Advertisement

ವಿಧಾನ-ಕದನ 2023: ಇಲ್ಲಿ ವ್ಯಕ್ತಿ ನಿಷ್ಠೆಗಿಂತ ಪಕ್ಷನಿಷ್ಠೆಯೇ ಅಂತಿಮ!

12:10 AM Mar 30, 2023 | Team Udayavani |

ಮಂಗಳೂರು: ಚುನಾವಣೆಗಳಲ್ಲಿ ಬಹುತೇಕ ಕಡೆ ಪಕ್ಷ ನಿಷ್ಠೆಗಿಂತ ವ್ಯಕ್ತಿಯ ವರ್ಚಸ್ಸು ಮತ್ತಾತನ ಬಗೆಗಿನ ಮತದಾರರ ನಿಷ್ಠೆ ಹೆಚ್ಚು ಪ್ರಾಮುಖ್ಯ ಪಡೆಯುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಗೆ ಇದು ಅನ್ವಯಿಸದು. ಯಾಕೆಂದರೆ ಇಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದು ಬೀಗಿದವರಿಲ್ಲ!

Advertisement

ಹಾಗೆಂದು, ಪಕ್ಷೇತರರು ಸ್ಪರ್ಧೆಯಿಂದ ಹಿಂದೆ ಸರಿದಿಲ್ಲ. ಇಲ್ಲಿಯವರೆಗಿನ ಎಲ್ಲ ವಿಧಾನ ಸಭಾ ಚುನಾವಣೆಗಳಲ್ಲೂ ಸ್ಪರ್ಧಿ ಸುತ್ತಿದ್ದಾರೆ. ಈ ಬಾರಿಯೂ ಹಲವರ ಸ್ಪರ್ಧೆ ಖಚಿತ. ಆದರೆ ಪ್ರಮುಖ ಪಕ್ಷಗಳ ಆಕಾಂಕ್ಷಿಗಳು ಬಂಡೆದ್ದು ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ. ಆದರೂ ಈಗಲೇ “ಷರಾ” ಬರೆಯುವುದು ಕಷ್ಟ.

ಜಿಲ್ಲೆಯಲ್ಲಿ ಪಕ್ಷೇತರರ ಸ್ಪರ್ಧೆಗೆ ಸುದೀರ್ಘ‌ ಇತಿಹಾಸವಿದೆ. ಆರಂಭದ ಚುನಾವಣೆಗಳಲ್ಲಿ ಪಕ್ಷೇತರರು ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಬಲ ಸ್ಪರ್ಧೆಯನ್ನು ನೀಡಿ ಗಣನೀಯ ಪ್ರಮಾಣದಲ್ಲಿ ಮತಗಳನ್ನು ಗಳಿಸುತ್ತಿದ್ದರು. ಕೆಲವು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಬಲ ಪೈಪೋಟಿ ನೀಡಿ 2ನೇ ಸ್ಥಾನದಲ್ಲಿ ಸ್ಫರ್ಧೆ ಮುಗಿಸಿದ್ದೂ ಉಂಟು.
ಅಲ್ಲಗಳೆಯುವಂತಿಲ್ಲ!

1957ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರತ್ನವರ್ಮ ಹೆಗ್ಗಡೆ ಅವರು ಜಯಗಳಿಸಿದ್ದರು. ಆದರೆ ಇಲ್ಲಿ ಅವರಿಗೆ ನಿಕಟ ಸ್ಪರ್ಧೆ ನೀಡಿದ್ದು ಪಕ್ಷಗಳ ಅಭ್ಯ ರ್ಥಿಗಳಲ್ಲ. ಬದಲಿಗೆ ಪಕ್ಷೇತರ ಅಭ್ಯರ್ಥಿ ರಾಮನಾಥ ಶೆಣೈ. ಆಗ ರತ್ನವರ್ಮ ಹೆಗ್ಗಡೆ ಅವರು 20,563 ಮತಗಳನ್ನು ಪಡೆದಿದ್ದರು. ರಾಮನಾಥ ಶೆಣೈ ಅವರು 8,920 ಮತ ಗಳನ್ನು ಗಳಿಸಿ ದ್ವಿತೀಯ ಸ್ಥಾನಿಯಾಗಿದ್ದರು. 1967ರಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ. ಲೀಲಾವತಿ ರೈ ಅವರ ವಿರುದ್ದ ಪಕ್ಷೇತರ ಅಭ್ಯರ್ಥಿ ಎ. ಸೋಮಯಾಜಿ ಪ್ರಬಲ ಸ್ಪರ್ಧೆ ನೀಡಿದ್ದರು. ಲೀಲಾವತಿ ರೈ 20,347 ಮತಗಳನ್ನು ಪಡೆದಿದ್ದರೆ ಸೋಮಯಾಜಿ ಅವರು 10,993 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರು.
ಮಂಗಳೂರು 1ರಲ್ಲಿ 1967ರಲ್ಲಿ ಕಾಂಗ್ರೆಸ್‌ ಮತ್ತು ಪಕ್ಷೇತರ ಅಭ್ಯರ್ಥಿಗಳ ನಡುವ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ನಾಯಕ್‌ 15,105 ಮತಗಳನ್ನು ಗಳಿಸಿದ್ದರೆ ಪಕ್ಷೇತರ ಅಭ್ಯರ್ಥಿ ಎ.ಆರ್‌. ಅಹಮ್ಮದ್‌ 9,099 ಮತಗಳನ್ನು ಗಳಿಸಿ ದ್ವಿತೀಯ ಸ್ಥಾನಿಯಾಗಿದ್ದರು. ಇದೇ ಕ್ಷೇತ್ರದಲ್ಲಿ 1962ರಲ್ಲಿ ಪಕ್ಷೇತರ ಅಭ್ಯರ್ಥಿ ಲೋರಾ ಪಾಯಸ್‌ 9,588 ಮತಗಳನ್ನು ಪಡೆದು ತೃತೀಯ ಸ್ಥಾನಿಯಾಗಿದ್ದರು.

ಉಡುಪಿಯಲ್ಲಿ ಗೆದ್ದು ಬೀಗಿದ ಮೂವರು!
ಪಕ್ಷೇತರರ ವಿಷಯದಲ್ಲಿ ದ.ಕ. ಜಿಲ್ಲೆಗೆ ಹೋಲಿಸಿ ದರೆ ಉಡುಪಿ ಜಿಲ್ಲೆ ಬಹು ಭಿನ್ನ. ಇಲ್ಲಿ ಬ್ರಹ್ಮಾವರ ಕ್ಷೇತ್ರದಲ್ಲಿ ಜಯಪ್ರಕಾಶ್‌ ಹೆಗ್ಡೆ ಅವರು ಪಕ್ಷದ ಹಂಗಿಲ್ಲದೆ ಪಕ್ಷೇತರರಾಗಿ ಸ್ಪರ್ಧಿಸಿ 1967ರಲ್ಲಿ ಜಯ ಗಳಿಸಿದ್ದರು. ಅವಿಭಜಿತ ದ.ಕ. ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ಇದು ಪ್ರಥಮ. ಬ್ರಹ್ಮಾವರ ಕ್ಷೇತ್ರದಿಂದ 1999 ಹಾಗೂ 2004ರಲ್ಲಿ ಕೆ. ಜಯಪ್ರಕಾಶ್‌ ಹೆಗ್ಡೆ ಪಕ್ಷೇತರರಾಗಿ ಜಯ ಸಾಧಿಸಿದ್ದರು. ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಪಕ್ಷೇತರರಾಗಿಯೇ ಗೆದ್ದು ಬೀಗಿದವರು.

Advertisement

ದಾಖಲೆ ಬರೆದಿದ್ದ ಶಕುಂತಳಾ ಶೆಟ್ಟಿ
ದ.ಕ. ಜಿಲ್ಲೆಯಲ್ಲಿ ಈವರೆಗೆ ನಡೆದ ಚುನಾವಣೆ ಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗರಿಷ್ಠ ಮತಗಳನ್ನು ಪಡೆದ ದಾಖಲೆ ಶಕುಂತಳಾ ಶೆಟ್ಟಿಯವರದ್ದು. 2008ರಲ್ಲಿ ಪುತ್ತೂರು ಕ್ಷೇತ್ರದಿಂದ ಬಿಜೆಪಿಯು ಶಕುಂತಳಾ ಶೆಟ್ಟಿಯವರಿಗೆ ಟಿಕೆಟ್‌ ನಿರಾಕರಿಸಿದಾಗ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು 25,171 ಮತಗಳನ್ನು ಪಡೆದಿದ್ದರು. ಈ ಚುನಾವಣೆಯಲ್ಲಿ ಬಿಜೆಪಿಯ ಮಲ್ಲಿಕಾ ಪ್ರಸಾದ್‌ ಅವರು 46,605, ಕಾಂಗ್ರೆಸ್‌ನ ಬೊಂಡಾಲ ಜಗನ್ನಾಥ ಶೆಟ್ಟಿ ಅವರು 45,180 ಮತಗಳನ್ನು ಗಳಿಸಿದ್ದರು.

2013ರಲ್ಲಿ ಗರಿಷ್ಠ ಅಭ್ಯರ್ಥಿಗಳು
2013ರ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚುನಾವಣ ಕಣದಲ್ಲಿದ್ದ ಒಟ್ಟು 71 ಅಭ್ಯರ್ಥಿ ಗಳಲ್ಲಿ 23 ಮಂದಿ ಪಕ್ಷೇತರ ಅಭ್ಯರ್ಥಿ ಗಳಿದ್ದರು. 2018ರಲ್ಲಿ 21 ಪಕ್ಷೇತರ ಅಭ್ಯರ್ಥಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next