Advertisement

ಸೇನಾ ಕಾರ್ಯಾಚರಣೆ ಅಂತ್ಯ: ಎಡಿಜಿಪಿ

06:00 AM Aug 22, 2018 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವವರ ರಕ್ಷಣೆಗಾಗಿ ವಾರದಿಂದ ನಡೆಯುತ್ತಿದ್ದ ಸೇನಾ ಕಾರ್ಯಾಚರಣೆಯನ್ನು ಸೋಮವಾರ ಸಂಜೆ ಮುಕ್ತಾಯಗೊಳಿಸಲಾಗಿದೆ. ಆದರೆ, ಜಿಲ್ಲೆಯ ಸ್ಥಿತಿಗತಿಗಳನ್ನು ಅವಲೋಕಿಸಲಾಗುತ್ತಿದ್ದು, ಜಿಲ್ಲಾಡಳಿತದ ನಿರ್ಧಾರದ ಬಳಿಕವಷ್ಟೆ ವಿವಿಧ ರಕ್ಷಣಾ ಪಡೆಗಳು ಜಿಲ್ಲೆಯಿಂದ ತೆರಳಲಿವೆ ಎಂದು ಎಡಿಜಿಪಿ ಭಾಸ್ಕರ ರಾವ್‌ ತಿಳಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬುಧವಾರದಿಂದ ಗಂಭೀರ ಸ್ವರೂಪದಲ್ಲಿ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ 8 ಡ್ರೋನ್‌ಗಳ ಮೂಲಕ ಕಾರ್ಯಾಚರಣೆ ನಡೆಸಲಾಗುವುದು. ಇನ್ನೂ ಯಾರಾದರು ಸಂಕಷ್ಟದಲ್ಲಿ ಸಿಲುಕಿದ್ದಾರೆಯೇ, ಸಾಕು ಪ್ರಾಣಿಗಳು ತೊಂದರೆಗೆ ಸಿಲುಕಿಕೊಂಡಿವೆಯೇ ಎಂದು ಪರಿಶೀಲಿಸಿ ರಕ್ಷಣಾ ಕಾರ್ಯ ನಡೆಸಲಾಗುವುದು. ಡಿಜಿಪಿ ನೀಲಮಣಿ ರಾಜು ಅವರು ಮುತುವರ್ಜಿ ವಹಿಸಿ ಬಳ್ಳಾರಿ, ಕೊಪ್ಪಳ ಮತ್ತು ಕಲಬುರಗಿಯಿಂದ 16 ಮಂದಿ ಆಪರೇಟರ್‌ಗಳೊಂದಿಗೆ ಡ್ರೋನ್‌ಗಳನ್ನು ಒದಗಿಸಿದ್ದಾರೆ ಎಂದು ತಿಳಿಸಿದರು.

ಗುಡ್ಡ ಕುಸಿತ, ಮನೆಗಳು ಧರೆಗುರುಳಿದ ಭೀಕರ ಘಟನೆಗಳಲ್ಲಿ ಸಿಲುಕಿ, ತೀವ್ರ ಸಂಕಷ್ಟದಲ್ಲಿದ್ದ 1,735 ಮಂದಿಯನ್ನು ಹೆಲಿಕಾಪ್ಟರ್‌, ಹಗ್ಗಗಳನ್ನು ಬಳಸಿ
ರಕ್ಷಿಸಲಾಗಿದೆ. ಇನ್ನು ಸಂತ್ರಸ್ತರಿಗೆ ನೆರವು, ಪುನರ್ವಸತಿ ನಡೆಯಬೇಕಿದೆ. ಒಟ್ಟು 7 ಮಂದಿ ಸಾವನ್ನಪ್ಪಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ. ಹಲವರು ಮನೆಗಳನ್ನು ತೊರೆದಿದ್ದು, ಇದನ್ನು ದುರುಪಯೋಗಪಡಿಸಿಕೊಂಡು ಕಳ್ಳತನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ 215 ಗೃಹರಕ್ಷಕ ಸಿಬ್ಬಂದಿಯನ್ನು ರಕ್ಷಣೆಗೆ ನಿಯೋಜಿಸಲಾ ಗಿದೆ. ಸಂತ್ರಸ್ತರ ಹೆಸರಿನಲ್ಲಿ ಡಬ್ಬಿಗಳನ್ನು ಹಿಡಿದು ಹಣ ಸಂಗ್ರಹಿಸುವುದಕ್ಕೆ ಎಲ್ಲಿಯೂ ಅವಕಾಶವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹವಾಗುಣ ಮತ್ತು ಕೊಡಗಿನ ಸ್ಥಿತಿಗತಿ ಕುರಿತು ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭಾಸ್ಕರ ರಾವ್‌ ಎಚ್ಚರಿಸಿದರು. 

ತಿಂಗಳ ವೇತನ ಘೋಷಣೆ: ಸಂತ್ರಸ್ತರಿಗೆ ನೆರವಾಗಲು ಸ್ಥಾಪಿಸಲಾಗಿರುವ ಸಿಎಂ ಪರಿಹಾರ ನಿಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ತಿಂಗಳ ವೇತನ ನೀಡುವುದಾಗಿ ಘೋಷಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next