Advertisement

ರೈತ ಹೋರಾಟಗಾರ ಮೈಲಾರಪ್ಪಗೆ ನುಡಿ ನಮನ

06:22 PM Sep 23, 2021 | Team Udayavani |

ಶಹಾಪುರ: ರೈತಪರ ಹೋರಾಟಗಾರ ಮೈಲಾರಪ್ಪ ಸಗರ ಅವರು ತಮ್ಮ ಕಂಚಿನ ಕಂಠದಿಂದ ರೈತರ ಸ್ಥಿತಿಗತಿ ಕುರಿತು ಆಗಿಂದಾಗೆ ಹಾಡುಗಳನ್ನು ಕಟ್ಟಿ ಹಾಡುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ನಾಡಿನ ರೈತರ ಅಭ್ಯುದಯಕ್ಕೆ ಮೈಲಾರಪ್ಪ ಹೃದಯ ಸದಾ ಮಿಡಿಯುತ್ತಿತ್ತು. ಇಂದು ಅವರಿಲ್ಲ. ಆದರೆ ಅವರ ಆದರ್ಶ, ಅಪ್ರತಿಮ ಹೋರಾಟತನ ನಮ್ಮ ಜೊತೆಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು.

Advertisement

ತಾಲೂಕಿನ ಸಗರ ಗ್ರಾಮದಲ್ಲಿ ಜಿಲ್ಲಾ ಕರಾರೈಸಂ ಹಾಗೂ ಹಸಿರು ಸೇನೆ ಘಟಕ ಆಯೋಜಿಸಿದ್ದ ಹಿರಿಯ ರೈತ ಹೋರಾಟಗಾರ ದಿ| ಮೈಲಾರಪ್ಪ ಸಗರ ಅವರ ನುಡಿನಮನ ಕಾರ್ಯಕ್ರಮದಲ್ಲಿ ನೇಗಿಲ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸ್ವತಃ ಹಾಡು ರಚನೆ ಮಾಡಿ ಕಂಚಿನ ಕಂಠದಿಂದ ಸಂಗೀತ ಕ್ಷೇತ್ರಕ್ಕೆ ಮೆರಗು ನೀಡಿದ್ದ, ರೈತ ಹೋರಾಟಗಾರ ಮೈಲಾರಪ್ಪ ಸಗರವರು ಸಗರನಾಡಿನಲ್ಲಿ ಅಪ್ರತಿಮ ರೈತ ಕಲಾವಿದರಾಗಿದ್ದರು. ಅವರ ಹಾಡುಗಳು ಗ್ರಾಮೀಣ ಭಾಷೆಯಲ್ಲಿ ಸೊಗಡನ್ನೆ ಸಾರಿ ಹೇಳುವಂತಿವೆ. ತಮ್ಮ ಹಾಡುಗಳಿಂದ ರೈತ ಹೋರಾಟಕ್ಕೆ ಜೀವ ಕಳೆ ನೀಡುವದರೊಂದಿಗೆ ರೈತ ಶಕ್ತಿಯ ಪ್ರತಿರೂಪವಾಗಿದ್ದರು.

ಸದಾ ಜನಮಾನಸದಲ್ಲಿ ಹಸಿರಾಗಿರುವ ಮೈಲಾರಪ್ಪ ಸಗರವರ ಹಾಡುಗಳು ಮತ್ತು ಹೋರಾಟದ ಗೀತೆಗಳು ಇಂದಿಗೂ ಜನ ಜಾಗೃತಿಗೆ ಪೂರಕವಾಗಿವೆ ಎಂದ ಅವರು, ಅಂದು ಸಗರ ಮೈಲಾರಪ್ಪನವರ ಹೋರಾಟದ ರೈತ ಸಂಘ ಇಂದು ರೈತಪರ ಹೋರಾಟ ಮಾಡುತ್ತಾ ಬಂದಿದ್ದು. ರೈತರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ.

ರೈತ ವಿರೋಧಿ ನೀತಿಗಳನ್ನು ಜಾರಿಗೆ ತಂದು ರೈತರನ್ನು ದಳ್ಳುರಿಗೆ ತರುವ ಹುನ್ನಾರದಲ್ಲಿ ಸರ್ಕಾರಗಳ ಕಾರ್ಯ ಯೋಜನೆಗಳು ಮುಂದುವರೆದಿವೆ ಎಂದು ಆರೋಪಿಸಿದ ಅವರು, ಮೈಲಾರಪ್ಪನಂತ ಅಪ್ರತಿಮ ಹೋರಾಟಗಾರನನ್ನು ನಾಡಿಗೆ ಪರಿಚಯಿಸಿದ ಸಗರ ಗ್ರಾಮಕ್ಕೆ ಅನಂತ ವಂದನೆಗಳನ್ನು ಅರ್ಪಿಸಿದರು. ಬಿಎಸ್‌ಎಫ್‌ ಯೋಧ ದುರ್ಗಪ್ಪ ನಾಯಕ ಸಗರ ಮಾತನಾಡಿದರು.

Advertisement

ಲಕ್ಷ್ಮಿಪುರ ಶ್ರೀಗಿರಿಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹೇಶಗೌಡ ಸುಬೇದಾರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಚಾಲಕ ಶಾಂತರಡ್ಡಿ ಪಾಟೀಲ್‌, ಮುಖಂಡರಾದ ಅಶೋಕಗೌಡ ಸುಬೇದಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಕಾರ್ತಿಕ್‌ ಹೊಸಪೇಟೆ, ಭಕ್ತರಳ್ಳಿ ಭೆ„ರೆಗೌಡಮ ಹನುಮಂತ ಹೊಳೆಯಾಚೆ, ಶ್ರೀನಿವಾಸ ನಾಯಕ, ಬಸನಗೌಡ ಬಿರೆದಾರ, ಗಗನ, ಮಲ್ಲನಗಭಡ ಹಗರಟಗಿ, ದೇವಿಂದ್ರಪ್ಪಗೌಡ ಪಾಟೀಲ್‌, ಬಸವರಾಜಪ್ಪಗೌಡ ಪಾಟೀಲ್‌,
ದೇವರಾಜ, ಶಿವಕುಮಾರ ಮಲ್ಲೇದ್‌, ಶಂಕರ ಪಡಶೆಟ್ಟಿ, ರಾಯಪ್ಪ ನಾಯ್ಕೋಡಿ ಇದ್ದರು. ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು. ಮುಂಚಿತವಾಗಿ ಎತ್ತಿನ ಬಂಡಿಯಲ್ಲಿ ಕೋಡಿಹಳ್ಳಿ ಸೇರಿದಂತೆ ರೈತ ನಾಯಕರನ್ನು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಮಾಡಲಾಯಿತು.

ರೈತರು ಇಂತಹ ರಾಜಕಾರಣಿಗಳ ಬಗ್ಗೆ ಕುರಿತು ಚರ್ಚಿಸೋದು ನಿಲ್ಲಿಸಿ. ನಿಮ್ಮ ಬದುಕಿನ ಬಗ್ಗೆ ಚಿಂತಿಸಿ. ಕೇಂದ್ರ ಸರ್ಕಾರ ಹೊಸ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಇದರಿಂದ ರೈತರ ಬಾಳು ಹಾಳಾಗಿ ಹೋಗಲಿದೆ. ನಮ್ಮ ಜಮೀನುಗಳಲ್ಲಿ ಕಂಪನಿಗಳು ಕೃಷಿ ಮಾಡಲು ಆಗಮಿಸಲಿದ್ದಾರೆ. ನಾವೆಲ್ಲ ಕೃಷಿತನವನ್ನು ಆಯಾ ಕಂಪನಿಗಳಿಗೆ ಒಪ್ಪಿಸಬೇಕಾಗುತ್ತದೆ. ಹೀಗಾದಲ್ಲಿ ಮುಂದೆ ನಮ್ಮ ಗತಿ ಏನಾಗಲಿದೆ ಎಂಬುದನ್ನು ಯೋಚಿಸಿ. ಅದರ ವಿರುದ್ಧ ಸೆಟೆದು ನಿಲ್ಲಬೇಕಿದೆ. ನಮ್ಮತನ ಕೃಷಿತನ ಉಳಿಸಿಕೊಳ್ಳಬೇಕಿದೆ.
ಕೋಡಿಹಳ್ಳಿ ಚಂದ್ರಶೇಖರ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next