Advertisement

ಬಿಸಿಯೂಟ ನೌಕರರಿಗೆ ವೇತನವಿಲ್ಲದೆ 5 ತಿಂಗಳು

08:25 AM Aug 29, 2022 | Team Udayavani |

ಕುಂದಾಪುರ: ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸುವ ಅಕ್ಷರ ದಾಸೋಹ ಸಿಬಂದಿ ಕೆಲಸವೆಲ್ಲ ಬಿಟ್ಟು, ರಾಜಧಾನಿ ಬೆಂಗಳೂರಿಗೆ ತೆರಳಿ ಧರಣಿ ಕುಳಿತರೂ ವೇತನ ಮಾತ್ರ ಇನ್ನೂ ಪಾವತಿಯಾಗಿಲ್ಲ. 5 ತಿಂಗಳಿನಿಂದ ಬಿಸಿಯೂಟ ನೌಕರರಿಗೆ ವೇತನ (ಗೌರವ ಧನ)ವೇ ಆಗಿಲ್ಲ. ಅದನ್ನೇ ನಂಬಿಕೊಂಡಿರುವ ಉಡುಪಿ, ದ.ಕ. ಸಹಿತ ರಾಜ್ಯದ 1.18 ಲಕ್ಷ ಅಕ್ಷರ ದಾಸೋಹ ಸಿಬಂದಿ ಸಂಕಷ್ಟ ಅನುಭವಿಸುವಂತಾಗಿದೆ.

Advertisement

ಈ ಶೈಕ್ಷಣಿಕ ವರ್ಷ ಮೇ 16ರಿಂದ ಆರಂಭಗೊಂಡಿದ್ದರೂ ಅಕ್ಷರ ದಾಸೋಹ ಸಿಬಂದಿಯು ಕಳೆದ ಎಪ್ರಿಲ್‌ನಲ್ಲಿ 10 ದಿನ ಕೆಲಸ ನಿರ್ವಹಿಸಿದ್ದರು. ಮೇಯಲ್ಲಿ 15 -16 ದಿನ, ಜೂನ್‌, ಜುಲೈಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಆಗಸ್ಟ್‌ ಸಹ ಮುಗಿಯುವ ಹಂತದಲ್ಲಿದೆ. ಆದರೆ ಶಾಲಾರಂಭವಾದಾಗಿನಿಂದ ಈವರೆಗೆ ಬಿಸಿಯೂಟ ನೌಕರರಿಗೆ ಸರಕಾರ ಸಂಬಳವೇ ನೀಡಿಲ್ಲ.

5,079 ಮಂದಿ
ಉಡುಪಿ ಜಿಲ್ಲೆಯಲ್ಲಿ 1,866 ಹಾಗೂ ದ.ಕ.ದಲ್ಲಿ 3,213 ಮಂದಿ ಸೇರಿದಂತೆ ಒಟ್ಟು ಉಭಯ ಜಿಲ್ಲೆಗಳಲ್ಲಿ 5,079 ಮಂದಿ ಅಕ್ಷರ ದಾಸೋಹ ಸಿಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ರಾಜ್ಯದಲ್ಲಿ 47,250 ಮಂದಿ ಅಡುಗೆ ತಯಾರಕರು ಹಾಗೂ 71,336 ಮಂದಿ ಅಡುಗೆ ಸಹಾಯಕರು ಸೇರಿ ಒಟ್ಟು 1,18,586 ಮಂದಿ ಅಕ್ಷರ ದಾಸೋಹ ಸಿಬಂದಿಯಿದ್ದಾರೆ. ಈ ಪೈಕಿ ಹೊಸ ಆದೇಶದಂತೆ ಈ ಶೈಕ್ಷಣಿಕ ಸಾಲಿನಿಂದ ಅಡುಗೆ ತಯಾರಕರಿಗೆ ಮಾಸಿಕ 3,700 ರೂ. ಹಾಗೂ ಸಹಾಯಕರಿಗೆ ಮಾಸಿಕ 3,600 ರೂ. ಗೌರವ ಧನವನ್ನು ಸರಕಾರ ನೀಡಲಾಗುತ್ತಿದೆ.

ನಾವು ಎಪ್ರಿಲ್‌ನಲ್ಲಿ 10 ದಿನ ಹಾಗೂ ಮೇಯಲ್ಲಿ 12ರಿಂದ ಕೆಲಸ ಮಾಡಿದ್ದೇವೆ. ಜೂನ್‌, ಜುಲೈ ಪೂರ್ತಿ ಕೆಲಸ ಮಾಡಿದ್ದು, ಆಗಸ್ಟ್‌ ಆದರೂ ಈವರೆಗೆ ವೇತನ ಕೊಟ್ಟಿಲ್ಲ. ಸರಕಾರ ದಯವಿಟ್ಟು ವೇತವನ್ನು ಪ್ರತೀ ತಿಂಗಳು ನೀಡುವಂತಾಗಲಿ. ತಿಂಗಳ 5ನೇ ತಾರೀಕು ಬಿಡಿ, ಪ್ರತೀ ತಿಂಗಳ 10ರೊಳಗೆ ಆದರೂ ಕೊಡುವ ಕೆಲಸವನ್ನು ಮಾಡಲಿ. ನಾವು ಅದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದು, ಹೀಗೆ ಆದರೆ ತುಂಬಾ ಕಷ್ಟವಾಗುತ್ತಿದೆ.
– ಸಿಂಗಾರಿ ಪೂಜಾರ್ತಿ, ಅಧ್ಯಕ್ಷೆ, ಕುಂದಾಪುರ ಅಡುಗೆ ಸಿಬಂದಿ ಸಂಘ

ಬಿಸಿಯೂಟ ನೌಕರರ ಖಾತೆಗೆ ನೇರವಾಗಿ ಹಣ ಹಾಕುವಂತಹ (ಡಿಬಿಟಿ- ಡೈರೆಕ್ಟ್ ಬೆನಿಫಿಶಿಯರಿ ಟ್ರಾನ್ಸ್‌ಫರ್‌) ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಅದಕ್ಕೆ ಸಂಬಂಧಿಸಿದಂತೆ ಎಲ್ಲರ ಆಧಾರ್‌ ಸಹಿತ ದಾಖಲೆ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ. ಈ ಕಾರಣಕ್ಕೆ ವಿಳಂಬವಾಗಿದೆ. ಶೀಘ್ರ ಖಾತೆಗೆ ಗೌರವ ಧನ ಜಮೆಯಾಗಲಿದೆ. ಮೇ ತಿಂಗಳ ಪಾವತಿ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಬಾಕಿಯದ್ದು ಪಾವತಿಯಾಗಲಿದೆ.
– ನಾರಾಯಣ ಗೌಡ ಜಂಟಿ ನಿರ್ದೇಶಕರು,
ಮಧ್ಯಾಹ್ನದ ಬಿಸಿಯೂಟ ಯೋಜನೆ, ಬೆಂಗಳೂರು

Advertisement

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next