ಮಯಾಮಿ ಗಾರ್ಡನ್ಸ್ : ಮಯಾಮಿ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಸ್ಥಳೀಯ ಹಾಗೂ ನೆಚ್ಚಿನ ಆಟಗಾರ್ತಿ ಕೊಕೊ ಗಾಫ್ 3ನೇ ಸುತ್ತಿನಲ್ಲಿ ಪರಾಭವಗೊಂಡಿದ್ದಾರೆ.
19 ವರ್ಷದ, 6ನೇ ಶ್ರೇಯಾಂಕದ ಕೊಕೊ ಗಾಫ್ ಅವರನ್ನು ರಷ್ಯಾದ ಅನಾಸ್ತಾಸಿಯಾ ಪೊಟಪೋವಾ 6-7(8), 7-5, 6-2 ಅಂತರದಿಂದ ಕೆಡವಿದರು. ಇದು ಗಾಫ್ ವಿರುದ್ಧ ಆಡಿದ 3 ಪಂದ್ಯಗಳಲ್ಲಿ ಪೊಟಪೋವಾ ಸಾಧಿಸಿದ ಮೊದಲ ಗೆಲುವು. ಇವರ ಮುಂದಿನ ಎದುರಾಳಿ ಜೆಂಗ್ ಕ್ವಿನ್ವೆನ್. ಇವರು ಲುಡ್ಮಿಲಾ ಸಮೊÕನೋವಾ ವಿರುದ್ಧ 5-7, 7-6(5), 6-3 ಅಂತರದ ಗೆಲುವು ಸಾಧಿಸಿದರು.
ದಿನದ ಉಳಿದ ಪಂದ್ಯಗಳಲ್ಲಿ ಜೆಸ್ಸಿಕಾ ಪೆಗುಲಾ 6-1, 7-6 (0) ಅಂತರದಿಂದ ಡೇನಿಯಲ್ ಕಾಲಿನ್ಸ್ ಅವರನ್ನು; ಮಾಗಾx ಲಿನೆಟ್ 7-6 (3), 2-6, 6-4ರಿಂದ 3 ಬಾರಿಯ ಮಯಾಮಿ ಚಾಂಪಿಯನ್ ವಿಕ್ಟೋರಿಯಾ ಅಜರೆಂಕಾ ಅವರನ್ನು; 2017ರ ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಓಸ್ಟಾಪೆಂಕೊ 6-2, 4-6, 6-3ರಿಂದ ಬೀಟ್ರಿಝ್ ಹದ್ದಾದ್ ಮಯಾ ಅವರನ್ನು ಸೋಲಿಸಿದರು.
ಸಿಸಿಪಸ್‌ಗೆ ಬೈ:
ಪುರುಷರ ಸಿಂಗಲ್ಸ್‌ನಲ್ಲಿ 2ನೇ ಶ್ರೇಯಾಂಕದ ಸ್ಟೆಫನಸ್ ಸಿಸಿಪಸ್ ಅವರಿಗೆ 3ನೇ ಸುತ್ತಿಗೆ ಬೈ ಲಭಿಸಿದೆ. ಎದುರಾಳಿ ರಿಚರ್ಡ್ ಗಾಸ್ಕ್ವೆಟ್ ಗಾಯಾಳಾದ ಕಾರಣ ಸಿಸಿಪಸ್ ಮುನ್ನಡೆದರು. ಇಂಡಿಯನ್ ವೆಲ್ಸ್ ಕೂಟದ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದ ಸಿಸಿಪಸ್ ಅವರಿನ್ನು ಕ್ರಿಸ್ಟಿಯನ್ ಗಾರಿನ್ ವಿರುದ್ಧ ಸೆಣಸಲಿದ್ದಾರೆ.