ಬೆಂಗಳೂರು: ಬಿಜೆಪಿ ಯುವ ಮೋರ್ಚಾದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಧ್ಯರಾತ್ರಿಯೇ 71ನೇ ಸ್ವಾತಂತ್ರೋತ್ಸವವನ್ನು ಆಚರಿಸಿ ಸಂಭ್ರಮಿಸಲಾಯಿತು. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿ ಮಧ್ಯರಾತ್ರಿ 12 ಗಂಟೆಗೆ ದೇಶ ಬಿಟ್ಟು ಹೋಗಿದರ ನೆನಪಿಗಾಗಿ ಸೋಮವಾರ ಮಧ್ಯರಾತ್ರಿ 12ಗೆ ಸರಿಯಾಗಿ ಆಚರಿಸಲಾಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಧ್ವಜಾರೋಹಣ ನೆರವೇರಿಸಿ ಎಲ್ಲರಿಗೂ ಸ್ವಾತಂತ್ರೋತ್ಸವದ ಶುಭ ಕೋರಿದರು. ಮಧ್ಯರಾತ್ರಿಯ ಸ್ವಾತಂತ್ರೋತ್ಸವಕ್ಕೂ ಮುನ್ನಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಮಿಡ್‌ನೈಟ್ ಫ್ರೀಡಂ ಮ್ಯಾರಥಾನ್ ಆಯೋಜನೆ ಮಾಡಲಾಗಿತ್ತು.
ಸುಮಾರು ಮೂರು ಕಿಲೋ ಮೀಟರ್ ದೂರ ಬಿಜೆಪಿ ಯುವ ಕಾರ್ಯಕರ್ತರು ದೇಶಭಕ್ತಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷೆ ಪೂನಂ ಮಹಾಜನ್, ಉಪಾಧ್ಯಕ್ಷ ಮಧುಕೇಶ್ವರ ದೇಸಾಯಿ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ಪ್ರತಾಪ್ ಸಿಂಹ, ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಪ್ರಮುಖರು ಜತೆಯಾಗಿದ್ದರು.
ಸ್ವಾತಂತ್ರೋತ್ಸವ ದಿನಾಚರಣೆಯ ಅಂಗವಾಗಿ ರಾತ್ರಿ 8 ಗಂಟೆಗೆ ನೂರಾರು ಯುವಕರು ಸಮಾವೇಶಗೊಂಡಿದ್ದರು. ಈ ವೇಳೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರಿಂದ “ಜೈ ಹೋ’ ಸೇರಿದಂತೆ ಹಲವಾರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಇದರೊಂದಿಗೆ ಹಲವಾರು ಕಲಾ ತಂಡಗಳು ದೇಶಭಕ್ತಿ ನೃತ್ಯವನ್ನು ಪ್ರದರ್ಶಿಸುವ ಮೂಲಕ ದೇಶಭಕ್ತಿ ಮೆರೆದರು.
ಇದರೊಂದಿಗೆ ನಗರದ ಹಲವಾರು ಭಾಗಗಳಲ್ಲಿ ವಿವಿಧ ಸಂಘಟನೆಗಳು ಮಧ್ಯರಾತ್ರಿ 12 ಗಂಟೆಗೆ ಧ್ವಜಾರೋಹಣ ಮಾಡುವ ಮೂಲಕ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ, ಜನಗಣಮನ ಹಾಡುವ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು. ಇದರೊಂದಿಗೆ 12 ಗಂಟೆಯಾಗುತ್ತಿದ್ದಂತೆಯೇ ಯುವ ಜನತೆ ಸಾಮಾಜಿಕ ಜಾಲತಾಣ ಹಾಗೂ ವಾಟ್ಸ್‌ಆಪ್‌ನಲ್ಲಿ ಸ್ವಾತಂತ್ರೋತ್ಸವ ಶುಭಾಶಯಗಳ ವಿನಿಮಯ ನಡೆಯಿತು.