ಕುಂದಾಪುರ: ಕುಂದಾಪುರ ನಗರದಲ್ಲಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬಂದ ನೂರಾರು ಮಂದಿ ವಲಸೆ ಕಾರ್ಮಿಕರು ವಾಸಿಸುತ್ತಿದ್ದು, ರಾತ್ರಿಹೊತ್ತು ಅವರು ತಂಗಲು ಯಾವುದೇ ಸೂಕ್ತ ವಸತಿ ಸೌಕರ್ಯ ಇಲ್ಲದೇ ಇರುವುದನ್ನು ಗಮನ ಹರಿಸಿದ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಅವರು ಜಿಲ್ಲಾಡಳಿತದ ನಿರ್ದೇಶನದಂತೆ ಕುಂದಾಪುರ ಪುರಸಭೆಯ ನೆರವಿನೊಂದಿಗೆ ವಲಸೆ ಕಾರ್ಮಿಕರಿಗೆ ವಸತಿ ಸೌಕರ್ಯವನ್ನು ಒದಗಿಸುವ ಬಗ್ಗೆ ಚಿಂತನೆ ನಡೆಸಿದ್ದು , ಈ ಬಗ್ಗೆ ಶುಕ್ರವಾರ ಕುಂದಾಪುರದಲ್ಲಿ ಸೂಕ್ತ ಸ್ಥಳಪರಿಶೀಲನೆಯನ್ನು ಅಧಿಕಾರಿಗಳೊಂದಿಗೆ ನಡೆಸಿದರು.
ಕುಂದಾಪುರ ಪುರಸಭೆಯು ಹೊಸ ಬಸ್ಸು ನಿಲ್ದಾಣದಲ್ಲಿ ನಿರ್ಮಿಸಿದ ವಾಣಿಜ್ಯ ಸಂಕೀರ್ಣದ ಎರಡನೇ ಮಹಡಿಯಲ್ಲಿ ವಲಸೆ ಕಾರ್ಮಿಕರಿಗೆ ತಾತ್ಕಾಲಿಕವಾಗಿ ರಾತ್ರಿ ಹೊತ್ತು ತಂಗಲು ವಸತಿ ನೀಡುವ ಬಗ್ಗೆ ವಿಶೇಷ ನೈಟ್ ಶಲ್ಟರ್ ನಿರ್ಮಿಸಲು ನಿರ್ಣಯಿಸದ ಬೆನ್ನಲ್ಲೇ ಕುಂದಾಪುರ ಉಪವಿಭಾಗಾಧಿಕಾರಗಳು ಇಲಾಖಾ ಅಧಿಕಾರಿಗಳೊಂದಿಗೆ ಈ ಸ್ಥಳವನ್ನು ಪರಿಶೀಲನೆ ನಡೆಸಿದರು. ಅಲ್ಲದೇ ಇಲ್ಲಿ ಕಾರ್ಮಿಕರಿಗೆ ತಂಗಲು ಅವಕಾಶ ಮಾಡಿಕೊಡುವ ಬಗ್ಗೆ ಹಾಗೂ ಅವರಿಗೆ ಬೇಕಾಗುವ ಶೌಚಾಲಯ, ವಿದ್ಯುತ್ ಮೊದಲಾದ ಮೂಲ ಸೌಕರ್ಯವನ್ನು ಕಲ್ಪಿಸುವ ಕುರಿತು ಮಾತುಕತೆ ನಡೆಸಿದರು.
ಗುರುವಾರ ರಾತ್ರಿ ಉಪವಿಭಾಗಾಧಿಕಾರಿ ಯವರು ನೆಹರೂ ಮೈದಾನದ ಸಾಲಾ ಪರಿಸರವನ್ನು ಭೇಟಿ ಮಾಡಿ ಅಲ್ಲಲ್ಲಿ ಮಲಗಿದ್ದ ಕಾರ್ಮಿಕರ ಸಮಸ್ಯೆಯನ್ನು ಆಲಿಸಿದರು ಮತ್ತು ಅವರಿಗೆ ಸೂಕ್ತ ವಸತಿ ನೀಡುವ ಕುರಿತು ಜಿಲ್ಲಾ ಡಳಿತದ ಗಮನಕ್ಕೆ ತಂದಿರುವುದಾಗಿ ಇದಕ್ಕೆ ಸುಕ್ತ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದರು. ಅಲ್ಲದೇ ಮಹಿಳೆಯರಿಗೆ ಪ್ರಸ್ತುತ ವಸತಿ ಶಾಲೆಯ ಒಂದು ಪಾರ್ಶ್ವದಲ್ಲಿ ರಾತ್ರಿಹೊತ್ತು ತಂಗಲು ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು. ಮುಂದೆ ಪುರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸ ಲಾಗಿರುವ 35 ಸೆಂಟ್ಸ್ ಜಾಗದಲ್ಲಿ ವಲಸೆ ಕಾರ್ಮಿಕರಿಗಾಗಿಯೇ ಕಟ್ಟಡ ನಿರ್ಮಿಸುವ ಮೂಲಕ ಅವರಿಗೆ ವಸತಿಯನ್ನು ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕುಂದಾಪುರ ಠಾಣಾ ಎಸ್.ಇ. ನಾಸಿರ್ ಹುಸೇನ್, ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್, ಕಾರ್ಮಿಕ ನಿರೀಕ್ಷಕ ಸತ್ಯನಾರಾಯಣ ಬಿ.ಎಸ್., ಸಮಾಜ ಸೇವಕ ಹುಸೇನ್ ಹೈಕಾಡಿ ಮೊದಲಾದವರು ಉಪಸ್ಥಿತರಿದ್ದರು.