Advertisement
“ಈಗಂತೂ ನನಗೆ ಒಳ್ಳೆಯ ಕಥೆ, ಪಾತ್ರ ಹುಡುಕಿ ಬರುತ್ತಿವೆ. ಅಷ್ಟೇ ಅಲ್ಲ, ಒಳ್ಳೆಯ ತಂಡ ಕೂಡ ಸಿಗುತ್ತಿದೆ. ಮೊದಲ ಚಿತ್ರ “ಗೊಂಬೆಗಳ ಲವ್’ ನನಗೆ ಸ್ಟ್ರಾಂಗ್ ಬೇಸ್ ಹಾಕಿಕೊಟ್ಟಿತು. ಇಲ್ಲಿಯವರೆಗೆ ನಾನು ನಾಯಕಿಯಾಗಿ ಗಟ್ಟಿ ನೆಲೆ ಕಂಡಿದ್ದೇನೆ ಅಂದರೆ ಅದಕ್ಕೆ “ಗೊಂಬೆಗಳ ಲವ್’ ಕಾರಣ. ಈಗ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ. ಆ ಎಲ್ಲಾ ಚಿತ್ರಗಳು ಬಹುತೇಕ ಪೂರ್ಣಗೊಂಡಿದ್ದು, ಬಿಡುಗಡೆಗೆ ರೆಡಿಯಾಗಿವೆ. “ಮೈಸೂರು ಡೈರೀಸ್’ ಚಿತ್ರ ಹೊಸ ನಿರೀಕ್ಷೆ ಹೆಚ್ಚಿಸಿದೆ. ಇತ್ತೀಚೆಗೆ ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಇನ್ನು, “ಪ್ರಭುತ್ವ’, “ತೂತು ಮಡಿಕೆ’ ಚಿತ್ರಗಳಲ್ಲಿ ನಟಿಸಿದ್ದೇನೆ. “ರುದ್ರಿ’ ಚಿತ್ರ ಕೂಡ ಹೊಸ ಕುತೂಹಲ ಕೆರಳಿಸಿರುವ ಚಿತ್ರ. ಇದು ಸಾಕಷ್ಟು ವಿಶೇಷತೆ ತುಂಬಿರುವ ಸಿನಿಮಾ. ಬಹುತೇಕ ಉತ್ತರ ಕರ್ನಾಟಕ ಭಾಗದ ಹಿನ್ನೆಲೆಯಲ್ಲೇ ಸಾಗಲಿದೆ. ಭಾಷೆ ಕೂಡ ಉತ್ತರ ಕರ್ನಾಟಕದಲ್ಲೇ ಇರಲಿದೆ. ಒಂದು ಹೆಣ್ಣಿನ ಸುತ್ತ ನಡೆಯುವ ಕಥೆ ಇದಾಗಿದ್ದು, ಒಬ್ಬ ಹುಡುಗಿಯ ಆಸೆ, ಕನಸು, ನೋವು, ನಲಿವುಗಳ ಸುತ್ತ ಚಿತ್ರ ಸಾಗಲಿದೆ. ಹಳ್ಳಿಯ ಹೆಣ್ಣುಮಕ್ಕಳು ಹೇಗೆ ಸಣ್ಣ ಸಣ್ಣ ಅಂಶಗಳಿಗೆ ಖುಷಿಪಡುತ್ತಾರೆ. ತಮಗೆ ಎದುರಾಗುವ ಸಮಸ್ಯೆಗಳಿಂದ ಹೇಗೆ ತೊಂದರೆಗೊಳಪಡುತ್ತಾರೆ. ಆ ಬಳಿಕ ಹೇಗೆ ಅದರಿಂದ ಹೊರಬರುತ್ತಾರೆ ಎಂಬ ಅಂಶಗಳು “ರುದ್ರಿ’ ಚಿತ್ರದ ವಿಶೇಷ. “ರುದ್ರಿ’ ಅಂದರೆ, ಅದೊಂದು ಪವರ್‌ಫುಲ್ ಹೆಸರು. ಪ್ರತಿಯೊಬ್ಬ ಹೆಣ್ಣು ಮಕ್ಕಳಲ್ಲೂ ಪಾರ್ವತಿಯೂ ಇರುತ್ತಾಳೆ. ಕಾಳಿಯೂ ಇರುತ್ತಾಳೆ. ಇಲ್ಲಿ ರುದ್ರಿ ಎಂಬ ಹುಡುಗಿಯ ಲೈಫಲ್ಲಿ ಒಂದು ಸಮಸ್ಯೆ ಎದುರಾಗುತ್ತೆ. ಆಗ ಅವಳು ಕಾಳಿ ಅವತಾರ ತಾಳುತ್ತಾಳೆ. ಹಾಗಾಗಿ ಅದೊಂದು ರುದ್ರಾವತಾರವಾಗಿ ಕಾಣುತ್ತದೆ. ನೊಂದು ಹುಡುಗಿಯೊಬ್ಬಳು ಸಿಡಿದೇಳುವ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ’ ಎಂದು ಹೇಳುವ ಪಾವನಾ, ಯಾವುದೇ ಪಾತ್ರವಿರಲಿ, ಅದಕ್ಕೆ ಪರಿಪೂರ್ಣ ನ್ಯಾಯ ಸಲ್ಲಿಸಲು ಪ್ರಯತ್ನಿಸುತ್ತೇನೆ. “ರುದ್ರಿ’ ಚಿತ್ರದಲ್ಲಿ ಕೆಲವೊಂದು ಬೋಲ್ಡ್ ಸ್ಟೆಪ್ ತಗೋಬೇಕಿತ್ತು. ಪಾತ್ರದ ಅವಶ್ಯಕತೆಗೆ ತಕ್ಕಂತೆ ಮಾಡಬೇಕಿತ್ತು. ಮಾಡಿದ್ದೇನೆ. ನನಗೆ ನಾನೇ ಲಿಮಿಟಿಷೇನ್ ಹಾಕ್ಕೊಂಡ್ರೆ. ಕಷ್ಟ. ನನಗೆ ಜಸ್ಟಿಫೈ ಆದರೆ ಮಾತ್ರ ಮಾಡ್ತೀನಿ. ಮನಸ್ಸಿಗೆ ಇಷ್ಟವಾಗದಿದ್ದರೆ ಮಾಡುವುದಿಲ್ಲ’ ಎಂಬುದು ಅವರ ಮಾತು.
Advertisement
ಪಾವನ ರುದ್ರವತಾರ
07:09 PM Dec 26, 2019 | Team Udayavani |