Advertisement

22 ರಂದು ಮೆಟ್ರೋ ಸಿಬ್ಬಂದಿ ಮುಷ್ಕರ

10:57 AM Mar 10, 2018 | Team Udayavani |

ಬೆಂಗಳೂರು: ಬಡ್ತಿ ನೀಡದಿರುವ ಕ್ರಮ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಮಾ.22ರಿಂದ
ಮುಷ್ಕರ ನಡೆಸಲು ಮೆಟ್ರೋ ಸಿಬ್ಬಂದಿ ನಿರ್ಧರಿಸಿದ್ದಾರೆ.

Advertisement

ಮೆಟ್ರೋ ಸಿಬ್ಬಂದಿ ಹೋರಾಟವನ್ನು ಹತ್ತಿಕ್ಕಲು ಬಿಎಂಆರ್‌ಸಿಎಲ್‌ ಹಾಗೂ ರಾಜ್ಯ ಸರ್ಕಾರ ಜಾರಿ ಮಾಡಲು ಮುಂದಾಗಿದ್ದ ಎಸ್ಮಾ ಕಾಯ್ದೆ ವಿರುದ್ಧ ಹೈಕೋರ್ಟ್‌ ನಿಂದ ಈ ಹಿಂದೆಯೇ ತಡೆ ತರಲಾಗಿತ್ತು. 

ರೈಲ್ವೆ ಉದ್ಯಮ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ರಾಜ್ಯ ಸರ್ಕಾರಕ್ಕೆ ಎಸ್ಮಾ ಜಾರಿ ಮಾಡಲು ಅವಕಾಶ ಇರುವುದಿಲ್ಲ. ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಾ.22ರಿಂದ ಹೋರಾಟ ಆರಂಭಿಸಲಿದ್ದೇವೆ ಎಂದು ಮೆಟ್ರೋ ಸಿಬ್ಬಂದಿ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯ ನಾರಾಯಣ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಸ್ಮಾ ಜಾರಿ ವಿರೋಧಿಸಿ ಹೈಕೋರ್ಟ್‌ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೆವು. ವಿಚಾರಣೆ ನಡೆಸಿದ
ನ್ಯಾಯಪೀಠ, ಸರ್ಕಾರದ ಆದೇಶವನ್ನು ತಡೆ ಹಿಡಿದಿದೆ. ಹೀಗಾಗಿ ನಮ್ಮ ಬೇಡಿಕೆಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ
ಈಡೇರಿಸದೇ ಇದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದೇವೆ ಎಂಬ ಎಚ್ಚರಿಕೆ ನೀಡದರು.

ಸಿಬ್ಬಂದಿ ನೌಕರರ ಸಂಘಕ್ಕೆ ಬಿಎಂಆರ್‌ ಸಿಎಲ್‌ ಮಾನ್ಯತೆ ನೀಡಬೇಕು. ಸೇವಾ ನಿಯಮಗಳ ಬದಲಿಗೆ ಸ್ಥಾಯಿ ಆದೇಶಗಳ ಪಾಲನೆ ಮಾಡಬೇಕು. ಸಂಘದ ಸದಸ್ಯರಿಗೆ ಅಧಿಕಾರಿಗಳು ನೀಡುತ್ತಿರುವ ಕಿರುಕುಳ ನಿಲ್ಲಬೇಕು. ನೌಕರರ ಕುಂದುಕೊರತೆಗಳನ್ನು ನಿವಾರಿಸಿ, ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ರದ್ದುಮಾಡಬೇಕು ಎಂದು ಆಗ್ರಹಿಸಿದರು.
 
ಮೆಟ್ರೋ ನಿಯಮದಂತೆ ಮುಷ್ಕರ ನಡೆಸುವ ಕುರಿತು ಹಾಗೂ ನಮ್ಮ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಮಾ.7ರಂದು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು, 14 ದಿನಗಳ ಗಡುವು ನೀಡಲಾಗಿದೆ. ಅಷ್ಟರೊಳಗೆ ಸಂಘದ ಪಾದಾಧಿಕಾರಿಗಳೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸಿದರೆ ಮುಷ್ಕರ ಹಿಂಪಡೆದುಕೊಳ್ಳುತ್ತೇವೆ ಎಂದರು.

Advertisement

ಮಾ.22ರಂದು ಶಾಂತಿನಗರ, ಮೆಜೆಸ್ಟಿಕ್‌, ಬೈಯಪ್ಪನಹಳ್ಳಿ ಸೇರಿ ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ಪ್ರತಿಭಟನಾ
ಬ್ಯಾಡ್ಜ್ ಧರಿಸಿ, ಘೋಷಣೆಗಳನ್ನು ಕೂಗಿ ಮುಷ್ಕರ ಮಾಡಲಿದ್ದೇವೆ. ಅಂದು ಮೆಟ್ರೋ ಸಂಚಾರವೂ ವ್ಯತ್ಯಾಸವಾಗಬಹುದು ಎಂದು ಹೇಳಿದರು

ಇಂದು, ನಾಳೆ ಮೆಟ್ರೋ ಸೇವೆಯಲ್ಲಿ ವ್ಯತ್ಯಯ’
ಬೆಂಗಳೂರು:
ಹಳಿ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ “ನಮ್ಮ ಮೆಟ್ರೋ’ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. 

ಮಾ.10ರಂದು ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ಸೇವೆಯು ನಿಗದಿತ ಅವಧಿಗಿಂತ 45 ನಿಮಿಷ ಮುಂಚಿತವಾಗಿಯೇ ಸ್ಥಗಿತಗೊಳ್ಳಲಿದೆ. ಅಂದರೆ, ನಾಗಸಂದ್ರ, ಯಲಚೇನಹಳ್ಳಿ, ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ಟರ್ಮಿನಲ್‌ ನಿಲ್ದಾಣಗಳಿಂದ ಕೊನೆಯ ರೈಲುಗಳು 11ರ ಬದಲಿಗೆ ರಾತ್ರಿ 10.15ಕ್ಕೇ ಹೊರಡಲಿವೆ.
 
ಅದೇ ರೀತಿ, ಭಾನುವಾರ ಎರಡೂ ಮಾರ್ಗಗಳಲ್ಲಿ ಎರಡೂವರೆ ತಾಸು ತಡವಾಗಿ ಸೇವೆ ಆರಂಭಗೊಳ್ಳಲಿದೆ. ಅಂದು ಬೆಳಗ್ಗೆ 8ರ ಬದಲಿಗೆ 10.30ಕ್ಕೆ ನಾಗಸಂದ್ರ, ಯಲಚೇನಹಳ್ಳಿ, ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ
ನಿಲ್ದಾಣಗಳಿಂದ ರೈಲು ಸಂಚಾರ ಆರಂಭಿಸಲಿವೆ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಸಿಬ್ಬಂದಿಗೆ ಎಸ್ಮಾ ಪ್ರಯೋಗದ ಎಚ್ಚರಿಕೆ
ಬಡ್ತಿ ನೀಡದಿರುವ ಕ್ರಮ ಖಂಡಿಸಿ “ನಮ್ಮ ಮೆಟ್ರೋ’ ಸಿಬ್ಬಂದಿ ಮುಷ್ಕರಕ್ಕೆ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಪ್ರತಿಯಾಗಿ ಬಿಎಂಆರ್‌ ಸಿಯು ಎಸ್ಮಾ ಅಸ್ತ್ರ ಪ್ರಯೋಗದ ಎಚ್ಚರಿಕೆ ನೀಡಿದೆ.”ಸರ್ಕಾರಿ ಆದೇಶದ ಪ್ರಕಾರ ಮೆಟ್ರೋ ಸೇವೆಯು ಎಸ್ಮಾ ಕಾಯ್ದೆ ಅಡಿ ಬರುತ್ತದೆ. ಹಾಗೊಂದು ವೇಳೆ ಸಿಬ್ಬಂದಿ ಮುಷ್ಕರದಲ್ಲಿ ಭಾಗವಹಿಸಿದರೆ, ಅಂತಹವರ  ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ಎಚ್ಚರಿಸಿದ್ದಾರೆ.

ನಿಗಮದ ಕಾರ್ಯಾಚರಣೆ ವಿಭಾಗದ ಕೆಲವು ಸಿಬ್ಬಂದಿ ಎಂಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಯಾವುದೇ ಬಡ್ತಿ ನೀಡಿಲ್ಲ. ವಿಭಾಗದ ಎಂಜಿನಿಯರ್‌ಗಳಿಗೆ ಸಹಾಯಕ ವ್ಯವಸ್ಥಾಪಕರಾಗಿ ಬಡ್ತಿ ನೀಡಲು ಅವಕಾಶವಿದೆ. ಆದರೆ, ನಿಗಮವು ಸಹಾಯಕ ವ್ಯವಸ್ಥಾಪಕ ಹುಳ್ಳಿಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ನಿಗಮದ ಸಿಬ್ಬಂದಿಗೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿ ಮುಷ್ಕರಕ್ಕೆ ಮುಂದಾಗಿದೆ.

ಸಿಬ್ಬಂದಿ ಮುಷ್ಕರ ನಡೆಸಿದರೆ, ಪ್ರಯಾಣಿಕರಿಗೆ ತೊಂದರೆ ಆಗದಂತೆ ಸೇವೆಗಳನ್ನು ನಿರ್ವಹಿಸಲು ಅಗತ್ಯ
ವ್ಯವಸ್ಥೆ ಮಾಡಲಾಗುವುದು ಹಾಗೂ ಪ್ರಯಾಣಿಕರಿಗೂ ಅಗತ್ಯ ಭದ್ರತೆ ಒದಗಿಸಲಾಗುವುದು ಎಂದೂ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಮುಗ್ಧ ನೌಕರರನ್ನು ತಪ್ಪುದಾರಿಗೆ ಎಳೆಯಲು ಯತ್ನಿಸುವ ವ್ಯಕ್ತಿಗಳಿಂದ ದೂರ ಇರುವಂತೆ ಮತ್ತು ಅಂತಹ
ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಉದ್ಯೋಗಿಗಳಿಗೆ ಸಲಹೆ ನೀಡಲಾಗಿದೆ ಎಂದೂ ಅವರು ಪ್ರಕಟಣೆಯಲ್ಲಿ
ಸ್ಪಷ್ಟಪಡಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next