ಉತ್ತರಪ್ರದೇಶ: ಟ್ರಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ 24 ಜನರು ವಲಸೆ ಕಾರ್ಮಿಕರು ಮೃತಪಟದ್ಟು 13ಕ್ಕೂ ಹೆಚ್ಚು ಜನರು ಗಂಭಿರ ಗಾಯಗೊಂಡ ಘಟನೆ ಔರಿಯಾ ಎಂಬಲ್ಲಿ ನಡೆದಿದೆ.
ಇಂದು (ಶನಿವಾರ) ಮುಂಜಾನೆ 3:30ರ ವೇಳೆಗೆ ಈ ಭೀಕರ ಅವಘಡ ಸಂಭವಿಸಿದೆ. ವಲಸೆ ಕಾರ್ಮಿಕರೆಲ್ಲರೂ ಲಾಕ್ ಡೌನ್ ಕಾರಣದಿಂದ ಟ್ರಕ್ ನಲ್ಲಿ ವಿವಿಧ ರಾಜ್ಯಗಳಲ್ಲಿರುವ ತಮ್ಮ ಮನೆಗೆಳಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ರಾಜಸ್ಥಾನದಿಂದ ಟ್ರಕ್ ನಲ್ಲಿ ಹೊರಟಿದ್ದ ಈ ಕಾರ್ಮಿಕರು ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ. ಗಾಯಗೊಂಡವರನ್ನು ಉತ್ತರಪ್ರದೇಶದ ಔರಿಯಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಧಿಕಾರಿಗಳು ಸೇರಿದಂತೆ ಪೊಲೀಸರು ಸ್ಥಳಕ್ಕಾಗಮಿಸಿದ್ದು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಕೋವಿಡ್ 19 ಕಾರಣದಿಂದ ದೇಶದಲ್ಲಿ ಲಾಕ್ ಡೌನ್ ಮಾರ್ಚ್ ನಲ್ಲಿ ಜಾರಿಯಾದಾಗಿಂದ ಸಾವಿರಾರು ವಲಸೆ ಕಾರ್ಮಿಕರು ರಸ್ತೆಯ ಮೂಲಕ ನಡೆದೇ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಕಳೆದೊಂದು ತಿಂಗಳಿಂದ ಹಲವು ವಲಸೆ ಕಾರ್ಮಿಕರು ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಮೇ 14 ರಂದು ಮಹಾರಾಷ್ಟ್ರದಿಂದ ತಮ್ಮ ಊರುಗಳಿಗೆ ತೆರಳುತ್ತಿದ್ದ 8 ಜನ ವಲಸೆ ಕಾರ್ಮಿಕರು ರಸ್ತೆ ಅವಘಡಕ್ಕೆ ತುತ್ತಾಗಿ ಮೃತರಾಗಿದ್ದರು.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿದ್ದು ಕುಟುಂಬ ವರ್ಗಗಳಿಗೆ ಸಾಂತ್ವಾನ ತಿಳಿಸಿದ್ದಾರೆ.