ಮೆಕ್ಸಿಕೊ ತನ್ನ ಮೊದಲ ಪಂದ್ಯದಲ್ಲಿ ಪೋಲೆಂಡ್ ವಿರುದ್ಧ ಡ್ರಾ ಮಾಡಿಕೊಂಡಿದೆ. ಆರ್ಜೆಂಟೀನಾ ತನ್ನ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯ ವಿರುದ್ಧ ಸೋಲನುಭವಿಸಿದೆ. ಆಟಗಾರರು ಈ ನೋವಿನಲ್ಲಿದ್ದರೂ ಈ ಎರಡು ನೆರೆರಾಷ್ಟ್ರಗಳ ಅಭಿಮಾನಿಗಳಿಗೆ ಬೇರೆಯದ್ದೇ ಚಿಂತೆ!
ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಮೆಕ್ಸಿಕೊ ಅಭಿಮಾನಿಗಳು ಲಯೋನೆಲ್ ಮೆಸ್ಸಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಇದಕ್ಕೆ ಪ್ರತಿಯಾಗಿ ಆರ್ಜೆಂಟೀನಾ ಅಭಿಮಾನಿಗಳು ಎದುರಾಳಿಗಳ ಮರ್ಮಕ್ಕೆ ತಾಕುವಂತೆ ಪ್ರತಿಯಾಡಿದ್ದಾರೆ. ಗಲಾಟೆ ಮಾತಿನಲ್ಲಿ ಶುರುವಾಗಿದ್ದು ಕೈಕೈ ಮಿಲಾಯಿಸಿದ ಮೇಲೆ ಮುಗಿದಿದೆ. ಅಂತಿಮವಾಗಿ ಕೆಲವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಇಷ್ಟೆಲ್ಲ ನಡೆದಿದ್ದು ಬುಧವಾರ ಎರಡೂ ದೇಶಗಳ ಅಭಿಮಾನಿಗಳು ದೋಹಾದ ಅಲ್ ಬಿಡ್ಡಾ ಪಾರ್ಕ್‌ನಲ್ಲಿ ಒಗ್ಗೂಡಿದಾಗ. ಆ ಜಾಗವನ್ನು ನಿರ್ಮಿಸಿದ್ದು ಬೇರೆಬೇರೆ ದೇಶದ ಅಭಿಮಾನಿಗಳು ಒಗ್ಗೂಡಿ ಆತ್ಮೀಯ ಮಾತುಕತೆ ನಡೆಸಲಿ ಎಂಬ ಉದ್ದೇಶದಿಂದ. ಆದರೆ ಇಬ್ಬರೂ ಹೊಡೆದಾಡಿಕೊಂಡು ಜಾಗದ ಅರ್ಥವನ್ನೇ ಬದಲಿಸಿದ್ದಾರೆ.