ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್ ಮಾಡಲು ತೀರ್ಮಾನ ಮಾಡಲಾಗಿದೆ. ಈ ಹಂತದಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈಕ್ರೋ ಕಂಟೋನ್ಮೆಂಟ್ ಝೋನ್ ನಲ್ಲಿ ಸ್ಥಳೀಯ ಪೊಲೀಸರು, ಸ್ಥಳೀಯ ಅಧಿಕಾರಿಗಳ ಒಂದು ಸಮಿತಿ ರಚನೆ ಮಾಡುತ್ತೇವೆ. ಸೋಂಕಿತರಿಗೆ ಔಷಧ ವಿತರಣೆ ಮಾಡಲು ಮತ್ತು ಸೋಂಕು ಹರಡದಂತೆ ನಿಗಾವಹಿಸಲು ಈ ಸಮಿತಿ ಕೆಲಸ ಮಾಡಲಿದೆ. ಲಾಕ್ ಡೌನ್ ಮತ್ತು ಕೆಲ ಓಡಾಟಗಳಿಗೆ ನಿರ್ಭಂದ ಜಾರಿಗೆ ತರಲು ಸ್ಥಳೀಯ ಆಡಳಿತಕ್ಕೆ ಹೊಣೆ ನೀಡಲಾಗಿದೆ ಎಂದರು.
ಸೋಂಕು ಹೆಚ್ಚಳವಿರುವ ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಹಾಗೂ ಪಿಡಿಓಗಳ ಜೊತೆ ನಾಳೆ ಸಿಎಂ ಯಡಿಯೂರಪ್ಪ ವೀಡಿಯೋ ಕಾನ್ಪೆರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಕಡಿಮೆ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.
ಇದನ್ನೂ ಓದಿ:11 ದಿನಗಳ ಬಳಿಕ ಮೇಲಕ್ಕೆತ್ತಿದ ಅಲಯನ್ಸ್ ಟಗ್: ಮೂವರು ಸಿಬ್ಬಂದಿಗಳ ದೇಹಗಳ ಶೋಧನೆ
ರಾಜ್ಯದ ಕೋವಿಡ್ ಸ್ಥಿತಿಗತಿ ಇಂದು ಸಂಜೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅಲ್ಲದೇ ಬ್ಲಾಕ್ ಫಂಗಸ್ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ. ಬ್ಲಾಕ್ ಫಂಗಸ್ ಸಂಬಂಧ ನಿನ್ನೆ ಕೇಂದ್ರ ಸಚಿವ ಸದಾನಂದ ಗೌಡರ ಜೊತೆ ಚರ್ಚೆ ಮಾಡಲಾಗಿದೆ. 1000ಕ್ಕೂ ಹೆಚ್ಚು ಇಂಜೆಕ್ಷನ್ ಕೊಡುವ ಬಗ್ಗೆ ಭರವಸೆ ಅವರು ನೀಡಿದ್ದಾರೆ. ಮಕ್ಕಳಿಗೆ ಸೋಂಕು ತಾಗಿದರೆ ಅವರಿಗೆ ಜಿಲ್ಲೆಗಳಲ್ಲಿ ವಿಶೇಷ ವಾರ್ಡ್ ಹಾಗೂ ಐಸಿಯು ಬೆಡ್ ವ್ಯವಸ್ಥೆ ಮಾಡುವ ಬಗ್ಗೆ ನಿರ್ಧಾರ ಮಾಡಲಾಗಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.