ಮಹಾನಗರ: ಒಳಚರಂಡಿ ಕಾಮಗಾರಿಗಾಗಿ ಬೆಂದೂರ್‌ವೆಲ್‌ನಲ್ಲಿ ಮ್ಯಾನ್‌ಹೋಲ್ ಅಗೆದು ಹಾಕಿರುವ ಕಾರಣದಿಂದ ಗಲೀಜು ನೀರು ರಸ್ತೆಯುದ್ದಕ್ಕೂ ಹರಿದು ವಾಹನ ಸವಾರರು, ಪಾದಾಚಾರಿಗಳಿಗೆ ಸಮಸ್ಯೆಯಾಗಿದೆ. ನೀರು ತುಂಬಿ ಕೊಂಡ ಪ್ರದೇಶ ಮಿನಿ ಈಜುಕೊಳದಂತಿದ್ದು, ಕಾಮಗಾರಿ ನಿಧಾನವಾಗಿ ಸಾಗುತ್ತಿದೆ.
ಬೆಂದೂರ್‌ವೆಲ್, ಕಂಕನಾಡಿ ಪ್ರದೇಶದಲ್ಲಿ ತುಂಬಾ ಹಳೆಯ ಒಳಚರಂಡಿ ಪೈಪ್ ಹಾದುಹೋಗುತ್ತಿದ್ದು, ಇದೇ ಕಾರಣಕ್ಕೆ ಪೈಪ್ ಬಿರುಕು ಬಿಟ್ಟಿತ್ತು. ಪರಿಣಾಮ ಕಳೆದ ಕೆಲವು ದಿನಗಳಿಂದ ಗಲೀಜು ನೀರು ರಸ್ತೆಯಲ್ಲೇ ಹರಿಯುತ್ತಿದೆ. ಈಗಾಗಲೇ ಕಾಮಗಾರಿ ಉದ್ದೇಶಕ್ಕೆ ರಸ್ತೆ ಅಗೆಯಲಾಗಿದ್ದು, ಅಗೆದ ಪ್ರದೇಶವಿಡೀ ಪೂರ್ತಿ ಗಲೀಜು ನೀರಿ ನಿಂದ ಆವೃತವಾಗಿದೆ. ಸದ್ಯ ಆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ವಾಹನ ಸವಾ ರರು ತೊಂದರೆ ಅನುಭವಿಸುತ್ತಿದ್ದಾರೆ. ಕಾಮಗಾರಿಗಾಗಿ ಅಗೆದ ಪ್ರದೇಶದಿಂದ ರಸ್ತೆ ಮಟ್ಟದವರೆಗೆ ಕೊಳಚೆ ನೀರು ಇದ್ದು, ವಾಹನಗಳು ಅಪಘಾತ ಉಂಟಾಗುವ ಸಾಧ್ಯತೆ ಎದುರಾಗಿದೆ.
ಕಾಮಗಾರಿ ಮತ್ತು ಅಪಾಯದ ಕಾರಣದಿಂದಾಗಿ ಈ ಪ್ರದೇಶದ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದೆ. ಆದರೆ ಬ್ಯಾರಿಕೇಡ್ ಕೂಡ ಕಾಮಗಾರಿ ಪ್ರದೇಶದ ಗುಂಡಿಗೆ ಬಿದ್ದಿದ್ದು, ರಾತ್ರಿ ವೇಳೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು ತತ್‌ಕ್ಷಣ ಗಮನಹರಿಸಿ ಕಾಮಗಾರಿಗೆ ವೇಗ ನೀಡಬೇಕು ಎನ್ನುತ್ತಾರೆ ಸಾರ್ವಜನಿಕರು.
ಸ್ಥಳೀಯ ಮನಪಾ ಸದಸ್ಯ ನವೀನ್ ಡಿಸೋಜಾ ಅವರು ಉದಯವಾಣಿ ಸುದಿನ ಕ್ಕೆ ಪ್ರತಿಕ್ರಿಯಿಸಿ, ಈ ಪ್ರದೇಶದಲ್ಲಿ ಒಳಚರಂಡಿ ಪೈಪ್‌ಲೈನ್ ಒಡೆದಿದ್ದು, ಸದ್ಯ ದುರಸ್ತಿ ಕಾಮಗಾರಿ ಸಾಗುತ್ತಿದೆ. ಪಕ್ಕದಲ್ಲಿಯೇ ನೀರಿನ ಮುಖ್ಯ ಪೈಲ್‌ಲೈನ್ ಕೂಡ ಹಾದುಹೋಗುವುದರಿಂದ ನಾಜೂಕಾಗಿ ಕೆಲಸ ನಡೆಸಬೇಕು. ನೀರಿನ ಪೈಪ್‌ಲೈನ್‌ಗೆ ಹಾನಿ ಉಂಟಾದರೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು. ಇದು ಸದಾ ಜನನಿಬಿಡ ಪ್ರದೇಶವಾದ ಕಾರಣ ದಿನದಿಡೀ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಅಲ್ಲದೆ, ಇತ್ತೀಚೆಗೆ ಮಳೆ ಬಂದ ಕಾರಣ ಕಾಮಗಾರಿ ತುಸು ವಿಳಂಬವಾಗಿತ್ತು. ಸದ್ಯ ಕಾಮಗಾರಿ ವೇಗ ಪಡೆದುಕೊಂಡಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಕಾಮಗಾರಿಗೆ ವೇಗ
ಬೆಂದೂರ್‌ವೆಲ್ ಬಳಿ ಒಳಚರಂಡಿ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗಿ ಗಲೀಜು ನೀರು ರಸ್ತೆಯಲ್ಲಿ ಹರಿಯುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳ ಜತೆ ಈ ಕುರಿತು ಚರ್ಚೆ ನಡೆಸಿದ್ದು, ಕಾಮಗಾರಿಗೆ ವೇಗ ನೀಡುವಂತೆ ಸೂಚನೆ ನೀಡಿದ್ದೇನೆ.
-ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್