Advertisement

ಬೆಂಗಳೂರು: ಜ. 27ರಿಂದ ನಾಲ್ಕು ದಿನ ಮೆಟ್ರೋ ಸೇವೆ ಸ್ಥಗಿತ

07:16 PM Jan 24, 2023 | Team Udayavani |

ಬೆಂಗಳೂರು: ಈ ತಿಂಗಳಾಂತ್ಯದ ಸತತ ನಾಲ್ಕು ದಿನಗಳ ಕಾಲ ‘ನಮ್ಮ ಮೆಟ್ರೋ’ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಇದರ ಬಿಸಿ ಪ್ರಯಾಣಿಕರಿಗೆ ತುಸು ಜೋರಾಗಿಯೇ ತಟ್ಟುವ ಸಾಧ್ಯತೆ ಇದೆ.

Advertisement

ಜ. 27ರಿಂದ 30ರವರೆಗೆ ಕೆಂಗೇರಿಯಿಂದ ಚೆಲ್ಲಘಟ್ಟವರೆಗಿನ ವಿಸ್ತರಣಾ ಮಾರ್ಗದ ಕಾರ್ಯಾರಂಭಕ್ಕೆ ಸಂಬಂಧಿಸಿದ ಕಾಮಗಾರಿ ಕೈಗೆತ್ತಿ ಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆ ನಾಲ್ಕೂ ದಿನಗಳು ಮೈಸೂರು ರಸ್ತೆೆ- ಕೆಂಗೇರಿ ನಡುವಿನ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಹಾಗಾಗಿ, ಈ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆೆ ನಿಲ್ದಾಣದವರೆಗೆ ಮಾತ್ರ ಸೇವೆ ಲಭ್ಯ ಇರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ತಿಳಿಸಿದೆ.

ನಿತ್ಯ ‘ನಮ್ಮ ಮೆಟ್ರೋ’ದಲ್ಲಿ ಸರಿಸುಮಾರು 5.5 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದು, 1ರಿಂದ 1.2 ಕೋಟಿ ರೂ. ಆದಾಯ ಬರುತ್ತಿದೆ. ಈ ಪೈಕಿ ಮೈಸೂರು ರಸ್ತೆೆ- ಕೆಂಗೇರಿ ನಡುವೆಯೇ ಅಂದಾಜು 35-40 ಸಾವಿರ ಜನ ಪ್ರಯಾಣಿಸುತ್ತಾರೆ. ಇದರಿಂದ 12-15 ಲಕ್ಷ ರೂ. ಆದಾಯ ಹರಿದುಬರುತ್ತದೆ. ತಾತ್ಕಾಲಿಕವಾಗಿ ನಾಲ್ಕು ದಿನಗಳು ಮೆಟ್ರೋ ಸೇವೆ ಸ್ಥಗಿತಗೊಳ್ಳುವುದರಿಂದ ಆ ಪ್ರಯಾಣಿಕರೆಲ್ಲರಿಗೂ ತುಸು ತೊಂದರೆ ಆಗಲಿದೆ.

ಅದರಲ್ಲೂ ವಾರಾಂತ್ಯದಲ್ಲಿ ಕೆಂಗೇರಿ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ತುಸು ಹೆಚ್ಚಿರುತ್ತದೆ. ಯಾಕೆಂದರೆ, ಆ ಭಾಗದ ಜನ ಶಾಪಿಂಗ್, ಸಿನಿಮಾ ಮತ್ತಿತರ ಮನರಂಜನೆಗಾಗಿ ನಗರದ ವಿವಿಧ ಭಾಗಗಳಿಗೆ ಸಾಮಾನ್ಯವಾಗಿ ಮೆಟ್ರೋದಲ್ಲೇ ತೆರಳುತ್ತಾರೆ. ಈಗ ಕೆಂಗೇರಿ, ಪಟ್ಟಣಗೆರೆ, ಜ್ಞಾನಭಾರತಿ ಸೇರಿದಂತೆ ಸುತ್ತಲಿನ ಜನ ಮೈಸೂರು ರಸ್ತೆಗೆ ಬಂದು ಅಲ್ಲಿಂದ ಮೆಟ್ರೋ ಏರಿ ಪ್ರಯಾಣ ಬೆಳೆಸಬೇಕಿದೆ. ಇದರಿಂದ ಜ. 27ರಿಂದ 30ರವರೆಗೆ ಆ ಭಾಗದಲ್ಲಿ ವಾಹನದಟ್ಟಣೆ ಹೆಚ್ಚಾಗಲಿದ್ದು, ಇದು ಸಂಚಾರದಟ್ಟಣೆ ರೂಪದಲ್ಲಿ ಪರಿಣಮಿಸುವ ಸಾಧ್ಯತೆ ಇದೆ.

ಅಂದಹಾಗೆ, ಸುಮಾರು 7.5 ಕಿ.ಮೀ. ಉದ್ದದ ಉದ್ದೇಶಿತ ಮೈಸೂರು ರಸ್ತೆೆ- ಕೆಂಗೇರಿ ನಡುವೆ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್ ಟರ್ಮಿನಲ್ ಹಾಗೂ ಕೆಂಗೇರಿ ಮೆಟ್ರೋ ನಿಲ್ದಾಣಗಳು ಬರುತ್ತವೆ.

Advertisement

ಇದನ್ನೂ ಓದಿ: ವಿಜಯಪುರ: ಜಿ.ಪಂ. ಸಿಇಒ ರಾಹುಲ್ ಶಿಂಧೆಗೆ ರಾಜ್ಯ ಪ್ರಶಸ್ತಿ

Advertisement

Udayavani is now on Telegram. Click here to join our channel and stay updated with the latest news.

Next