ವಿಜಯಪುರ: ನಿವೃತ್ತಿ ಅಂಚಿನಲ್ಲಿರುವ ಬಿಸಿಯೂಟ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ತಮ್ಮ ಬೇಡಿಕೆಗಳ ಫಲಕಗಳನ್ನು ಪ್ರದರ್ಶಿಸಿ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎಚ್.ಟಿ.ಮಲ್ಲಿಕಾರ್ಜುನ, ಕಳೆದ 20 ವರ್ಷಗಳಿಂದ ಪುಡಿಗಾಸಿನ ವೇತನ ನೀಡಿ ದಿನವಿಡಿ ಸೇವೆ ತೆಗೆದುಕೊಂಡು ದಿಢೀರನೇ ಯಾವುದೇ ಪರಿಹಾರ ಇಲ್ಲದೆ ಬಿಸಿಯೂಟ ಕಾರ್ಯಕರ್ತೆಯರನ್ನು ಮನೆಗೆ ಕಳುಹಿಸಿರುವ ರಾಜ್ಯ ಸರ್ಕಾರದ ಕ್ರಮ ಅಮಾನವೀಯ ಎಂದು ಹರಿಹಾಯ್ದರು.
ರಾಜ್ಯಾದ್ಯಂತ ಮಕ್ಕಳಿಗೆ ಜ್ಞಾನದ ಹಸಿವನ್ನು ನೀಗಿಸುವ ಶಾಲೆಗಳಲ್ಲಿ ಹೊಟ್ಟೆ ಹಸಿವನ್ನು ನೀಗಿಸುವ ಬಿಸಿಯೂಟ ಕಾರ್ಮಿಕರು ತಮ್ಮ ಇಡಿ ಯವ್ವನವನೇ° ಈ ಕೆಲಸದಲ್ಲಿ ಸವೆಸಿದ್ದಾರೆ. ಇಂದಿನ ಬೆಲೆಯೇರಿಕೆ ದಿನಗಳಿಗೆ ಹೋಲಿಸಿದ್ದಲ್ಲಿ ಅತ್ಯಂತ ಕಡಿಮೆ ಗೌರವಧನದಲ್ಲಿ ದುಡಿಯುವಂತಹ ಪರಿಸ್ಥಿತಿ ಇದೆ ಎಂದು ವಿವರಿಸಿದರು.
ಸಂಘಟನೆ ಜಿಲ್ಲಾ ಸಂಚಾಲಕಿ ಶಶಿಕಲಾ ಮ್ಯಾಗೇರಿ ಮಾತನಾಡಿ, ಇದೀಗ ನಮ್ಮನ್ನು ರಾಜ್ಯ ಸರ್ಕಾರವು 60 ವರ್ಷವಾಗಿದೆ ಎಂಬ ನೆಪವೊಡ್ಡಿ ಯಾವುದೇ ಪರಿಹಾರ ನೀಡದೇ ನಿವೃತ್ತಿ ಹೆಸರಿನಲ್ಲಿ ಸುಮಾರು 12 ಸಾವಿರ ಬಿಸಿಯೂಟ ಕಾರ್ಮಿಕರನ್ನು ಮನೆಗೆ ಕಳಿಸಲು ಆದೇಶ ನೀಡಿದೆ. ಈ ಸರಕಾರದ ನೀತಿಯನ್ನು ಇಡಿ ಬಿಸಿಯೂಟ ಕಾರ್ಯಕರ್ತೆಯರು ಇದನ್ನು ಪ್ರತಿಭಟಿಸಬೇಕೆಂದು ಕರೆ ನೀಡಿದರು.
Related Articles
ಸುಮಾರು ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಬಿಸಿಯೂಟ ಕಾರ್ಯಕರ್ತೆಯರಿಗೆ ನಿವೃತ್ತಿ ವೇತನ ಅಥವಾ ಇಡಿಗಂಟು ಎರಡರಲ್ಲಿ ಯಾವುದಾದರೂ ಒಂದನ್ನೂ ಕೊಡದೇ ಕೆಲಸದಿಂದ ಹೊರ ಹಾಕುತ್ತಿರುವುದು ಅತ್ಯಂತ ಅಮಾನವೀಯ ಎಂದು ಅಳಲು ತೋಡಿಕೊಂಡರು.
ಸಹ ಸಂಚಾಲಕಿ ಬಸಮ್ಮ ಬೋಳಿ ಮಾತನಾಡಿ, ಸರ್ಕಾರ ಕೂಡಲೇ ಕ್ರಮವಹಿಸಿ ಈ ಕಾರ್ಯಕರ್ತೆಯರ ನಿವೃತ್ತಿ ಜೀವನ ಭದ್ರತೆಗಾಗಿ, ನಿವೃತ್ತಿ ವೇತನ ಅಥವಾ ಇಡಿಗಂಟು ನಿಗದಿ ಮಾಡಿ ಘೋಷಣೆ ಮಾಡಬೇಕು. ನಿವೃತ್ತಿ ವೇತನ ಅಥವಾ ಇಡಿಗಂಟು ಎರಡರಲ್ಲಿ ಯಾವುದಾದರೂ ಒಂದು ನೀಡುವವರೆಗೆ ಈ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆದು ಹಾಕದೆ ಇವರನ್ನು ಸೇವೆಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಯಾವುದೇ ಪರಿಹಾರ ನೀಡದೇ 12 ಸಾವಿರ ಅಕ್ಷರ ದಾಸೋಹ ಕಾರ್ಮಿಕರನ್ನು ನಿವೃತ್ತಿಗೊಳಿಸಿ ಹೊರಡಿಸಿರುವ ಸರ್ಕಾರದ ಆದೇಶನ್ನು ಈ ಕೂಡಲೇ ಹಿಂಪಡೆಯುವುದು, ನಿವೃತ್ತಿಯಾಗುವ ಅಕ್ಷರ ದಾಸೋಹ ಕಾರ್ಮಿಕರಿಗೆ ಜೀವನ ಯೋಗ್ಯ ನಿವೃತ್ತಿ ವೇತನ ಅಥವಾ ಕನಿಷ್ಟ ರೂ. 5 ಲಕ್ಷ ಇಡಿಗಂಟು ಘೋಷಿಸಬೇಕು. ನಿವೃತ್ತಿಯಾಗುವ ಅಕ್ಷರ ದಾಸೋಹ ಕಾರ್ಮಿಕರು ಇಚ್ಚಿಸಿದಲ್ಲಿ ಅವರನ್ನೇ ಕೆಲಸದಲ್ಲಿ ಮುಂದುವರಿಸಿ. ಅಂಗನವಾಡಿ ಮಾದರಿಯಂತೆ ಅವರ ಹುದ್ದೆಯಲ್ಲಿ ಅವರ ಕುಟುಂಬದ ಸದಸ್ಯರನ್ನು ನೇಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಬಾನು ಕಲಾದಗಿ, ಕಮಲಾಬಾಯಿ ಪಾಟೀಲ, ಹಣಮವ್ವ ಛತ್ರಿ, ಸುನಂದಾ ಪರಡಿಮಠ, ಸಾವಿತ್ರಿ ನಾಟೀಕರ, ಸಾವಿತ್ರಿ ಕಾಮನಕೇರಿ, ರಾಜಬಿ ಚಪ್ಪರಬಂದ ಇದ್ದರು.