Advertisement

8 ತಿಂಗಳಿಂದ ಸಿಕ್ಕಿಲ್ಲ ಹಾಲಿನ ಪ್ರೋತ್ಸಾಹ ಧನ!

03:57 PM May 27, 2023 | Team Udayavani |

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಕಳೆದ 8 ತಿಂಗಳಿಂದ ಜಿಲ್ಲೆಯ ರೈತರಿಗೆ ಜಮೆ ಆಗದೇ ಹಾಲು ಉತ್ಪಾದನೆ ಯಲ್ಲಿ ತೊಡಗಿರುವ ಹೈನುಗಾರರು ಪ್ರೋತ್ಸಾಹ ಧನಕ್ಕಾಗಿ ಚಾತಕ ಪಕ್ಷಿಗಳಂತೆ ಎದುರು ನೋಡುವಂತಾಗಿದೆ.

Advertisement

ಕಳೆದ 2022ರ ಅಕ್ಟೋಬರ್‌ ತಿಂಗಳಿಗೆ ಸ್ಥಗಿತಗೊಂ ಡಿರುವ ಪ್ರೋತ್ಸಾಹ ಧನ ಬರೋಬ್ಬರಿ 8 ತಿಂಗಳಾದರೂ ಇದುವರೆಗೂ ಹಾಲು ಉತ್ಪಾದಕರ ಖಾತೆಗೆ ನಯಾಪೈಸೆ ಜಮೆ ಆಗದೇ ಇರುವುದು ಜಿಲ್ಲೆಯ ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಗಿದೆ.

5 ರೂ. ಪ್ರೋತ್ಸಾಹ ಧನ: ಹಾಲು ಉತ್ಪಾದಕರಿಗೆ ಹಾಲು ಒಕ್ಕೂಟಗಳು ವೈಜ್ಞಾನಿಕವಾಗಿ ಬೆಲೆ ನೀಡುತ್ತಿಲ್ಲ ಎಂಬ ಅಸಮಾಧಾನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈನೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ಲೀ.ಹಾಲಿಗೆ ಒಕ್ಕೂಟಗಳು ನೀಡುವ ಬೆಲೆ ಜೊತೆಗೆ ಸರ್ಕಾರ 5 ರೂ. ಪ್ರೋತ್ಸಾಹ ಧನ ನೀಡುತ್ತಾ ಬರುತ್ತಿದೆ. ಆದರೆ, ಕಾಲಕಾಲಕ್ಕೆ ಪ್ರೋತ್ಸಾಹ ಧನ ರೈತರಿಗೆ ತಲುಪಿಸುವಲ್ಲಿ ಸರ್ಕಾರಗಳು ಆಸಕ್ತಿ ತೋರದ ಪರಿಣಾಮ ವರ್ಷಕ್ಕೊಮ್ಮೆ, ಆರು ತಿಂಗಳಗೊಮ್ಮೆ ಪ್ರೋತ್ಸಾಹ ಧನ ನೋಡುವಂತಾಗಿದೆ. ಜಿಲ್ಲೆಯಲ್ಲಿ 900 ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಪ್ರತಿ ನಿತ್ಯ 4 ಲಕ್ಷಕ್ಕೂ ಅಧಿಕ ಲೀ.ಹಾಲು ಉತ್ಪಾದನೆ ಆಗುತ್ತಿದೆ. ಸಾವಿರಾರು ಬಡ ಕುಟುಂಬಗಳು ಹೈನೋದ್ಯಮವನ್ನೇ ಬದುಕಿಗೆ ಆಧಾರವಾಗಿ ಇಟ್ಟುಕೊಂಡಿವೆ. ಆದರೆ ಸರ್ಕಾರ ಮಾತ್ರ ನೀಡಬೇಕಿರುವ ಪ್ರೋತ್ಸಾಹ ಧನ ತಿಂಗಳಾನುಗಟ್ಟಲೇ ಬಾಕಿ ಇರಿಸಿಕೊಂಡಿರುವುದು ಬೇಸರಕ್ಕೆ ಕಾರಣವಾಗಿದೆ.

ಬಾಕಿ ಬಿಡುಗಡೆಗೆ ಆಗ್ರಹ: ಸದ್ಯ ಜಿಲ್ಲಾದ್ಯಂತ ಮುಂಗಾರು ಹಂಗಾಮು ಶುರುವಾಗಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಸಿದ್ಧಗೊಳ್ಳಬೇಕಿದೆ. ಮತ್ತೂಂದು ಕಡೆ ಹಾಲು ಉತ್ಪಾದಕರು ಮಕ್ಕಳನ್ನು ಶಾಲಾ, ಕಾಲೇಜುಗಳಿಗೆ ದಾಖಲಿಸಲು ಹಣಕಾಸಿನ ತೊಂದರೆ ಇರುವ ಕಾರಣ ಬಾಕಿ ಪ್ರೋತ್ಸಾಹ ಧನ ಕೊಟ್ಟರೆ ತುಂಬ ಅನುಕೂಲ ಎನ್ನುವ ಪರಿಸ್ಥಿತಿಯಲ್ಲಿ ಜಿಲ್ಲೆಯ ರೈತರು ಇದ್ದಾರೆ.

ಚರ್ಮಗಂಟು ರೋಗಕ್ಕೆ 478 ಜಾನುವಾರು ಬಲಿ! : ವರ್ಷದಿಂದ ವರ್ಷಕ್ಕೆ ಹೈನೋದ್ಯಮ ರೈತರಿಗೆ ಒಂದು ರೀತಿ ಸವಾಲಾಗಿ ಪರಿಣಮಿಸಿದೆ. ಇದರ ನಡುವೆ ಪ್ರತಿ ವರ್ಷ ಕಾಡುವ ಕಾಲುಬಾಯಿ ಜ್ವರ ರೈತರನ್ನು ಕಂಗಾಲಾಗಿಸುತ್ತಿದೆ. ಈ ವರ್ಷ ವಿಶೇಷವಾಗಿ ಜಿಲ್ಲಾದ್ಯಂತ ಆರ್ಭಟಿಸಿದ ಚರ್ಮಗುಂಟು ರೋಗಕ್ಕೆ ಜಿಲ್ಲೆಯಲ್ಲಿ ಬರೋಬ್ಬರಿ 478 ಜಾನುವಾರುಗಳು ಬಲಿಯಾಗಿ ರೈತರು ತೀವ್ರ ಆರ್ಥಿಕ ತೊಂದರೆ ಅನುಭವಿಸಿದರು. ಮೃತಪಟ್ಟ 478 ರಾಸುಗಳ ಪೈಕಿ ಇದುವರೆಗೂ ಕೇವಲ 369 ರಾಸುಗಳಿಗೆ ಮಾತ್ರ ಸರ್ಕಾರದಿಂದ ಪರಿಹಾರ ಸಿಕ್ಕಿದ್ದು, ಉಳಿದಂತೆ 15 ರಾಸುಗಳು ವಿಮೆ ವ್ಯಾಪ್ತಿಗೆ ಒಳಪಟ್ಟರೆ ಉಳಿದ 94 ರಾಸುಗಳಿಗೆ ಸರ್ಕಾರದಿಂದ ಪರಿಹಾರ ಬಾಕಿ ಇದೆಯೆಂದು ಜಿಲ್ಲೆಯ ಪಶು ಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ.ರವಿ ಶುಕ್ರವಾರ ಉದಯವಾಣಿಗೆ ತಿಳಿಸಿದರು.

Advertisement

ಇದರ ನಡುವೆ ಪಶು ಆಹಾರ ಬೆಲೆ ಏರಿಕೆ ಪರಿಣಾಮ ರೈತರು ಹಾಲು ಉತ್ಪಾದನೆಯಿಂದ ವಿಮುಖವಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳೆದ ನಾಲ್ಕೈದು ತಿಂಗಳಿಂದ ಮಾರುಕಟ್ಟೆಯಲ್ಲಿ ಪಶು ಆಹಾರ ಬೆಲೆ ಮಾರುಕಟ್ಟೆಯಲ್ಲಿ ವಿಪರೀತ ಏರಿಕೆ ಆಗುತ್ತಲೇ ಇರುವುದು ರೈತರನ್ನು ಚಿಂತೆಗೀಡು ಮಾಡಿದೆ. ಹಾಲು ಉತ್ಪಾದನೆ ರೈತರಿಗೆ ಲಾಭದಾಯಕವಲ್ಲ ಎನ್ನುವ ಪರಿಸ್ಥಿತಿಯನ್ನು ಪಶುಆಹಾರ ಬೆಲೆ ಏರಿಕೆ ತಂದೊಡ್ಡಿದೆ. 900, 1000 ರೂ. ಇದ್ದ ಪಶು ಆಹಾರ ಬೆಲೆ 1,200, 1400ಕ್ಕೆ ಮುಟ್ಟಿದೆ. ಅದೇ ರೀತಿ ಚಕ್ಕೆ ಕೂಡ 30 ಕೆ.ಜಿ. 1,500 ತಲುಪಿದೆ.

ಸಾಮಾನ್ಯ ವರ್ಗದ ಹಾಲು ಉತ್ಪಾದಕರಿಗೆ ಕಳೆದ ಅಕ್ಟೋಬರ್‌ ತಿಂಗಳಿಂದ ಇಲ್ಲಿವರೆಗೂ ಪ್ರತಿ ಲೀ.ಹಾಲಿಗೆ ನೀಡುವ 5 ರೂ. ಪ್ರೋತ್ಸಾಹ ಧನ ಬಾಕಿ ಇದೆ. ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಹಾಲು ಉತ್ಪಾದಕರಿಗೆ ಕಳೆದ ಫೆಬ್ರವರಿ ತಿಂಗಳಿಂದ ಸರ್ಕಾರದ 5 ರೂ. ಪ್ರೋತ್ಸಾಹ ಧನ ಬಾಕಿದೆ. ಸದ್ಯದಲೇ ಬಿಡುಗಡೆ ಆಗುವ ನಿರೀಕ್ಷೆ ಇದೆ. – ಗುರುಮೂರ್ತಿ, ವ್ಯವಸ್ಥಾಪಕ ನಿರ್ದೇಶಕರು, ಕೋಚಿಮುಲ್‌

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next