Advertisement

ಮೆಟ್ರೋ ಮಹಿಳಾ ಮೀಸಲಿಗೆ ಉತ್ತಮ ಸ್ಪಂದನೆ

12:23 PM Apr 04, 2018 | Team Udayavani |

ಬೆಂಗಳೂರು: ನಮ್ಮ ಮೆಟ್ರೋ ಮೊದಲ ಬೋಗಿಯ ಮೊದಲೆರಡು ಬಾಗಿಲುಗಳು ಮಹಿಳೆಯರಿಗೆ ಮೀಸಲಿಟ್ಟು ಹೆಚ್ಚು-ಕಡಿಮೆ ಒಂದೂವರೆ ತಿಂಗಳಾಗಿದ್ದು, ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ನಿತ್ಯ ಸಂಚರಿಸುವ ಒಟ್ಟಾರೆ ಮೆಟ್ರೋ ಪ್ರಯಾಣಿಕರಲ್ಲಿ ಶೇ. 35ರಿಂದ 40ರಷ್ಟು ಮಹಿಳೆಯರಿದ್ದಾರೆ ಎಂದು ಬಿಎಂಆರ್‌ಸಿ ಅಂದಾಜಿಸಿದೆ. ಆರಂಭದಲ್ಲಿ ಮೀಸಲಿಟ್ಟ ದ್ವಾರಗಳ ಕಡೆಗೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಾರ್ಗದರ್ಶನದಲ್ಲಿ ಮಹಿಳೆಯರು ತೆರಳುತ್ತಿದ್ದರು. ಈಗ ಸ್ವಯಂಪ್ರೇರಿತವಾಗಿ ಬಳಕೆ ಮಾಡುತ್ತಿದ್ದಾರೆ.

Advertisement

ಅದೇ ರೀತಿ, ಪುರುಷ ಪ್ರಯಾಣಿಕರು ಕೂಡ ಈ ವ್ಯವಸ್ಥೆಗೆ ಸ್ಪಂದಿಸುತ್ತಿದ್ದಾರೆ. ಮಹಿಳೆಯರಿಗೆ ಮೀಸಲಿಟ್ಟ ದ್ವಾರಗಳಲ್ಲಿ ಪ್ರವೇಶಿಸುವುದಿಲ್ಲ. ಅಪರೂಪಕ್ಕೆ ಇಂತಹ ಘಟನೆಗಳು ಕಂಡುಬಂದರೂ ಅವರು ವೃದ್ಧರು ಅಥವಾ ಅಂಗವಿಕಲರು ಇರುತ್ತಾರೆ. ಇನ್ನು ಪ್ರೇಮಿಗಳು ಕೆಲವೊಮ್ಮೆ 2 ಮತ್ತು 3ನೇ ದ್ವಾರದಲ್ಲಿ ಪ್ರವೇಶಿಸಿ, ಮೊದಲ ಬೋಗಿಯಲ್ಲಿ ಕೂಡುತ್ತಾರೆ
ಎಂದು ಭದ್ರತಾ ವಿಭಾಗದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ಮಹಿಳೆಯರಿಗೆ ಮೀಸಲಿಟ್ಟ ದ್ವಾರಗಳಲ್ಲಿ ಪುರುಷರು ಪ್ರವೇಶಿಸಿದರೆ, ದಂಡ ವಿಧಿಸುವ ಆಲೋಚನೆ ಇಲ್ಲ. ಆದರೆ,
ಈ ರೀತಿಯ ಪ್ರವೇಶ-ನಿರ್ಗಮನಗಳಿಗೆ ಅವಕಾಶ ನೀಡದಂತೆ ಭದ್ರತಾ ಸಿಬ್ಬಂದಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ಸ್ಪಷ್ಟಪಡಿಸಿದ್ದಾರೆ.

ಮಹಿಳೆಯರಿಗೆ ಮೀಸಲಿಟ್ಟ ದ್ವಾರಗಳು ಬಹುತೇಕ ಇಡೀ ಬೋಗಿಯೇ ಮಹಿಳಾಮಯ ಆಗಿರುತ್ತದೆ. ಹೆಚ್ಚು ನೂಕುನುಗ್ಗಲಿದ್ದರೂ ಒಂದು ರೀತಿಯ ನಿರಾಳಭಾವ ಇರುತ್ತದೆ. ಇದನ್ನು ಮೂರು ದ್ವಾರಗಳಿಗೆ ವಿಸ್ತರಿಸಿದರೆ ಇನ್ನೂ
ಉತ್ತಮ ಎಂದು ಮಹಿಳಾ ಪ್ರಯಾಣಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಬೋಗಿ ಮೀಸಲಿಟ್ಟರೆ ಉತ್ತಮ “ಮೊದಲೆರಡು ದ್ವಾರಗಳನ್ನು ಮಹಿಳೆಯರಿಗೆ ಮೀಸಲಿಟ್ಟಿರುವುದು ಸ್ವಾಗತಾರ್ಹ. ಆದರೆ, ಇಡೀ ಬೋಗಿಯನ್ನು ಮೀಸಲಿಟ್ಟರೆ ತುಂಬಾ ಅನುಕೂಲ ಆಗುತ್ತದೆ. ನಿರಾತಂಕವಾಗಿ ಪ್ರಯಾಣಿಸಬಹುದು ಎಂದು ಕೆಂಗೇರಿಯಿಂದ ನಿತ್ಯ ಬೈಯಪ್ಪನಹಳ್ಳಿಗೆ ಪ್ರಯಾಣಿಸುವ ರಂಜಿತಾ ಭಟ್‌ ತಿಳಿಸಿದರು.

Advertisement

ಆದರೆ, ಈ ಮಧ್ಯೆ “ನಮ್ಮ ಮೆಟ್ರೋ’ ರೈಲುಗಳ ಮೊದಲ ಬೋಗಿಯ ಮೊದಲೆರಡು ಬಾಗಿಲುಗಳು ಮಹಿಳೆಯರಿಗೆ ಮೀಸಲು ಎಂಬ ನಿಯಮ ಸರಿಯಾಗಿ ಪಾಲನೆ ಆಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.  

ರಾತ್ರಿಯೇ ಅತಿ ಹೆಚ್ಚು
ಪ್ರಯಾಣಿಕರಿಗೆ ಕಿರಿಕಿರಿ ಈ ಮಧ್ಯೆ ರಾತ್ರಿಯಾದರೆ ಮೆಟ್ರೋದಲ್ಲಿ ಮದ್ಯವ್ಯಸನಿಗಳ ಹಾವಳಿ ಹೆಚ್ಚುತ್ತಿದ್ದು, ಇದು ಅಲ್ಲಿನ ಭದ್ರತಾ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಮದ್ಯಸೇವನೆ ಮಾಡಿ, ವಾಹನಗಳ ಚಾಲನೆ ಮಾಡುವವರ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿ, ಭಾರಿ ದಂಡ ವಿಧಿಸುತ್ತಿರುವುದರಿಂದ ಮದ್ಯಪ್ರಿಯರು ಮೆಟ್ರೋ ಮೊರೆ ಹೋಗುತ್ತಿರುವುದು ಹೆಚ್ಚಾಗಿದೆ. ಆದರೆ, ಇದು ಇತರೆ ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ. ಇನ್ನು ಮದ್ಯಪಾನ ಮಾಡಿಬರುವರ ತಪಾಸಣೆಗೆ ಯಾವುದೇ ವ್ಯವಸ್ಥೆ ಇಲ್ಲ. ಹಾಗಾಗಿ, ನಿರ್ಬಂಧವಿದ್ದರೂ ಇದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಭದ್ರತಾ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಹೆಚ್ಚಾಗಿ ಇದು ಎಂ.ಜಿ. ರಸ್ತೆ, ಇಂದಿರಾನಗರ ನಿಲ್ದಾಣಗಳ ಮಧ್ಯೆ ಅದರಲ್ಲೂ
ವಾರಾಂತ್ಯದಲ್ಲಿ ಇದು ಕಂಡುಬರುತ್ತಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next