ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ ಭಾನುವಾರ 7 ಗಂಟೆಯಿಂದಲೇ “ನಮ್ಮ ಮೆಟ್ರೋ’ ಸೇವೆ ಆರಂಭಿಸಿತು. ಇನ್ಮುಂದೆ ಪ್ರತಿ ವಾರಾಂತ್ಯದಲ್ಲಿ ಒಂದು ತಾಸು ಮುಂಚಿತವಾಗಿಯೇ ಮೆಟ್ರೋ ರೈಲುಗಳು ಕಾರ್ಯಾಚರಣೆ ಮಾಡಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ತಿಳಿಸಿದೆ.
ಸಾಮಾನ್ಯವಾಗಿ ಪ್ರತಿ ಭಾನುವಾರ ಬೆಳಗ್ಗೆ 8 ಗಂಟೆಗೆ ಮೆಟ್ರೋ ಸೇವೆ ಆರಂಭವಾಗುತ್ತದೆ. ಆದರೆ, ಸಾಮಾನ್ಯ ದಿನಗಳಂತೆಯೇ ಭಾನುವಾರವೂ ಸೇವೆ ಲಭ್ಯವಾಗಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಒಂದು ತಾಸು ಮುಂಚಿತವಾಗಿ ಸೇವೆ ಆರಂಭಿಸಲಾಯಿತು. ಪ್ರತಿ 15 ನಿಮಿಷಗಳ ಅಂತರದಲ್ಲಿ ರೈಲುಗಳು ಕಾರ್ಯಾಚರಣೆ ನಡೆಸಿದವು. ಆದರೆ, ಆರು ಬೋಗಿಗಳ ಮೆಟ್ರೋ ಸೇವೆ ಇರಲಿಲ್ಲ.
ಕಬ್ಬನ್ ಉದ್ಯಾನ, ಲಾಲ್‌ಬಾಗ್, ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಶವಂತಪುರ ರೈಲು ನಿಲ್ದಾಣಕ್ಕೆ ಮೆಟ್ರೋ ಮಾರ್ಗಗಳು ಸಂಪರ್ಕ ಕಲ್ಪಿಸುವುದರಿಂದ ಬೆಳಗ್ಗೆ ನಾನಾ ಭಾಗದಿಂದ ಬೆಂಗಳೂರಿಗೆ ಬಂದಿಳಿಯುವ ಪ್ರಯಾಣಿಕರಿಗೆ ಈ ಪರಿಷ್ಕರಣೆ ಹೆಚ್ಚು ಅನುಕೂಲ ಆಗಲಿದೆ.
ಹಾಗಾಗಿ ಒಂದು ತಾಸು ಮುಂಚಿತವಾಗಿ ಸೇವೆ ಆರಂಭಿಸಿರುವುದಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರಕಿದ್ದು, ಎರಡೂ ಮಾರ್ಗಗಳಲ್ಲಿ 6 ಗಂಟೆಯಿಂದಲೇ ಸೇವೆ ಒದಗಿಸಬೇಕು. ಇದರಿಂದ ಹೆಚ್ಚು ಜನರಿಗೆ ಅನುಕೂಲ ಆಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಬಿಎಂಆರ್‌ಸಿಎಲ್‌ನ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಜತೆಗೆ ಉಳಿದ ದಿನಗಳಂತೆಯೇ ಭಾನುವಾರವೂ ಮೆಟ್ರೋ ಸೇವೆ ದೊರೆಯುವಂತಾಗಬೇಕು. ವಾಯುವಿಹಾರಕ್ಕೆ ತೆರಳುವವರಿಗೆ ಹೆಚ್ಚು ಅನುಕೂಲ ಆಗಲಿದೆ. ನೈರುತ್ಯ ರೈಲ್ವೆಯೊಂದಿಗೆ ಚರ್ಚಿಸಿ, ಅಲ್ಲಿಗೆ ಬಂದಿಳಿಯುವ ರೈಲುಗಳಿಗೆ ಪೂರಕವಾಗಿ ಮೆಟ್ರೋ ಸೇವೆ ಕಲ್ಪಿಸಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.
ಅದೇ ರೀತಿ, ಸೋಮವಾರ ಮುಂಜಾನೆ 4.45ಕ್ಕೆ ಸೇವೆ ದೊರೆತರೆ ಬೇರೆ ಊರುಗಳಿಂದ ಬಂದಿಳಿಯುವ ಪ್ರಯಾಣಿಕರು ಇದರ ಉಪಯೋಗ ಪಡೆಯಬಹುದು ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ಭಾನುವಾರ ತಡವಾಗಿ ರೈಲು ಸೇವೆ ಆರಂಭಿಸಲಾಗುತ್ತಿತ್ತು. ಆದರೆ ಇದು ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳಿಗೆ ಸೀಮಿತವಾದ ಕ್ರಮ ಎಂಬ ಟೀಕೆ ವ್ಯಕ್ತವಾಗಿತ್ತು.