Advertisement

ಸಿಎಬಿಯಿಂದ ಲಾಭವಾಗುವುದು ಹಿಂದುಳಿದ ವರ್ಗದ ನಿರಾಶ್ರಿತರಿಗೇ

11:25 AM Dec 15, 2019 | mahesh |

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿನ ಮಿಯಾ ಮಿಟ್ಟೂ ಹೆಸರು ಕೇಳಿದರೆ ಅಲ್ಲಿನ ಹಿಂದು, ಕ್ರಿಶ್ಚಿಯನ್‌, ಸಿಕ್ಖ್ ಕುಟುಂಬಗಳು ನಡುಗಲಾರಂಭಿಸುತ್ತವೆ. ಈ ಸಮುದಾಯಗಳ ಹೆಣ್ಣು ಮಕ್ಕಳನ್ನು ಅಪಹರಿಸಿ ಮತಾಂತರ ಮಾಡಿಸುವಲ್ಲಿ ಈ ವ್ಯಕ್ತಿ ಕುಖ್ಯಾತ. ಮಿಯಾನನ್ನು ತಮ್ಮ ಪಕ್ಷಕ್ಕೆ ಸೇರುವಂತೆ ಇಮ್ರಾನ್‌ ಖಾನ್‌ ಆಹ್ವಾನ ನೀಡಿದ್ದರು!

Advertisement

ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದಿರುವ ಹಿಂದೂ ನಿರಾಶ್ರಿತರಲ್ಲಿ ಶೇ.80 ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯ ಮತ್ತು ಬುಡಕಟ್ಟು ಜನಾಂಗಕ್ಕೆ ಸೇರಿದವರು. ಬಿಎಸ್‌ಪಿಗೆ ವಿವೇಚನೆಯೇನಾದರೂ ಇದ್ದಿದ್ದರೆ ಇವರನ್ನು ರತ್ನಗಂಬಳಿ ಹಾಸಿ ಸ್ವಾಗತಿಸಬೇಕಿತ್ತು. ಏಕೆಂದರೆ ದಶಕಗಳಿಂದ ಅದು ದಲಿತ ಸಮುದಾಯವನ್ನು ವೋಟ್‌ಬ್ಯಾಂಕ್‌ ಆಗಿ ಮಾಡಿಕೊಂಡು ಬಂದಿರುವ ಪಕ್ಷ. ಇನ್ನು ಅಸ್ಸಾಂ ಮತ್ತು ಇತರ ರಾಜ್ಯಗಳ ಜನರು ಪೌರತ್ವ ಮಸೂದೆಯನ್ನು ವಿರೋಧಿಸುವುದು ಬೇರೆಯದ್ದೆ ಕಾರಣಕ್ಕೆ ಹಾಗೂ ನಮ್ಮ ತಥಾಕಥಿತ ಜಾತ್ಯತೀತ ರಾಜಕೀಯ ಪಕ್ಷಗಳು ವಿರೋಧಿಸುತ್ತಿರುವುದೇ ಬೇರೆಯ ಕಾರಣಕ್ಕೆ.

ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಮಂಜೂರುಗೊಂಡ ಬಳಿಕ ಅದಕ್ಕಿರುವ ವಿರೋಧವೂ ತೀವ್ರಗೊಳ್ಳುತ್ತಿದೆ. ಅಸ್ಸಾಂ ಹಾಗೂ ಈಶಾನ್ಯದ ಇತರ ರಾಜ್ಯಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪರಿಸ್ಥಿತಿಯನ್ನು ತಹಬಂದಿಗೆ ತರಲು ಸೇನೆಯನ್ನು ರವಾನಿಸಲಾಗಿದೆ. ಪೌರತ್ವ ಮಸೂದೆಗೆ ಈಶಾನ್ಯ ರಾಜ್ಯಗಳಲ್ಲಿ ಎದುರಾಗಿರುವ ವಿರೋಧವೂ ಹಾಗೂ ರಾಜಕೀಯ ಪಕ್ಷಗಳಿಂದ ಎದುರಾಗಿರುವ ವಿರೋಧವೂ ಒಂದೇ ರೀತಿಯದ್ದು ಎನ್ನುವ ತಪ್ಪು ಕಲ್ಪನೆ ದೇಶದಲ್ಲಿದೆ. ಅಸ್ಸಾಂ ಮತ್ತು ಇತರ ರಾಜ್ಯಗಳ ಜನರು ಪೌರತ್ವ ಮಸೂದೆಯನ್ನು ವಿರೋಧಿಸುವುದು ಬೇರೆಯದ್ದೆ ಕಾರಣಕ್ಕೆ ಹಾಗೂ ನಮ್ಮ ತಥಾಕಥಿತ ಜಾತ್ಯತೀತ ರಾಜಕೀಯ ಪಕ್ಷಗಳು ವಿರೋಧಿಸುತ್ತಿರುವುದೇ ಬೇರೆಯ ಕಾರಣಕ್ಕೆ. ಈಗ ಈಶಾನ್ಯ ರಾಜ್ಯಗಳ ವಿರೋಧವನ್ನು ಬದಿಗಿಟ್ಟು ರಾಜಕೀಯ ಪಕ್ಷಗಳ ವಿರೋಧದ ಕುರಿತು ಚರ್ಚಿಸುವ. ಮುಸ್ಲಿಮರನ್ನು ಹೊರಗಿಟ್ಟಿರುವ ಕಾರಣಕ್ಕೆ ಇದನ್ನು ಕೋಮುವಾದಿ ಮಸೂದೆ ಎಂದು ಕಾಂಗ್ರೆಸ್‌ ವಿರೋಧಿಸುತ್ತಿದೆ.

ನಿಜವಾದ ವಿಷಯ ಏನೆಂದರೆ ಇದು ಮೋದಿ ಸರಕಾರ ಹೊಸದಾಗಿ ರಚಿಸಿದ ಪೌರತ್ವ ಮಸೂದೆಯಲ್ಲ. 1955ರಲ್ಲಿ ಅಂದಿನ ಪ್ರಧಾನಿ ಜವಹರಲಾಲ್‌ ನೆಹರು ಆಡಳಿತ ಕಾಲದಲ್ಲೇ ಈ ಮಸೂದೆಯ ರಚನೆಯಾಗಿತ್ತು. ಆಗಲೂ ಮಸೂದೆ ವ್ಯಾಪ್ತಿಯಿಂದ ಮುಸ್ಲಿಮರನ್ನು ಹೊರಗಿಡಲಾಗಿತ್ತು. ಹಾಗಾದರೆ ನೆಹರು ಕೋಮುವಾದಿ ಮಸೂದೆಯನ್ನು ರಚಿಸಿದರು ಎಂದು ಕಾಂಗ್ರೆಸ್‌ ಹೇಳುತ್ತಿದೆಯೇ?

ಎರಡನೆಯದಾಗಿ, ಮಸೂದೆಯನ್ನು ತೀವ್ರವಾಗಿ ವಿರೋಧಿಸು ತ್ತಿರುವವರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಮುಖರು. ಅವರ ಪ್ರಕಾರ ಮಸೂದೆ ಭೇದಭಾವ ಮಾಡುತ್ತಿದೆ ಮತ್ತು ಕೋಮುವಾದಿಯಾಗಿದೆ. ಆದರೆ ಇದು ಅತಾರ್ಕಿಕವಾದ ವಾದ. ಏಕೆಂದರೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಯಾವುದೇ ಅಲ್ಪಸಂಖ್ಯಾತ ಸಮುದಾಯದ ನಡುವೆ ಮಸೂದೆ ಬೇಧಭಾವ ಎಣಿಸಿಲ್ಲ. ಏಕೆಂದರೆ ಮುಸ್ಲಿಮರು ಈ ಇಸ್ಲಾಮಿಕ್‌ ದೇಶಗಳಲ್ಲಿ ಅಲ್ಪಸಂಖ್ಯಾತ‌ರಲ್ಲವಲ್ಲ.

Advertisement

ಬಹುಜನ ಸಮಾಜವಾದಿ ಪಾರ್ಟಿ ಮಸೂದೆಯನ್ನು ವಿರೋಧಿಸುತ್ತಿರುವುದು ವಿಚಿತ್ರವಾಗಿದೆ, ಮಾತ್ರವಲ್ಲ ವಿಪರ್ಯಾ ಸವೂ ಆಗಿದೆ. ಈ ಮೂರು ದೇಶಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳು, ಸಿಕ್ಖರು ಮತ್ತು ಕ್ರೈಸ್ತರು ಅಮಾನವೀಯ ದೌರ್ಜನ್ಯಗಳನ್ನು, ಪೀಡನೆಯನ್ನು ಎದುರಿಸುತ್ತಿದ್ದಾರೆ ಎನ್ನುವುದು ಜಗತ್ತಿಗೇ ತಿಳಿದಿರುವ ಸತ್ಯ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದಿರುವ ಹಿಂದೂ ನಿರಾಶ್ರಿತರಲ್ಲಿ ಶೇ.80 ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯ ಮತ್ತು ಬುಡಕಟ್ಟು ಜನಾಂಗಕ್ಕೆ ಸೇರಿದವರು. ಬಿಎಸ್‌ಪಿಗೆ ವಿವೇಚನೆಯೇನಾದರೂ ಇದ್ದಿದ್ದರೆ ಇವರನ್ನು ರತ್ನಗಂಬಳಿ ಹಾಸಿ ಸ್ವಾಗತಿಸಬೇಕಿತ್ತು. ಏಕೆಂದರೆ ದಶಕಗಳಿಂದ ಅದು ದಲಿತ ಸಮುದಾಯವನ್ನು ವೋಟ್‌ಬ್ಯಾಂಕ್‌ ಆಗಿ ಮಾಡಿಕೊಂಡು ಬಂದಿರುವ ಪಕ್ಷ. ದುರದೃಷ್ಟವೆಂದರೆ ಇಂಥ ರಾಜಕೀಯ ವಿರೋಧಗಳಿಂದಾಗಿ ತಮ್ಮ ನೆಲದಲ್ಲೇ ಹಿಂದುಗಳು ನಿರಾಶ್ರಿತರಾಗಬೇಕಾಗಿದೆ.

ಇನ್ನು ಆಲ್‌ ಇಂಡಿಯಾ ಮಜಿಸ್‌-ಎ-ಇತ್ತೆಹಾದುಲ್‌ ಮುಸ್ಲಿಮೀನ್‌ ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿಯ ವಿರೋಧವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಅವರು ಮಂಡಿಸುತ್ತಿರುವ ವಾದಕ್ಕೆ ಯಾವ ದತ್ತಾಂಶದ ಬೆಂಬಲವೂ ಇಲ್ಲ, ಯಾವ ತರ್ಕವೂ ಇಲ್ಲ. ಸಂತ್ರಸ್ತ ಹಿಂದೂ ನಿರಾಶ್ರಿತರಿಗೆ ಸಹಾಯ ಮಾಡುವುದರಿಂದ ಹಿಂದು ಮತ್ತು ಮುಸ್ಲಿಮರ ನಡುವೆ ಅದ್ಹೇಗೆ ಭೇದಭಾವ ಕಾಣಿಸಿಕೊಳ್ಳಬಹುದು? ಅದ್ಹೇಗೆ ಓವೈಸಿ ಹೇಳುತ್ತಿರುವಂತೆ ದೇಶ ಇನ್ನೊಮ್ಮೆ ವಿಭಜನೆಯಾಗಬಹುದು ಎಂಬುದನ್ನು ಯಾರೂ ವಿವರಿಸುತ್ತಿಲ್ಲ.

ಈಗ ನಾವು ಪೌರತ್ವ ಮಸೂದೆಯನ್ನು ಏಕಾಗಿ ತರಬೇಕಾಯಿತು ಎಂಬುದನ್ನು ನೋಡೋಣ. ಇದಕ್ಕಿರುವ ಪ್ರಮುಖವಾದ ಕಾರಣವೆಂದರೆ ಮಾನವೀಯತೆ. ಸರಕಾರ ಈ ಮೂರು ದೇಶಗಳಲ್ಲಿ(ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ) ನರಕ ಯಾತನೆ ಅನುಭವಿಸುತ್ತಿರುವ ಹಿಂದುಗಳು, ಸಿಕ್ಖರು, ಬೌದ್ಧರು, ಕ್ರೈಸ್ತರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯದವರನ್ನು ಮಾನವೀಯ ನೆಲೆಯಲ್ಲಿ ರಕ್ಷಿಸಲು ಬಯಸಿದೆ.

ಯುರೋಪಿಯನ್‌ ಯೂನಿಯನ್‌ ಈ ವರ್ಷ ಪ್ರಕಟಿಸಿದ ವರದಿಯೊಂದು ಪ್ರತಿ ವರ್ಷ ಪಾಕಿಸ್ತಾನದಲ್ಲಿ 1000ಕ್ಕೂ ಹೆಚ್ಚು ಅಲ್ಪಸಂಖ್ಯಾತ ಸಮುದಾಯಗಳ ಬಾಲಕಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಮ್‌ಗೆ ಮತಾಂತರಿಸಲಾಗುತ್ತಿದೆ ಎಂಬುದನ್ನು ಅಂಕಿ ಅಂಶಗಳ ಸಮೇತ ಬಹಿರಂಗಪಡಿಸಿದೆ. ಅರ್ಥಾತ್‌, ದಿನಕ್ಕೆ ಮೂವರು ಅನ್ಯ ಸಮುದಾಯದ ಬಾಲಕಿಯರು ಅಲ್ಲಿ ಬಲವಂತದ ಮತಾಂತರಕ್ಕೊಳಗಾಗುತ್ತಾರೆ ಎಂದಾಯಿತು. ಒಂದು ಸಮುದಾಯವನ್ನು ನಿರ್ಮೂಲನ ಮಾಡಲು ಇದಕ್ಕಿಂತ ದೊಡ್ಡ ಅಸ್ತ್ರ ಇದೆಯೇ? ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಮಿಯಾ ಮಿಟ್ಟೂ, ಶರೀಫ್ ಮತ್ತು ಅಯೂಬ್‌ ಜಾನ್‌ರಂಥ ಮತಾಂಧ ಮುಖಂಡರಿಂದ ಈ ಬಲವಂತದ ಮತಾಂತ ರಗಳು, ಹತ್ಯೆಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಇವರಿಗೆಲ್ಲ ಪಾಕಿಸ್ತಾನದ ಸರಕಾರ, ನ್ಯಾಯಾಲಯಗಳು, ಪೊಲೀಸರು, ರಾಜಕಾರ ಣಿಗಳು, ಸೇನೆ ಮತ್ತು ಮಾಧ್ಯಮಗಳ ಸರ್ವ ಬೆಂಬಲವಿದೆ.

ದೇವನಿಂದೆ ಕಾಯಿದೆಯನ್ನು ಉಪಯೋಗಿಸಿ ಹಿಂದುಗಳು ಮತ್ತು ಸಿಕ್ಖರ ವ್ಯಾಪಾರ ವಹಿವಾಟನ್ನು ಕಿತ್ತುಕೊಳ್ಳಲಾಗಿದೆ. ಮೂರು ದೇಶಗಳಲ್ಲಿ ಹಿಂದುಗಳ ಮತ್ತು ಸಿಕ್ಖರ ಜನಸಂಖ್ಯೆ ಕಳವಳಕಾರಿಯಾಗಿ ಕುಸಿದಿರುವುದು ನಮ್ಮ ಮುಂದಿರುವ ವಾಸ್ತವ. ಪಾಕಿಸ್ತಾನದಲ್ಲಿ ಹಿಂದುಗಳ ಜನಸಂಖ್ಯೆ ಶೇ. 12ರಿಂದ ಶೇ. 2ಕ್ಕೆ ಕುಸಿ ದಿದೆ. ಬಾಂಗ್ಲಾದೇಶದಲ್ಲಿ ಶೇ.22ರಿಂದ ಶೇ.8ಕ್ಕೆ ಮತ್ತು ಅಫ್ಘಾನಿಸ್ತಾನದಲ್ಲಿ ಕೆಲವೇ ನೂರುಗಳಿಗೆ ಇಳಿದಿರುವುದು ಏನನ್ನು ಹೇಳುತ್ತಿದೆ? ಇಂಥ ಪರಿಸ್ಥಿತಿಯಲ್ಲಿ ಭಾರತ ವಿಭಜನೆಯ ಪರಿಣಾಮವಾಗಿ ಸೃಷ್ಟಿಯಾದ ಈ ನತದೃಷ್ಟ ಜನಾಂಗಕ್ಕೆ “ನಾವು ನಿಮ್ಮ ನೆರವಿಗೆ ಬರುವುದಿಲ್ಲ’ ಎಂದು ಕೈಚೆಲ್ಲಬೇಕಿತ್ತೇ?

ಪೌರತ್ವ ಮಸೂದೆಯನ್ನು ಜಾರಿಗೆ ತರಲು ಈ ಉಪಖಂಡದ ಬದಲಾದ ಭೌಗೋಳಿಕ-ರಾಜಕೀಯ ಚಿತ್ರಣವೂ ಕಾರಣ. ಪಾಕಿಸ್ತಾನ ಸಾಧ್ಯವಿರುವ ಎಲ್ಲ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರ ವಿಚಾರವನ್ನು ಎತ್ತಲು ಪ್ರಯತ್ನಿಸುತ್ತಿದೆ. ಹೀಗಿರುವಾಗ ಆ ದೇಶ ತನ್ನಲ್ಲಿರುವ ಅಲ್ಪಸಂಖ್ಯಾತರನ್ನು ಯಾವ ರೀತಿ ಪೀಡಿಸುತ್ತಿದೆ ಎಂದು ಜಗತ್ತಿಗೆ ತೋರಿಸಿಕೊಡಬೇಕಾಗಿರುವುದು ಅಗತ್ಯ.

ದೇಶ ವಿಭಜನೆಯ ಪರಿಣಾಮವಾಗಿ ಉಪಖಂಡದ ದಲಿತ ಸಮುದಾಯದ ಅತ್ಯಂತ ನತದೃಷ್ಟ ಜಾತಿಗಳಾಗಿರುವ ಮೇಘಾಲ್‌ಗ‌ಳು, ಭೀಲ್‌ಗ‌ಳು, ಕೋಲಿಗಳು, ಔಧ್‌ಗಳು, ವಾಲ್ಮೀಕಿಗಳಿಗೆ ಹಾಗೂ ಇತರ ದಲಿತ ಸಮುದಾಯಗಳಿಗ ನೆರವಾಗಿರುವ ಸರಕಾರವನ್ನು ನಿಜವಾಗಿ ನಾವು ಅಭಿನಂದಿಸಬೇಕು. ಈ ಒಂದು ನಿರ್ಧಾರದಿಂದ ದಶಕಗಳಿಂದ ತಮ್ಮದೇ ನೆಲದಲ್ಲಿ ಅತಂತ್ರರಾಗಿ ನಿರಾಶ್ರಿತ ಜೀವನ ನಡೆಸುತ್ತಿರುವ ಲಕ್ಷಾಂತರ ಜನರ ಬದುಕಿನಲ್ಲಿ ಹೊಸ ಬೆಳಕು ಮೂಡಲಿದೆ. ಅವರಿಗೆ ಒಂದು ಗೌರವಯುತವಾದ ಬದುಕು ಸಿಗಲಿದೆ. ಮಾನವ ಹಕ್ಕುಗಳನ್ನು ಪ್ರತಿಪಾದಿಸುತ್ತಿರುವ ಸಂಸ್ಥೆಗಳ ಕಾರ್ಯಕರ್ತರು ಮತ್ತು ತಥಾಕಥಿತ ಜಾತ್ಯತೀತ ಪಕ್ಷಗಳು ಪೌರತ್ವ ಮಸೂದೆಯನ್ನು ವಿರೋಧಿಸುತ್ತಿರುವುದು ಮಾನವೀಯತೆಯ ವಿಚಾರದಲ್ಲಿ ಅವುಗಳ ದ್ವಂದ್ವ ನಿಲುವುಗಳನ್ನು ತೋರಿಸುತ್ತದೆಯಷ್ಟೆ. ಜಗತ್ತಿನ ಎಲ್ಲೆಡೆ ನಡೆಯುತ್ತಿರುವ ಮಾನವಾಧಿಕಾರಗಳ ಉಲ್ಲಂಘನೆ, ಪೀಡನೆ, ನರಮೇಧಗಳ ವಿಚಾರದಲ್ಲಿ ಅವರು ತುಂಬಾ ಜಾಗೃತರಾಗಿಬಿಡುತ್ತಾರೆ, ಆದರೆ ಹಿಂದುಗಳು ಅಥವಾ ಸಿಕ್ಖರು ಸಂತ್ರಸ್ತರು ಎಂದಾದರೆ ಆಗ ಮಾತನಾಡಲು ನಾಲಿಗೆಯೇ ಏಳುವುದಿಲ್ಲ. ಇವರ ಟೊಳ್ಳು ಪ್ರತಿಪಾದನೆಗಳು, ಹಸಿ ಸುಳ್ಳುಗಳು, ನಕಲಿ ಹೋರಾಟಗಳೆಲ್ಲ ಈಗ ಜಗತ್ತಿನೆದುರು ಬೆತ್ತಲಾಗಿವೆ. ಕಡೆಗೂ ಜಗತ್ತಿಗೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಯಾವ ಪರಿಯ ಜೀವನ ನಡೆಸುತ್ತಿದ್ದಾರೆಂದು ಪೌರತ್ವ ತಿದ್ದು ಪಡಿ ಮಸೂದೆಯಿಂದಾಗಿ ಅರಿವಾಗಿದೆ. ಹೀಗಾಗಿ ಮಸೂದೆಗಿರುವ ವಿರೋಧ ತನ್ನ ತೂಕವನ್ನು ಕಳೆದುಕೊಂಡಿದೆ. ಜಗತ್ತಿನಲ್ಲಿ ನ್ಯಾಯ ಮತ್ತು ಸಮಾನತೆ ಉಳಿಯಬೇಕಿದ್ದರೆ ಈ ಮೂರೂ ದೇಶಗಳಲ್ಲಿ ನಡೆದಿರುವ ಜನಾಂಗೀಯ ದ್ವೇಷವನ್ನು ಸರಿಪಡಿಸಲೇಬೇಕು.

(ಲೇಖಕರು ವೈದ್ಯರಾಗಿದ್ದು, ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಹಿಂದೂ ನಿರಾಶ್ರಿತರಿಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ)
ಲೇಖನ ಕೃಪೆ : ಸ್ವರಾಜ್ಯ

ಡಾ. ಓಮೇಂದ್ರ ರತ್ನು

Advertisement

Udayavani is now on Telegram. Click here to join our channel and stay updated with the latest news.

Next