Advertisement
ಲೀಗ್ ಹಂತದ ತನಕದ ಭಾರತದ ಆಟವೂ ಈ ನಿರೀಕ್ಷೆಗೆ ತಕ್ಕಂತೆ ಇತ್ತು. ಇಂಗ್ಲಂಡ್ ಎದುರು ಸೋತಿರುವುದನ್ನು ಬಿಟ್ಟರೆ ಉಳಿದ ಎಂಟು ಪಂದ್ಯಗಳಲ್ಲಿ ಕೊಹ್ಲಿ ಪಡೆ ಅಧಿಕಾರಯುತ ಗೆಲುವನ್ನೇ ಸಾಧಿಸಿತ್ತು.ಅಫ್ಘಾನಿಸ್ಥಾನದ ವಿರುದ್ಧ ತುಸು ತಿಣುಕಾಡಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಹೇಳಿಕೊಳ್ಳುವಂಥ ಲೋಪಗಳು ಇರಲಿಲ್ಲ. ಇಂಗ್ಲಂಡ್ ವಿರುದ್ಧವೂ ವೀರೋಚಿತವಾಗಿಯೇ ಸೋತಿತ್ತು. ಆದರೆ ಪ್ರಬಲ ತಂಡಗಳನ್ನು ನಿರಾಯಾಸವಾಗಿ ಮಣಿಸಿ ದುರ್ಬಲ ತಂಡಗಳ ಎದುರು ಕಂಗೆಡುವ ಅಭ್ಯಾಸ ವಿಶ್ವಕಪ್‌ನಲ್ಲೂ ಮುಂದುವರಿಯಿತು ಮತ್ತು ಕಡೆಗೆ ಇದುವೇ ತಂಡಕ್ಕೆ ಮಾರಕವಾಗಿ ಪರಿಣಮಿಸಿತು. ಲೀಗ್ ಹಂತದಲ್ಲಿ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದ್ದ ಅಫ್ಘಾನಿಸ್ಥಾನದ ಎದುರು ಕಷ್ಟಪಟ್ಟು ಗೆದ್ದರೆ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ಎದುರು ಪರಾಭವ ಅನುಭವಿಸಿತು. ಭಾರತಕ್ಕೆ ಹೋಲಿಸಿದರೆ ನ್ಯೂಜಿಲ್ಯಾಂಡ್ ತಂಡ ಅಷ್ಟೇನೂ ಪ್ರಬಲವಲ್ಲ. ದುರ್ಬಲ ತಂಡಗಳ ಎದುರು ನಿರ್ಲಕ್ಷ್ಯದಿಂದ ಆಡುವ ಅಭ್ಯಾಸದಿಂದಾಗಿಯೇ ಸೆಮಿಫೈನಲ್‌ಗೆ ಭಾರತ ತನ್ನ ವಿಶ್ವಕಪ್ ಅಭಿಯಾನವನ್ನು ಮುಗಿಸಬೇಕಾಯಿತು.
ಕೆಲವೇ ಆಟಗಾರರನ್ನು ನಂಬಿಕೊಂಡಿರುವುದು ಹಿಂದಿನಿಂದಲೂ ಭಾರತ ತಂಡದ ಕೆಟ್ಟ ಅಭ್ಯಾಸ. ಹಿಂದೆ ಸಚಿನ್ ತೆಂಡುಲ್ಕರ್ ಮೇಲೆ ಎಲ್ಲ ಭಾರವನ್ನು ಹಾಕಲಾಗುತ್ತಿತ್ತು. ಈಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಧೋನಿ ಅವರ ಹೆಗಲ ಮೇಲೆ ತಂಡವನ್ನು ಗೆಲ್ಲಿಸುವ ಭಾರ ಇದೆ. ಅವರು ಉತ್ತಮವಾಗಿ ಆಡಿದರೆ ಮಾತ್ರ ಉಳಿದವರ ಬ್ಯಾಟಿನಿಂದ ರನ್ ಬರುತ್ತದೆ. ವಿಶ್ವದರ್ಜೆಯ ತಂಡಕ್ಕೆ ಈ ರೀತಿಯ ಅವಲಂಬನೆ ಶೋಭೆಯಲ್ಲ. ಇದಕ್ಕೆ ಮಾದರಿಯಾಗಿ ಆಸ್ಟ್ರೇಲಿಯ ತಂಡವನ್ನು ತೆಗೆದುಕೊಳ್ಳಬಹುದು. ಅಲ್ಲಿ ಓಪನಿಂಗ್ ವಿಫಲವಾದರೂ ಅನಂತರದವರು ಕೆಚ್ಚಿನಿಂದ ಹೋರಾಡಿ ತಂಡವನ್ನು ದಡ ಮುಟ್ಟಿಸುವ ಛಾತಿ ಹೊಂದಿದ್ದಾರೆ. ಯಾರೂ ಇಲ್ಲದಿದ್ದರೆ ಕೊನೆಗೆ ಬೌಲರ್‌ಗಳು ಕೂಡಾ ಬ್ಯಾಟ್ ಬೀಸುತ್ತಾರೆ. ಇಂಥ ಹೋರಾಟದ ಕೆಚ್ಚನ್ನು ಪ್ರದರ್ಶಿಸುವಲ್ಲಿ ಭಾರತ ನಿರಂತರ ಎಡವುತ್ತಿದೆ. ಆಟದಲ್ಲಿ ಒತ್ತಡವನ್ನು ನಿಭಾಯಿಸುವುದೂ ಒಂದು ಕಲೆ. ಅದರಲ್ಲೂ ಚೇಸಿಂಗ್ ವೇಳೆ ತೀವ್ರ ಒತ್ತಡ ಇರುವಾಗ ಸಮಾಧಾನ ಚಿತ್ತದಿಂದ ಆಡುವ ಕಲೆ ಕರಗತವಾಗಿರಬೇಕು. ಕೆ.ಎಲ್.ರಾಹುಲ್ ಬಳಿ ಈ ಕಲೆ ಇದ್ದರೂ ಸೆಮಿಫೈನಲ್‌ನಲ್ಲಿ ಅದು ಕೈಕೊಟ್ಟಿತು. ಕನಿಷ್ಠ 10 ಓವರ್ ತನಕ ಆರಂಭಿಕ ಮೂವರ ಪೈಕಿ ಒಬ್ಬರು ಕ್ರೀಸ್ ಕಚ್ಚಿ ಆಡಿದ್ದರೆ 240 ರನ್ ಬೆನ್ನಟ್ಟುವುದೇನು ದೊಡ್ಡ ಸವಾಲಾಗಿರಲಿಲ್ಲ. ಕೋಚ್‌ಗಳು ಆಕ್ರಮಣಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ತಾಳ್ಮೆಯಿಂದ ಆಡುವ ಶೈಲಿಗೂ ನೀಡಬೇಕಾಗಿದೆ. ಎಲ್ಲ ಪಂದ್ಯಗಳಿಗೆ 20-20 ಶೈಲಿ ಸೂಕ್ತವಾಗುವುದಿಲ್ಲ ಎನ್ನುವುದನ್ನು ತಿಳಿಸಿಕೊಡಬೇಕು.
Related Articles
Advertisement