Advertisement

ಲೋಕಾ ಕೊಲೆ ಯತ್ನದ ನಂತರ ಬಂದ ಮೆಟಲ್‌ ಡಿಟೆಕ್ಟರ್‌!

11:52 AM Mar 09, 2018 | Team Udayavani |

ಬೆಂಗಳೂರು: ಲೋಕಾಯುಕ್ತ ಕಚೇರಿಯಲ್ಲೇ ಲೋಕಾಯುಕ್ತರಿಗೆ ಚಾಕು ಇರಿದ ಪ್ರಕರಣಕ್ಕೆ ನಗರ ಪೊಲೀಸ್‌ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂಬ ಅಂಶ ಬಹಿರಂಗವಾಗಿದೆ.

Advertisement

ಲೋಕಾಯುಕ್ತ ಕಚೇರಿ, ಎಂ.ಎಸ್‌. ಕಟ್ಟಡ ಹಾಗೂ ವಿಧಾನಸೌಧದಲ್ಲಿ ಭದ್ರತಾ ಲೋಪಗಳಿದ್ದು, ಕೂಡಲೇ ಭದ್ರತೆ ಹೆಚ್ಚಿಸುವಂತೆ 2015ರಲ್ಲೇ ರಾಜ್ಯಗುಪ್ತಚರ ಇಲಾಖೆ ಅಧಿಕಾರಿಗಳು, ರಾಜ್ಯ ಸರ್ಕಾರ ಹಾಗೂ ಪೊಲೀಸ್‌ ಇಲಾಖೆಗೆ ವರದಿ ನೀಡಿದ್ದರೂ, ಸರ್ಕಾರವಾಗಲಿ, ಪೊಲೀಸ್‌ ಇಲಾಖೆಯಾಗಲಿ ಎಚ್ಚೆತ್ತುಕೊಂಡಿರಲಿಲ್ಲ.

ಲೋಹಶೋಧಕ ಯಂತ್ರ ಹಾಗೂ ಇತರ ಭದ್ರತಾ ವ್ಯವಸ್ಥೆಗಳನ್ನು ಒದಗಿಸುವಂತೆ ಲೋಕಾಯುಕ್ತ ರಿಜಿಸ್ಟ್ರಾರ್‌, ನಗರ ಪೊಲೀಸ್‌ ಆಯುಕ್ತರಿಗೆ 2018ರ ಜನವರಿಯಲ್ಲಿ ಪತ್ರ ಬರೆದಿದ್ದರೂ, ಸ್ಪಂದನೆ ದೊರೆತಿಲ್ಲ ಎಂದು ತಿಳಿದು ಬಂದಿದೆ.

ಕಡೆಗೂ ಬಂತು ಹೊಸ ಮೆಟಲ್‌ ಡಿಟೆಕ್ಟರ್‌: ಲೋಕಾಯುಕ್ತ ಆಡಳಿತ ವಿಭಾಗದ ಮನವಿಗೆ ಪೊಲೀಸ್‌ ಇಲಾಖೆ ಕಡೆಗೂ ಸ್ಪಂದಿಸಿದೆ. ಗುರುವಾರ ಲೋಕಾಯುಕ್ತ ಕಚೇರಿಯ ಪ್ರವೇಶದ್ವಾರದಲ್ಲಿ ಹೊಸ ಮೆಟಲ್‌ ಡಿಟೆಕ್ಟರ್‌ ಅಳವಡಿಸಿದ್ದು, ಕಚೇರಿಗೆ ಭೇಟಿ ನೀಡುವವರನ್ನು ಇಬ್ಬರು ಪೊಲೀಸ್‌ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದರು.

ಲೋಕಾಯುಕ್ತ ಸಿಬ್ಬಂದಿಯನ್ನು ಹೊರತುಪಡಿಸಿ ಕಚೇರಿಗೆ ಬರುವ ಸಾರ್ವಜನಿಕರು, ದೂರುದಾರರು, ಪ್ರತಿವಾದಿಗಳು ಮೆಟಲ್‌ ಡಿಟೆಕ್ಟರ್‌ ಮೂಲಕ ಪ್ರವೇಶಿಸಿದ ಬಳಿಕವೂ, ಮತ್ತೋರ್ವ ಪೊಲೀಸ್‌ ಸಿಬ್ಬಂದಿ, ಬ್ಯಾಗ್‌, ಜೇಬುಗಳನ್ನು ಪರಿಶೀಲಿಸುತ್ತಿದ್ದರು. ಬಳಿಕ  ಸಂದರ್ಶಕರ ಪುಸ್ತಕದಲ್ಲಿ ಖಚಿತ ಮೊಬೈಲ್‌ ದೂರವಾಣಿ, ಹೆಸರು, ಭೇಟಿಯಾಗಬೇಕಿರುವ ಉದ್ದೇಶ ಬರೆಸಿಕೊಂಡು ಒಳಬಿಡಲಾಗುತ್ತಿತ್ತು.  ಅನಗತ್ಯವಾಗಿ ಲೋಕಾಯುಕ್ತ ಕಚೇರಿ ಆವರಣದಲ್ಲಿ ಓಡಾಡುವವರನ್ನು ಪ್ರಶ್ನಿಸಿ ಹೊರಗೆ ಕಳುಹಿಸಲಾಗುತ್ತಿತ್ತು . 

Advertisement

ಮತ್ತೂಂದೆಡೆ ಲೋಕಾಯುಕ್ತರ ಮೇಲೆ ನಡೆದ ಚಾಕು ಇರಿತ ಪ್ರಕರಣ ಖಂಡಿಸಿ ಹಾಗೂ ಮತ್ತಷ್ಟು ಭದ್ರತಾ ಕ್ರಮಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಲೋಕಾಯುಕ್ತ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ವಕೀಲರು ಪ್ರತಿಭಟನೆ ನಡೆಸಿದರು. ಕೆಲ ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ಸೂಕ್ತ ಸಾಕ್ಷಿಗಳಿಲ್ಲದಿದ್ದರೆ ಅವುಗಳನ್ನು ಖುಲಾಸೆಗೊಳಿಸಲಾಗುತ್ತದೆ.

ಇದಕ್ಕೆ ಕಾನೂನು ಪ್ರಕಾರ ಹೋರಾಟ ಮಾಡಬೇಕು. ಖುಲಾಸೆಗೊಂಡಿರುವ ಆಕ್ರೋಶದಲ್ಲಿ ವಕೀಲರ ಮೇಲೆಯೂ ಹಲ್ಲೆ ನಡೆಸುವ ಸಾಧ್ಯತೆಗಳಿವೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಭದ್ರತಾ ವೈಫಲ್ಯದ ವಿರುದ್ಧ ಪ್ರತಿಭಟನಾ ನಿರತ ವಕೀಲರು ಆಕ್ರೋಶ ವ್ಯಕ್ತಪಡಿಸಿದರು. 

ಎಂಟು ಪತ್ರಗಳಿಗೂ ಸರ್ಕಾರದ ಉತ್ತರವಿಲ್ಲ: ಲೋಕಾಯುಕ್ತ ಕಚೇರಿಗೆ ಸೂಕ್ತ ಭದ್ರತೆ ನೀಡುವಂತೆ ಕೋರಿ 2015ರಿಂದ 2018ರವರೆಗೆ ಸರ್ಕಾರಕ್ಕೆ ಎಂಟು ಬಾರಿ ಪತ್ರ ಬರೆಯಲಾಗಿತ್ತು. 2015ರಲ್ಲಿ ಮೂರು ಬಾರಿ ಮೆಟಲ್‌ ಡಿಟೆಕ್ಟರ್‌ ಅಳವಡಿಸುವಂತೆ ಪತ್ರ ಬರೆಯಲಾಗಿತ್ತು. ನಂತರ 2016-17ರಲ್ಲಿ ಐದು ಬಾರಿ ಸರ್ಕಾರಕ್ಕೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಎಂದು ಲೋಕಾಯುಕ್ತ ಸಂಸ್ಥೆಯ ಉನ್ನತ  ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next