Advertisement

ಮೆಟ್ರೋ ವಿಸ್ತರಣೆ ಹಿಂದಿದೆಯೇ ರಾಜಕೀಯ ದೂರದೃಷ್ಟಿ?

12:04 PM Oct 04, 2021 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಅನ್ನು ರಾಮನಗರ ಮತ್ತು ಮಾಗಡಿಗೆ ತೆಗೆದುಕೊಂಡು ಹೋಗುವುದಾಗಿ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಇದರ ಸಾಧ್ಯಾಸಾಧ್ಯತೆಗಳ ಚಿಂತನ-ಮಂಥನ ಶುರುವಾಗಿದೆ. ಆದರೆ, ಅದಕ್ಕಿಂತ ಮುಖ್ಯವಾಗಿ ಈ “ರಾಜಕೀಯ ದೂರದೃಷ್ಟಿ’ ಮೂಲಕ ಮುಖ್ಯಮಂತ್ರಿಗಳು ಎರಡು ಪ್ರಮುಖ ಸಂದೇಶಗಳನ್ನು ರವಾನಿಸಿದ್ದಾರೆ.

  1. ಒಕ್ಕಲಿಗರ ಹೃದಯಭಾಗಕ್ಕೆ ತಮ್ಮ ಅಭಿವೃದ್ಧಿ ಪಥ ಸಾಗಲಿದೆ ಎಂಬುದು.
  2. ಅದೇ ಅಭಿವೃದ್ಧಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗಿಂತ ತಾವು ಒಂದು ಹೆಜ್ಜೆ ಮುಂದೆ ಎಂಬುದನ್ನು ಸಾರುವುದು.
Advertisement

ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಮೆರೆಯುತ್ತಿದೆ. ಆದರೆ, ಇದುವರೆಗೆ ಹಳೆಯ ಮೈಸೂರು ಭಾಗದಲ್ಲಿ ತನ್ನ ಮುದ್ರೆ ಒತ್ತಲು ಅದಕ್ಕೆ ಸಾಧ್ಯವಾಗಿಲ್ಲ. ಪ್ರತಿ ಬಾರಿ ಬಹುಮತ ಸಾಧಿಸಿದಾಗ ಸರ್ಕಾರ ರಚನೆಗೆ 8-10 ಸೀಟುಗಳ ಕೊರತೆ ಆಗುತ್ತಿದೆ.

ಇದನ್ನೂ ಓದಿ:- ಅಖಿಲೇಶ್ ಯಾದವ್ ಅವರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ

ಇನ್ನಿಲ್ಲದ ಕಸರತ್ತು ಮಾಡಿ, ಆ ಕೊರತೆ ನೀಗಿಸುವುದರೊಂದಿಗೆ ಸರ್ಕಾರವನ್ನೂ ರಚಿಸುತ್ತಿದೆ. ಆದರೆ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈಗಿನಿಂದಲೇ ಪ್ರಯತ್ನ ನಡೆಸಿದೆ. ಅದರ ಮುಂದುವರಿದ ಭಾಗವೇ ರಾಮನಗರ ಮತ್ತು ಮಾಗಡಿಗೆ “ನಮ್ಮ ಮೆಟ್ರೋ’ ಕೊಂಡೊಯ್ಯುವುದು! ಈ ಎರಡೂ ಕ್ಷೇತ್ರಗಳು ಒಕ್ಕಲಿಗರು ಪ್ರಾಬಲ್ಯ ಇರುವ ಕ್ಷೇತ್ರಗಳಾಗಿದ್ದು, ಜೆಡಿಎಸ್‌ನ ಭದ್ರಕೋಟೆ.

ಈ ಮಧ್ಯೆ ರಾಮನಗರ ಕಾರ್ಪೋರೇಷನ್‌ ಆಗಿ ಮೇಲ್ದರ್ಜೆಗೇರಿಸುವ ಚಿಂತನೆ ಕೂಡ ನಡೆದಿದೆ. ಇದಕ್ಕೆ ಪೂರಕವಾಗಿ ಅಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಿರ್ಮಾಣ ಕಾಮಗಾರಿ ಕೂಡ ಸದ್ಯದಲ್ಲೇ ಶುರುವಾಗಲಿದೆ. ಈ ಮಧ್ಯೆ ಮೆಟ್ರೋ ಸಂಪರ್ಕವನ್ನೂ ಕಲ್ಪಿಸುವ ಮೂಲಕ ಬಿಜೆಪಿ ತನ್ನ “ಬ್ರ್ಯಾಂಡ್‌ ಬಿಲ್ಡಿಂಗ್‌’ ಲೆಕ್ಕಾಚಾರ ನಡೆಸಿದೆ.

Advertisement

2023ರ ಚುನಾವಣೆ ಹೊತ್ತಿಗೆ ಆ ಭಾಗದ ಜನಮಾನಸದಲ್ಲಿ ಈ ನಿಟ್ಟಿನಲ್ಲಿ ಒಂದು ಅಚ್ಚು ಒತ್ತುವ ಉದ್ದೇಶವಿದೆ ಎನ್ನಲಾಗಿದೆ. ಇದರ ಜತೆಗೆ ಬಿಡದಿವರೆಗೆ ಮೆಟ್ರೋ ತೆಗೆದುಕೊಂಡು ಹೋಗು ವುದಾಗಿ ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದ್ದರು.

ಈಗ ರಾಮನಗರದವರೆಗೆ ವಿಸ್ತರಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅಷ್ಟೇ ಅಲ್ಲ, ಅತ್ತ ಮಾಗಡಿ ಮತ್ತು ರಾಜಾನುಕುಂಟೆಗೂ ಮೆಟ್ರೋ ಹೋಗಲಿದೆ. ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾತ್ರವಲ್ಲ; ಹೈಸ್ಪೀಡ್‌ ರೈಲು ಸಂಪರ್ಕ ಕೂಡ ಕಲ್ಪಿಸುವುದಾಗಿ ಘೋಷಿಸಿದ್ದಾರೆ.

ಅಂದರೆ, ಅಭಿವೃದ್ಧಿ ವಿಚಾರದಲ್ಲಿ ತಮ್ಮ “ದೂರದೃಷ್ಟಿ’ ಒಂದು ಹೆಜ್ಜೆ ಮುಂದಿದೆ ಎನ್ನುವುದನ್ನು ತೋರಿಸುವುದಾಗಿದೆ. ತಾಂತ್ರಿಕವಾಗಿ ಸಾಧ್ಯವೇ?: ಈ ವಿಸ್ತರಣೆಯ ಸಾಧಕ-ಬಾಧಕಗಳನ್ನು ತಾಂತ್ರಿಕ ದೃಷ್ಟಿಯಿಂದ ನೋಡಿದಾಗ, ಬೆಂಗಳೂರಿನಿಂದ ಸುಮಾರು 50-60 ಕಿ.ಮೀ. ದೂರದಲ್ಲಿರುವ ರಾಮನಗರ ಮತ್ತು ಮಾಗಡಿಗೆ ಮೆಟ್ರೋ ತೆಗೆದುಕೊಂಡು ಹೋಗುವುದು ದುಬಾರಿ ಹಾಗೂ ಸಾಧ್ಯವಲ್ಲ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗುತ್ತದೆ.

ಮುಖ್ಯವಾಗಿ ಮೆಟ್ರೋ, ಹೆಚ್ಚು ಜನದಟ್ಟಣೆ ಇರುವ ಬೆಂಗಳೂರಿನಂತಹ ಮಹಾನಗರಗಳಿಗೆ ಸೂಕ್ತವಾಗಿದ್ದು, ಹೀಗೆ ಉಪನಗರಗಳಿಗೆ ಸಂಪರ್ಕ ಕಲ್ಪಿಸಲು ಮೆಟ್ರೋ ಕಾಯ್ದೆಯಲ್ಲಿ ಅವಕಾಶ ಇಲ್ಲ. ಇದ್ದರೂ 50-60 ಕಿ.ಮೀ. ದೂರದ ಊರುಗಳಿಗೆ ತೆಗೆದುಕೊಂಡು ಹೋಗುವುದು ಆರ್ಥಿಕವಾಗಿ ಹೊರೆ ಆಗಲಿದೆ. ಪ್ರತಿ ಕಿ.ಮೀ. ಮೆಟ್ರೋ ನಿರ್ಮಾಣಕ್ಕೆ ಅಂದಾಜು 200

ಕೋಟಿ ರೂ. ವೆಚ್ಚ ಆಗುತ್ತದೆ. ಅಂದರೆ ಇಡೀ ಮಾರ್ಗ ಕ್ರಮಿಸಲು 12 ಸಾವಿರ ಕೋಟಿ ರೂ. ಖರ್ಚಾಗುತ್ತದೆ. ಇಷ್ಟು ಹಣ ಸುರಿದು ಕಟ್ಟಿದರೂ, ರಾಜಧಾನಿಯಂತೆ ನಿರಂತರವಾಗಿ ರಾಮನಗರ ಅಥವಾ ಮಾಗಡಿಯಿಂದ ಜನದಟ್ಟಣೆ ಇರುವುದು ಅನುಮಾನ. ಬಿಡದಿವರೆಗಿವೆ ಕೈಗಾರಿಕೆಗಳು: ಪ್ರತಿ 5ರಿಂದ 15 ನಿಮಿಷಕ್ಕೊಂದು ರೈಲು ಕಾರ್ಯಾಚರಣೆ ಮಾಡಲಿದ್ದು, ಜನ ಬಾರದಿದ್ದರೆ ಕಾರ್ಯಾಚರಣೆ ಹೊರೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ದ ಮೇಲೆಯೇ ಬೀಳುತ್ತದೆ.

ಒಂದು ವೇಳೆ ಬೆಳಿಗ್ಗೆ ಮತ್ತು ಸಂಜೆ ಮಾತ್ರ ಕಾರ್ಯಾಚರಣೆ ಮಾಡುವುದಾದರೆ, ಇದಕ್ಕಾಗಿ ಹತ್ತಾರು ಸಾವಿರ ಕೋಟಿ ರೂ. ಸುರಿದು ಮೆಟ್ರೋ ನಿರ್ಮಿಸಬೇಕಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಲ್ಲದೆ, ಈಗಿರುವ ಟಿಕೆಟ್‌ ದರಕ್ಕೆ ಹೋಲಿಸಿದರೆ, ಜನರಿಗೂ ಆರ್ಥಿಕವಾಗಿ ಇದು ಹೊರೆ ಆಗುವ ಸಾಧ್ಯತೆ ಇದೆ. ಇನ್ನು ಬಿಡದಿವರೆಗೆ ಕೈಗಾರಿಕೆಗಳು ವಿಸ್ತರಣೆ ಆಗಿವೆ. ನಗರದಿಂದ ನಿತ್ಯ ಹೋಗಿ-ಬರುವ ಗ್ರಾಹಕರು, ಉದ್ಯಮಿಗಳು, ಕಾರ್ಮಿಕರು ಇದ್ದಾರೆ.

ಅವರಿಗೆ ಇದು ಅನುಕೂಲ ಆಗುತ್ತದೆ. ಅಲ್ಲಿಂದ ಮುಂದೆ ಜನ ಬರುವುದು ಕಷ್ಟ ಎಂದು ಸ್ವತಃ ಉದ್ಯಮಿಗಳು ತಿಳಿಸುತ್ತಾರೆ. ಅಷ್ಟಕ್ಕೂ ಪೀಕ್‌ ಅವರ್‌ನಲ್ಲಿ ಜನ ಬಂದರೂ ರಾಮನಗರದಿಂದ ಬಿಡದಿಗೆ

ಬರುವಷ್ಟರಲ್ಲಿ ಭರ್ತಿ ಆಗಿರುತ್ತದೆ. ಆಗ, ಬಿಡದಿಯಿಂದ ಬರುವವರ ಪಾಡು ಏನು ಎಂಬ ಪ್ರಶ್ನೆ ಕೂಡ ಕಾಡುತ್ತದೆ.

 ತಕ್ಷಣದಲ್ಲೇ ದಲ್ಲೇ ರೈಲು ಓಡಿಸಬಹುದು! :-

 ಸರ್ಕಾರ ಮನಸ್ಸು ಮಾಡಿದರೆ, ಆರೆಂಟು ತಿಂಗಳಲ್ಲಿ ಬೆಂಗಳೂರಿನಿಂದ ರಾಮನಗರಕ್ಕೆ ಹೆಚ್ಚು ಖರ್ಚಿಲ್ಲದೆ ರೈಲು ಸಂಪರ್ಕ ಕಲ್ಪಿಸಬಹುದು! ಹೌದು, ಈ ಮೊದಲು ಬೆಂಗಳೂರು ಸಿಟಿಯಿಂದ ರಾಮನಗರಕ್ಕೆ ನಿತ್ಯ “ಮೆಮು’ ರೈಲುಗಳ ಸೇವೆ ಇತ್ತು.

ಕೊರೊನಾ ಮತ್ತಿತರ ಕಾರಣಗಳಿಂದ ಅದನ್ನು ಸ್ಥಗಿತಗೊಳಿಸಲಾಗಿದೆ. ಅಷ್ಟೇ ಅಲ್ಲ, ಉಪನಗರ ರೈಲು ಯೋಜನೆಯಲ್ಲೂ ರಾಮನಗರವನ್ನು ಕೈಬಿಟ್ಟು, ಕೆಂಗೇರಿಗೆ ಸೀಮಿತಗೊಳಿಸಲಾಗಿದೆ. ಈಗ ಅಟೋಮೆಟಿಕ್‌ ಸಿಗ್ನಲ್‌ಗ‌ಳನ್ನು ಅಳವಡಿಸಿ, ಲೆವೆಲ್‌ ಕ್ರಾಸಿಂಗ್‌ಗಳನ್ನು ತೆರವುಗೊಳಿಸಿದರೆ, ಆರೆಂಟುತಿಂಗಳಲ್ಲಿ ರಾಮನಗರಕ್ಕೆ ರೈಲು ಸಂಪರ್ಕ ಕಲ್ಪಿಸಬಹುದು ಎಂದು ನಗರ ರೈಲು ತಜ್ಞ ಸಂಜೀವ್‌ ದ್ಯಾಮಣ್ಣವರ ಅಭಿಪ್ರಾಯಪಡುತ್ತಾರೆ.

ಪ್ರಸ್ತುತ ರಾಮನಗರ ಜನ ಮೈಸೂರಿನಿಂದ ಬರುವ ರೈಲುಗಳನ್ನು ಎದುರುನೋಡಬೇಕಿದೆ. ಇನ್ನು ಮೆಟ್ರೋ ಕೆಂಗೇರಿ ಬರಲಿಕ್ಕೇ ಇಷ್ಟು ವರ್ಷಗಳಾಯ್ತು. ರಾಮನಗರಕ್ಕೆ ದಶಕಗಳೇ ಬೇಕಾಗುತ್ತದೆ. ಹೀಗಿರುವಾಗ, ಉಪನಗರ ರೈಲು ಯೋಜನೆ ಅಡಿ ಇದನ್ನು ಸೇರಿಸಿ ಅನುಷ್ಠಾನಗೊಳಿಸಬಹುದು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕಷ್ಟೇ ಎಂದು ಅವರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next