ಜಮಖಂಡಿ(ಬಾಗಲಕೋಟೆ): ಕ್ಷೀರಭಾಗ್ಯ ಯೋಜನೆ ಹಾಲು ಮಕ್ಕಳ ಹೊಟ್ಟೆ ಸೇರುವ ಬದಲಿಗೆ ದಂಧೆಕೋರರ ಪಾಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಅಕ್ರಮವಾಗಿ ಹಾಲಿನ ಪೌಡರ್ ಸಂಗ್ರಹಿಸಿದ್ದ ಕಟ್ಟಡದ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ಮಾಡಿ ಬರೋಬ್ಬರಿ 34ಲಕ್ಷ 9ಸಾವಿರ ಮೌಲ್ಯದ ಹಾಲಿನ ಪೌಡರ್, ಇತರ ವಸ್ತುಗಳನ್ನು ಬುಧವಾರ ಜಪ್ತಿ ಮಾಡಿದ್ದಾರೆ.
ಜಮಖಂಡಿ ನಗರದ ದೇವರಾಜ ಅರಸು ವಸತಿ ನಿಲಯದ ಹಿಂದುಗಡೆ ಇರುವ ಗೋಪಾಲ ತೇಲಿ ಎಂಬುವರ ಕಟ್ಟಡವನ್ನು ಬಾಡಿಗೆ ಪಡೆದು ಗಿರೀಶ್ ತೇಲಿ, ಮಾದೇವ ತೇಲಿ ಎಂಬುವರು ಕ್ಷೀರ ಭಾಗ್ಯ ಯೋಜನೆ ನಂದಿನಿ ಹಾಲಿನ ಪೌಡರ್, ಪ್ಯಾಕೇಟ್, ಸೀಲ್ ಮಾಡುವ ಯಂತ್ರ ಅಕ್ರಮವಾಗಿ ಸಂಗ್ರಹಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಜಮಖಂಡಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನ್ಯಾಯಾಲಯದ ಆದೇಶದ ಮೂಲಕ ಪೊಲೀಸರೊಂದಿಗೆ ಅಕ್ರಮವಾಗಿ ಹಾಲಿನ ಪೌಡರ್ ಸಂಗ್ರಹಿಸಿದ್ದ ಕಟ್ಟಡದ ಮೇಲೆ ದಾಳಿ ಮಾಡಿದ್ದಾರೆ. 12.601ಕೆಜಿ ಹಾಲಿನ ಪೌಡರ್ ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ 34 ಲಕ್ಷ 2ಸಾವಿರ 270ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತರೆ ವಸ್ತುಗಳನ್ನು ಸಹ ಅಧಿಕಾರಿಗಳು, ಪೊಲೀಸರು ಜಪ್ತಿ ಮಾಡಿದ್ದು, ಕಟ್ಟಡ ಸೀಜ್ ಮಾಡಿದ್ದಾರೆ.
ಕಟ್ಟಡ ಬಾಡಿಗೆ ಕೊಟ್ಟಿರುವ ಗೋಪಾಲ ತೇಲಿ ಈಚೆಗೆ ಮೃತರಾಗಿದ್ದು, ಆರೋಪಿಗಳಾದ ಗಿರೀಶ್ ಮಾದೇವ ತೇಲಿ ಪರಾರಿಯಾಗಿದ್ದಾರೆ. ಅಧಿಕಾರಿಗಳು, ಪೊಲೀಸರು ತನಿಖೆ ಮುಂದುವರೆಸಿದ್ದು, ಇಷ್ಟೊಂದು ಮೌಲ್ಯದ ಹಾಲಿನ ಪೌಡರ್ ಎಲ್ಲಿಂದ ತಂದು ಸಂಗ್ರಹಿಸಿದ್ದಾರೆ ಎನ್ನುವ ಮಾಹಿತಿ ಕಲೆಹಾಕಲು ಮುಂದಾಗಿದ್ದು,ಆರೋಪಿಗಳ ಪತ್ತೆ ಕಾರ್ಯ ಶುರುವಾಗಿದೆ. ಈ ಬಗ್ಗೆ ಜಮಖಂಡಿ ಸಿಡಿಪಿಒ ಅನುರಾಧ ಹಾದಿಮನಿ ದೂರಿನನ್ವಯ ಜಮಖಂಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.