ಉಡುಪಿ:ಇಂದಿನ ಆಧುನಿಕ ತಂತ್ರಜ್ಞಾನವಾದ ಮೊಬೈಲ್, ಇಂಟರ್ನೆಟ್ ನಿಂದಾಗಿ ಮಾಹಿತಿಯನ್ನು ಬೆರಳ ತುದಿಯಲ್ಲೇ ಪಡೆಯಲು ಸಾಧ್ಯವಾಗಿದೆ. ಆದರೆ ಮನುಷ್ಯನಿಗೆ ಜೀವನ ಕೌಶಲ್ಯ ಮುಖ್ಯ. ಇದರಿಂದ ವೈಯಕ್ತಿಕ ಹಾಗೂ ಒಂದು ಸಂಸ್ಥೆಯ ಬೆಳವಣಿಗೆಗೆ ಕಾರಣವಾಗಲಿದೆ. ಇದಕ್ಕೆ ಉತ್ತಮ ಉದಾಹರಣೆ ದಿ.ಟಿ.ಮೋಹನದಾಸ್ ಪೈ ಅವರ ದೂರದೃಷ್ಟಿ. ಅವರ ಲೈಫ್ ಸ್ಕಿಲ್ಸ್ ನಿಂದ ನಾನು ಕೂಡಾ ಇಂದು ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ.ಸತೀಶ್ ಯು.ಪೈ ಹೇಳಿದರು.
ಅವರು ಶುಕ್ರವಾರ (ಜನವರಿ 13) ಎಂಜಿಎಂ ಕಾಲೇಜಿನಲ್ಲಿ ಟಿ.ಮೋಹನದಾಸ್ ಪೈ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನಾನು ಟಿ.ಮೋಹನದಾಸ್ ಪೈ ಅವರನ್ನು ನೆನಪಿಸಿಕೊಳ್ಳಬೇಕು. ಯಾಕೆಂದರೆ ಈ ಭಾಗದ ಆರ್ಥಿಕ, ಶೈಕ್ಷಣಿಕ ಏಳಿಗೆಗೆ ಅವರ ಕೊಡುಗೆ ಅವಿಸ್ಮರಣೀಯವಾದದ್ದು. ಜೊತೆಗೆ ನನ್ನ ಯಶಸ್ವಿಗೆ ಪತ್ನಿ ಸಂಧ್ಯಾ ಎಸ್. ಪೈ, ಪುತ್ರ ಗೌತಮ್ ಪೈ, ಪುತ್ರಿ ನಂದನಾ ಸೇರಿದಂತೆ ಎಲ್ಲರ ಸಹಕಾರ ಕಾರಣವಾಗಿದೆ ಎಂದು ಸತೀಶ್ ಪೈ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
Related Articles
ಕಾರ್ಯಕ್ರಮದಲ್ಲಿ ಅಭಿನಂದನೆ ಭಾಷಣ ಮಾಡಿದ ಮೂಡುಬಿದಿರೆ ಆಳ್ವಾಸ್ ಫೌಂಡೇಶನ್ ಅಧ್ಯಕ್ಷ ಡಾ. ಮೋಹನ ಆಳ್ವ, ಕರಾವಳಿ ಪ್ರದೇಶಕ್ಕೆ ಹೊಸ ದಿಕ್ಸೂಚಿಯನ್ನು ಕೊಟ್ಟವರು ಮಣಿಪಾಲದ ಪೈ ಕುಟುಂಬದವರು. ಅವರು ನಾಡಿಗೆ ನೀಡಿರುವ ಕೊಡುಗೆಗಾಗಿ ನಾವು ಅವರನ್ನು ಅಭಿನಂದಿಸಬೇಕಾಗಿದೆ. ಇಡೀ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ವೈದ್ಯಕೀಯ ವಿದ್ಯಾಸಂಸ್ಥೆ, ಬ್ಯಾಂಕಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಣಿಪಾಲದ ಪೈ ಕುಟುಂಬ ನೀಡಿರುವ ಕೊಡುಗೆ ಅಪಾರವಾದದ್ದು ಎಂದರು.
ಸತೀಶ್ ಯು.ಪೈ ಮುಗ್ದ ಮನಸ್ಸಿನ ತಪಸ್ವಿ:
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನಾನು (ಆಳ್ವ) ಸೇರಿದಂತೆ ಹಲವಾರು ಜನರಿಗೆ ಪೈ ಕುಟುಂಬವೇ ಸ್ಫೂರ್ತಿಯಾಗಿದೆ. ನೀವು ಕೇವಲ ಪೈ ಸಾಮ್ರಾಜ್ಯ ಕಟ್ಟಿಲ್ಲ, ಮನುಷ್ಯರ ಬದುಕನ್ನು ಕಟ್ಟಿದ್ದೀರಿ. ಅದೇ ರೀತಿ ಸತೀಶ್ ಯು ಪೈ ಅವರು ಕೂಡಾ ಮುಗ್ದ ಮನಸ್ಸಿನ ತಪಸ್ವಿ. ಅವರ ವ್ಯಕ್ತಿತ್ವದ ಬಗ್ಗೆ ಎಲ್ಲರಿಗೂ ಅಪಾರ ಗೌರವವಿದೆ. ಯಾಕೆಂದರೆ ಅವರು ಕರುಣಾಮಯಿ ಹೃದಯವಂತ. ಸತೀಶ್ ಪೈ ಅವರು ಎಲ್ಲರನ್ನೂ ಪ್ರೀತಿಸುವ ವ್ಯಕ್ತಿ ಎಂದು ಹೇಳಿದ ಡಾ.ಮೋಹನ ಆಳ್ವ ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿದರು.
ಟಿ.ಮೋಹನದಾಸ್ ಪೈ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ಉದ್ಘಾಟನೆಯ ನಂತರ ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ.ಸತೀಶ್ ಯು.ಪೈ ಹಾಗೂ ಡಾ.ಸಂಧ್ಯಾ ಎಸ್.ಪೈ ದಂಪತಿಯನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ರಿಜಿಸ್ಟ್ರಾರ್ ಡಾ.ರಂಜನ್ ಆರ್.ಪೈ ಉಪಸ್ಥಿತರಿದ್ದರು. ಅಕಾಡೆಮಿ ಜನರಲ್ ಎಜುಕೇಶನ್ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಕಾಲೇಜು ಟ್ರಸ್ಟ್ ಸದಸ್ಯರಾದ ಟಿ.ಅಶೋಕ್ ಪೈ, ವಸಂತಿ ಆರ್.ಪೈ, ಅಕಾಡೆಮಿ ಕಾರ್ಯದರ್ಶಿ ಬಿ.ಪಿ.ವರದರಾಯ ಪೈ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ್, ಎಂಜಿಎಂ ಪಿಯು ಕಾಲೇಜಿನ ಪ್ರಾಂಶುಪಾಲರಾದ ಮಾಲತಿ ದೇವಿ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದ ಆರಂಭಕ್ಕೂ ಮುನ್ನ ಎಂಜಿಎಂ ವಿದ್ಯಾರ್ಥಿನಿ ಸಮನ್ವಿ ಮತ್ತು ಅವರ ತಂಡದಿಂದ ಗಾಯನ ಕಾರ್ಯಕ್ರಮ ನಡೆಯಿತು. ಎಂಜಿಎಂ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ದೇವಿದಾಸ್ ಎಸ್.ನಾಯಕ್ ಸ್ವಾಗತಿಸಿ,ಪ್ರೊ.ಲಕ್ಷ್ಮೀನಾರಾಯಣ ಕಾರಂತ್ ವಂದಿಸಿದರು. ಪ್ರೊ.ರೋಹಿಣಿ ನಾಯಕ್ ನಿರೂಪಿಸಿದರು.