ಮಿತವ್ಯಯದ ದರದಲ್ಲಿ ಉತ್ತಮ ಸ್ಮಾರ್ಟ್‍ಫೋನ್‍ಗಳನ್ನು ನೀಡುವ ಮೂಲಕ ಭಾರತದ ಮಾರುಕಟ್ಟೆಯಲ್ಲಿ ನಂ. 1 ಸ್ಥಾನ ಗಳಿಸಿದ ಶಿಯೋಮಿ ಕಂಪೆನಿ ಇದೀಗ ಭಾರತದ ಮಾರುಕಟ್ಟೆಗೆ ಒಂದು ಹೊಸ ಸ್ಮಾರ್ಟ್‍ಫೋನ್ ಮತ್ತು ಹೊಸ ಕ್ಯೂ ಎಲ್ ಇಡಿ ಟಿವಿ ಬಿಡುಗಡೆ ಮಾಡಿದೆ.
ಹೊಸ ಫೋನಿನ ಹೆಸರು ರೆಡ್‍ಮಿ 9 ಪವರ್. ಇದರಲ್ಲಿ 6 ಸಾವಿರ ಎಂಎಎಚ್ ನ ಭರ್ಜರಿ ಬ್ಯಾಟರಿ ಇರುವುದರಿಂದ ಪವರ್ ಹೆಸರು ನೀಡಲಾಗಿದೆ. 12 ಸಾವಿರ ರೂ. ದರದಲ್ಲಿ ಒಂದು ಉತ್ತಮ ಫೋನಿಗಿರಬಹುದಾದ ಸ್ಪೆಸಿಫಿಕೇಷನ್‍ಗಳು ಇದರಲ್ಲಿವೆ.
* ಕ್ವಾಲ್‍ಕಾಂ ಸ್ನಾಪ್‍ಡ್ರಾಗನ್ 662 ಪ್ರೊಸೆಸರ್. ಆಂಡ್ರಾಯ್ಡ್ 10
* 4 ಜಿಬಿ ರ್ಯಾಮ್ ಮತ್ತು 64 ಜಿಬಿ ಆಂತರಿಕ ಸಂಗ್ರಹ ಹಾಗೂ 4 ಜಿಬಿ ರ್ಯಾಮ್ 128 ಜಿಬಿ ಆಂತರಿಕ ಸಂಗ್ರಹ (ಎರಡು ಆವೃತ್ತಿಗಳು)
* 6.53 ಇಂಚಿನ ಫುಲ್ ಎಚ್ ಡಿ ಡಿಸ್‍ಪ್ಲೇ (1800*2340 ಪಿಕ್ಸಲ್ಸ್)
* ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ
* ಮುಖ್ಯ ಕ್ಯಾಮರಾ: 48+8+2 ಮೆಪಿ. (ಮೂರು ಲೆನ್ಸ್) ಸೆಲ್ಫಿ: 8 ಮೆ.ಪಿ.
* ಬ್ಯಾಟರಿ 6000 ಎಂಎಎಚ್. 18 ವ್ಯಾ ವೇಗದ ಚಾರ್ಜಿಂಗ್. ಟೈಪಿ ಸಿ ಪೋರ್ಟ್.
* ರೆಡ್‌ಮಿ 9 ಪವರ್ ನಾಲ್ಕು ಬಣ್ಣಗಳಲ್ಲಿ ಲಭ್ಯ: ಕಪ್ಪು, ನೀಲಿ, ಕೆಂಪು ಹಾಗೂ ಹಸಿರು.
* ದರ 4 ಜಿಬಿ+64 ಜಿಬಿ – ರೂ.10,999. 4 ಜಿಬಿ+128ಜಿಬಿ, ರೂ.11,999
* ಎಂಐ.ಕಾಂ, ಅಮೆಜಾನ್ ಇಂಡಿಯಾ, ಎಂಐ ಹೋಮ್ಸ್ ಮತ್ತು ಎಂಐ ಸ್ಟುಡಿಯೋಸ್‌ನಲ್ಲಿ ಡಿಸೆಂಬರ್ 22 ರಿಂದ ಲಭ್ಯ.
ಮಿ ಕ್ಯೂ 1- ಕ್ಯೂಎಲ್‍ಇಡಿ ಆಂಡ್ರಾಯ್ಡ್ ಟಿವಿ
ಎಲ್ ಇಡಿ ಟಿವಿ ನಂತರದ ತಂತ್ರಜ್ಞಾನವಾದ ಕ್ಯೂ ಎಲ್ ಇಡಿ ಟಿವಿಗಳನ್ನು ಈಗ ಕಂಪೆನಿಗಳು ಹೊರ ತರುತ್ತಿವೆ. ಎಲ್ ಇಡಿಗಿಂತ ನಿಖರವಾದ ಬಣ್ಣವನ್ನು ಕ್ಯೂ ಎಲ್ ಇಡಿ ಟಿವಿಗಳು ಮೂಡಿಸುತ್ತವೆ. ವಿಡಿಯೋ ಚಿತ್ರದ ಗುಣಮಟ್ಟ ಎಲ್ ಇಡಿಗೆ ಹೋಲಿಸಿದರೆ ಉತ್ತಮವಾಗಿರುತ್ತದೆ. 55 ಇಂಚಿನ ಎಲ್ ಇ ಡಿ ಟಿವಿಗಳ ದರ ಸೋನಿ, ಸ್ಯಾಮ್ ಸಂಗ್ ಬ್ರಾಂಡ್‍ನಲ್ಲಿ 1 ಲಕ್ಷ ರೂ. ಮೇಲಿದೆ. 55 ಇಂಚಿನ ಕ್ಯೂಎಲ್‍ಇಡಿ ಟಿವಿಯನ್ನು 60 ಸಾವಿರ ರೂ.ದರಕ್ಕೆ ಮೊದಲು ನೀಡಿದ್ದ ಒನ್ ಪ್ಲಸ್ ಕಂಪೆನಿ. ಈಗ ಶಿಯೋಮಿ ಕಂಪೆನಿ 55 ಇಂಚಿನ ಕ್ಯೂಎಲ್‍ಇಡಿ ಟಿವಿಯನ್ನು 54999 ರೂ. ದರದಲ್ಲಿ ಹೊರತಂದಿದೆ.
ಈ ಕ್ಯೂ ಎಲ್ ಇಡಿ ಟಿವಿಯಲ್ಲಿ ನೀವು 4ಕೆ ರೆಸೂಲೇಶನ್ (ಅಲ್ಟ್ರಾ ಎಚ್‍ಡಿ (3840*2160) ಹೊಂದಿರುವ ವಿಡಿಯೋಗಳನ್ನು ವೀಕ್ಷಿಸಬಹುದು. ಡಾಲ್ಬಿ ವಿಷನ್, ಎಚ್‍ಡಿಆರ್ 10 ಮೂಲಕ ಉತ್ತಮ ಚಿತ್ರಗಳನ್ನು ಮೂಡಿಸುತ್ತದೆ. ಪರದೆಯ ರಿಫ್ರೆಶ್ ರೇಟ್ 60 ಹರ್ಟ್ಜ್ ಇದೆ. ಅಂಚುಗಳಿಲ್ಲದ ಪರದೆ ವಿನ್ಯಾಸ ಮಾಡಲಾಗಿದೆ.
ಡಿಟಿಎಸ್ ಎಚ್‍ಡಿ ಆಡಿಯೋ ಸೌಲಭ್ಯ ಇದೆ. 30 ವ್ಯಾಟ್ ಸ್ಪೀಕರ್ ಹೊಂದಿದೆ. ಆಂಡ್ರಾಯ್ಡ್ 10 ಆವೃತ್ತಿ ಹೊಂದಿದ್ದು, ಮೀಟಿಯಾಟೆಕ್ ನಾಲ್ಕು ಕೋರ್ ಎ55 ಪ್ರೊಸೆಸರ್ ಇದೆ. 2 ಜಿಬಿ ರ್ಯಾಮ್ ಮತ್ತು 32 ಜಿಬಿ ಆಂತರಿಕ ಸಂಗ್ರಹ ಹೊಂದಿದೆ.
ಇದರ ದರ 54,999 ರೂ. ಇಂದಿನಿಂದ ಮಿ.ಕಾಮ್, ಫ್ಲಿಪ್‍ಕಾರ್ಟ್‍ನಲ್ಲಿ ಲಭ್ಯ.
-ಕೆ.ಎಸ್. ಬನಶಂಕರ ಆರಾಧ್ಯ