Advertisement

ವಿಧಾನ ಕದನ 2023: ಸಿದ್ದು , ಡಿಕೆಶಿ ಪಕ್ಷ ಕಟ್ಟುವವರಲ್ಲ ,ಸಿಎಂ ಹುದ್ದೆಗೆ ಬಡಿದಾಡುವವರು!

11:09 PM Mar 14, 2023 | Team Udayavani |

ಮಣಿಪಾಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿಗಾಗಿ ಒಳಗೊಳಗೆ ಬಡಿದಾಡಿಕೊಳ್ಳುತ್ತಿದ್ದಾರೆ. ಅವರಿಬ್ಬರೂ ಸಿಎಂ ಸ್ಥಾನ ನೀಡುವುದಿಲ್ಲ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಹೇಳಿದಾಕ್ಷಣ ಪಕ್ಷ ಬಿಟ್ಟು ಓಡಿ ಹೋಗಲಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ವಾಗ್ಧಾಳಿ ನಡೆಸಿದರು.

Advertisement

ಕರ್ನಾಟಕದಲ್ಲಿ ರಾಜಕೀಯ ಪಕ್ಷವೊಂದು ಬದುಕಿದ್ದರೆ ಅದು ಬಿಜೆಪಿ ಮಾತ್ರ. ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಕುರ್ಚಿಗಾಗಿ ಹೊಡೆದಾಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಪೈಪೋಟಿ ಬಿಟ್ಟು ಪಕ್ಷ ಸಂಘಟನೆ ಮಾಡಿ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಅವರಿಬ್ಬರಿಗೂ ಹೇಳಿದಾಕ್ಷಣವೇ ಪಾರ್ಟಿ ಬಿಟ್ಟು ಓಡುತ್ತಿರುತ್ತಾರೆ. ಯಾವ ಪಕ್ಷಕ್ಕೆ ಹೋಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿದ್ದಾರೆ ಎಂದು ಮಣಿಪಾಲದಲ್ಲಿ ಮಂಗಳವಾರ “ಉದಯವಾಣಿ”ಯೊಂದಿಗೆ ನಡೆಸಿದ ಚಿಟ್‌ಚಾಟ್‌ನಲ್ಲಿ ಈಶ್ವರಪ್ಪ ಹೇಳಿದರು.

ಬಿಜೆಪಿ ಬೂತ್‌ ಮಟ್ಟದಿಂದ ಪೇಜ್‌ ಪ್ರಮುಖರ ತನಕ ಪಕ್ಷ ಸಂಘಟನೆ ಮಾಡುತ್ತಿದೆ. ಕಾರ್ಯಕರ್ತರ ಶ್ರಮ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವ, ಅಭಿವೃದ್ಧಿ ಕಾರ್ಯಗಳು, ಭಾರತೀಯ ಸಂಸ್ಕೃತಿ, ದೇಶ ರಕ್ಷಣೆಗೆ ಆದ್ಯತೆ ನೀಡುತ್ತಿದ್ದೇವೆ. ಬಿಜೆಪಿಯ ಮೇಲೆ ಜನರಿಗೆ ವಿಶ್ವಾಸವಿದೆ. ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದೇವೆ ಎಂದರು.

ನೇರ ನುಡಿ ವಿವಾದವೇ?
ಇದ್ದ ವಿಚಾರವನ್ನು ಅಥವಾ ಜನ ಸಾಮಾನ್ಯರು ಏನು ಮಾತನಾಡಿಕೊಳ್ಳುತ್ತಿದ್ದಾರೋ ಅದನ್ನು ನೇರವಾಗಿ ಹೇಳುತ್ತೇನೆ. ನೇರ ನುಡಿಯೇ ವಿವಾದವಾಗಿ ಕಾಣುತ್ತದೆ. ಅದಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ನಂಬಿದ ಸಿದ್ಧಾಂತವನ್ನು ಬಿಟ್ಟು ಬದುಕುವ, ಮಾತನಾಡುವ ಪ್ರಶ್ನೆಯೇ ಇಲ್ಲ. ಚುನಾವಣೆಗಾಗಿ ರಾಜಕಾರಣ ಮಾಡುತ್ತಿಲ್ಲ. ಸಮಾಜವನ್ನು ಜಾಗೃತಗೊಳಿಸಿ ರಾಷ್ಟ್ರನಿಷ್ಠೆ ತರಲು ರಾಜಕಾರಣ ಮಾಡುತ್ತಿದ್ದೇವೆ. ನಾನು ಮುಸ್ಲಿಂ ವಿರೋಧಿಯಲ್ಲ. ನನ್ನ ಹೇಳಿಕೆಯನ್ನು ರಾಷ್ಟ್ರವಾದಿ ಮುಸ್ಲಿಮರು ಒಪ್ಪುತ್ತಾರೆ. ಪಿಎಫ್ಐ, ಎಸ್‌ಡಿಪಿಐ ಅನುಯಾಯಿಗಳು ಈಶ್ವರಪ್ಪ ಅವರು ಮುಸ್ಲಿಂ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ನನಗೆ ಅದರಿಂದ ಯಾವ ಭಯವೂ ಇಲ್ಲ ಎಂದರು.

ಟಿಕೆಟ್‌ಗಾಗಿ ಗೂಟ ಹೊಡೆದು ಕೂತಿಲ್ಲ. ಪಕ್ಷ ಟಿಕೆಟ್‌ ಕೊಟ್ಟರೆ ಸ್ಪರ್ಧೆ ಮಾಡುವೆ, ಇಲ್ಲವಾದರೆ ಇಲ್ಲ. ಸಚಿವ ಸ್ಥಾನಕ್ಕಾಗಿಯೂ ಸರಕಾರ ಅಥವಾ ಪಕ್ಷಕ್ಕೆ ಕಿರಿಕಿರಿ ಮಾಡಿಲ್ಲ; ಮಾಡುವುದೂ ಇಲ್ಲ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next