದರು.

ನನ್ನ ತವರು: ಹನಗೋಡು ಹೋಬಳಿ ತಮ್ಮ ತವರು. ಇಲ್ಲಿನ ಜನರು ತಮ್ಮನ್ನು ಮಗನಂತೆ ಕಂಡಿದ್ದಲ್ಲದೇ ನಮ್ಮ ಕುಟುಂಬವನ್ನೂ ಬೆಂಬಲಿಸಿದ್ದಾರೆ. ಇದೀಗ ಎಚ್‌.ವಿಶ್ವನಾಥ ಅವರನ್ನು ಶಾಸಕರನ್ನಾಗಿ ಮಾಡಿದ್ದೀರಾ, ಇದಕ್ಕೆ ನಿಮ್ಮನ್ನು ಅಭಿನಂದಿಸುತ್ತೇನೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ರೈತ ಪರ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.

ಈ ಹಿಂದೆ ದೊಡ್ಡ ಹೆಜೂರು, ನಾಗಾಪುರ, ನೇರಳಕುಪ್ಪೆ, ಕಡೇಮನುಗನಹಳ್ಳಿಗಳಿಗೆ ಪ್ರೌಢಶಾಲೆ, ಪಶು ಆಸ್ಪತ್ರೆ ಮಂಜೂರು ಹಾಗೂ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇನೆ. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಿದ್ದೆನೆಂಬ ಹೆಮ್ಮೆ ತಮಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

Advertisement

ವೈಷಮ್ಯ ಬಿಡಿ: ಚುನಾವಣೆ ಬಂದಾಗ ಮಾತ್ರ ಪಕ್ಷ ರಾಜಕಾರಣ ಮಾಡಿ, ಆನಂತರ ಗ್ರಾಮಗಳ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸಿ, ಸಣ್ಣ-ಪುಟ್ಟ ವಿಚಾರಗಳಿಗೆ ವೈಮನಸ್ಸು ಬಿಟ್ಟು ಶಾಂತಿ ಸೌಹಾರ್ದತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಕಾಲಮಿತಿ: ಜೆಡಿಎಸ್‌ ರಾಜ್ಯಾಧ್ಯಕ್ಷ ಶಾಸಕ ಎಚ್‌.ವಿಶ್ವನಾಥ್‌ ಮಾತನಾಡಿ, ಮಹಿಳಾ ಡೇರಿ,  ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣವಾಗುತ್ತಿರುವುದು ಆಶಾದಾಯಕ.  ಮುಂದಿನ ದಿನಗಳಲ್ಲಿ ಕಾಡಂಚಿನ ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಾಲಮಿತಿಯೊಳಗೆ ಬಗೆಹರಿಸುವ ಪ್ರಯತ್ನ ನಡೆಸಿದ್ದೇನೆ ಎಂದರು.

ದೇವರಾಜು ಅರಸು ಸಂಸ್ಮರಣಾ ದಿನದೊಳಗೆ ಅರ್ಹರಿಗೆ ಸಾಗುವಳಿ ಪತ್ರ ವಿತರಿಸುವ ಯೋಜನೆ ರೂಪಿಸಿದ್ದೇನೆ. ಕೆರೆ ತುಂಬಿಸುವ ಹಾಗೂ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಶ್ರಮ ಹಾಕುತ್ತೇನೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಳಿ ನಿರ್ದೇಶಕಿ ಲಲಿತಾ ಜಿ.ಟಿ.ದೇವೇಗೌಡ, ಮೈಮುಲ್‌ ನಿರ್ದೇಶಕ ಕೆ.ಎಸ್‌.ಕುಮಾರ್‌, ಜಿಪಂ ಸದಸ್ಯ ಕಟ್ಟನಾಯಕ, ತಾಪಂ ಉಪಾಧ್ಯಕ್ಷ ಪ್ರೇಮಕುಮಾರ್‌, ಎಪಿಎಂಸಿ ಸದಸ್ಯ ಸುಬಾಷ್‌, ಡೇರಿ ಅಧ್ಯಕ್ಷೆ ಪುಷ್ಪಲತಾ, ಕಾರ್ಯದರ್ಶಿ ಅನಿತಾ,

ತಾಪಂ ಸದಸ್ಯರಾದ ಪುಷ್ಪಲತಾ, ಪುಟ್ಟಮ್ಮ, ತಟ್ಟೆಕೆರೆ ಶ್ರೀನಿವಾಸ್‌, ಗ್ರಾಪಂ ಅಧ್ಯಕ್ಷೆ ಮಹದೇವಿ, ಮಾಜಿ ಅಧ್ಯಕ್ಷ ಚಂದ್ರಶೇಖರ್‌, ಮೈಮುಲ್‌ ವಿಸ್ತರಣಾಧಿಕಾರಿ ಗೌತಮ್‌ ಬಸವಲಿಂಗಯ್ಯ, ಟಿಎಪಿಸಿಎಂಎಸ್‌ ಅಧ್ಯಕ್ಷ ವೆಂಕಟೇಶ್‌,  ಜೆಡಿಎಸ್‌ ಅಧ್ಯಕ್ಷ ಮಹದೇವೇಗೌಡ, ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ಯಶೋಧಾ, ಮುಖಂಡರಾದ ಸೋಮಶೇಖರ್‌, ವೆಂಕಟೇಶ್‌, ಕಸ್ತೂರಿಗೌಡ, ರುದ್ರಪ್ಪ, ದೇವರಾಜ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next