Advertisement

ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಸರ್ವಥಾ ಸಲ್ಲದು

01:20 AM Mar 16, 2023 | Team Udayavani |

ರಾಜ್ಯಾದ್ಯಂತ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲು ರಾಜ್ಯ ಹೈಕೋರ್ಟ್‌ನ ವಿಭಾಗೀಯ ಪೀಠ ಕೊನೆಗೂ ಹಸುರು ನಿಶಾನೆ ತೋರಿದೆ. ಮೌಲ್ಯಾಂಕನದ ಮೂಲಕ ವಿದ್ಯಾರ್ಥಿಗಳ ಕಲಿಕಾ ಮಟ್ಟ, ಕಲಿಕಾ ನ್ಯೂನತೆಗಳು ಮತ್ತು ಯಾವ ವಿಷಯದಲ್ಲಿ ಹಿನ್ನಡೆ ಉಂಟಾಗಿದೆ ಎಂಬುದನ್ನು ತಿಳಿದುಕೊಳ್ಳಲು 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್‌ ಪರೀಕ್ಷೆ ನಡೆಸುವ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ಧಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ.

Advertisement

ಮೌಲ್ಯಾಂಕನ ಪರೀಕ್ಷೆ ನಡೆಸುವ ಸಂಬಂಧ ಸರಕಾರ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ ಹಾಗೂ ಇತರರು ಸಲ್ಲಿಸಿದ್ದ ಅರ್ಜಿ ಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ನ ಏಕಸದಸ್ಯ ಪೀಠ, ರಾಜ್ಯ ಸರಕಾರ ಹೊರ ಡಿಸಿರುವ ಸುತ್ತೋಲೆಯನ್ನು ರದ್ದುಗೊಳಿಸಿ ಮಾ. 11ರಂದು ಆದೇಶ ಹೊರಡಿಸಿತ್ತು. ಇದೇ ವೇಳೆ ರಾಜ್ಯ ಸರಕಾರ ಮಾ. 11ರಂದೇ ಮೇಲ್ಮನವಿಯನ್ನು ಸಲ್ಲಿಸಿ ಪಬ್ಲಿಕ್‌ ಪರೀಕ್ಷೆ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿತ್ತು. ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿ ವಿಚಾರಣೆಯನ್ನು ಮಾ. 14ಕ್ಕೆ ಮುಂದೂಡಿತ್ತು. ಅನ್ಯಮಾರ್ಗವಿಲ್ಲದೆ ಮಂಡಳಿ ಮಾ. 13ಕ್ಕೆ ನಿಗದಿಯಾಗಿದ್ದ ಪರೀಕ್ಷೆಯನ್ನು ಮುಂದೂಡಿತ್ತು.

ಮಾ. 14ರಂದು ಮೇಲ್ಮನವಿಯ ವಿಚಾರಣೆ ಮುಂದುವರಿಸಿದ ವಿಭಾಗೀಯ ಪೀಠ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್‌ ಮಟ್ಟದಲ್ಲಿ ಪರೀಕ್ಷೆ ನಡೆಸಲು ಸಿದ್ಧಪಡಿಸಲಾಗಿರುವ ಪ್ರಶ್ನೆಪತ್ರಿಕೆಗಳಲ್ಲಿ ಪಠ್ಯಕ್ರಮಕ್ಕೆ ಹೊರತಾದ ಪ್ರಶ್ನೆಗಳಿವೆಯೇ? ಎಂಬ ಬಗ್ಗೆ ಸ್ಪಷ್ಟನೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ಶಿಕ್ಷಣ ಆಯುಕ್ತರಿಗೆ ನಿರ್ದೇಶನ ನೀಡಿತ್ತು. ಅದರಂತೆ ಬುಧವಾರದಂದು ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿತ್‌ನ್ನು ಪರಿಶೀಲಿಸಿದ ವಿಭಾಗೀಯ ಪೀಠ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್‌ ಮಟ್ಟದ ಪರೀಕ್ಷೆ ನಡೆಸಲು ಶಿಕ್ಷಣ ಕಾಯಿದೆಯಡಿ ಯಾವುದೇ ನಿರ್ಬಂಧ ಇಲ್ಲವಾದ್ದರಿಂದ ಪರೀಕ್ಷೆಗೆ ಅನುಮತಿಯನ್ನು ನೀಡಿತು. ಈ ವೇಳೆ ಕೆಲವೊಂದು ಸ್ಪಷ್ಟ ನಿರ್ದೇಶಗಳನ್ನು ನೀಡಿರುವ ಹೈಕೋರ್ಟ್‌, 10 ದಿನಗಳ ಬಳಿಕ ಪರೀಕ್ಷೆಯನ್ನು ನಡೆಸಬೇಕು, ಪಠ್ಯಕ್ರಮದಿಂದ ಹೊರತಾದ ಪ್ರಶ್ನೆ ಕೇಳುವಂತಿಲ್ಲ ಮತ್ತು ಪರೀಕ್ಷೆಯ ಫ‌ಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ ಎಂದು ತಿಳಿಸಿದೆ. ತನ್ಮೂಲಕ ಸರಕಾರ ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ನಡುವೆ ನಡೆಯುತ್ತಿದ್ದ ಹಗ್ಗ ಜಗ್ಗಾಟ ತಾರ್ಕಿಕ ಅಂತ್ಯ ಕಂಡಿದ್ದು ಸರಕಾರದ ನಿಲುವಿಗೆ ಕೊನೆಗೂ ಜಯ ಲಭಿಸಿದೆ.

ಆದರೆ ಕಳೆದೊಂದು ವಾರದಿಂದ ಪರೀಕ್ಷೆ ವಿಚಾರವಾಗಿ ತಲೆದೋರಿದ್ದ ಗೊಂದಲ, ಅನಿಶ್ಚಿತತೆಗಳಿಂದ ವಿದ್ಯಾರ್ಥಿಗಳು ಮತ್ತವರ ಹೆತ್ತವರು ಎದುರಿಸಿದ ಆತಂಕ ಮತ್ತು ಮಾನಸಿಕ ಒತ್ತಡಗಳಿಗೆ ಯಾರು ಉತ್ತರದಾಯಿಗಳು ಎಂಬ ಪ್ರಶ್ನೆಗೆ ಮಾತ್ರ ಉತ್ತರ ಲಭಿಸಿಲ್ಲ. ಸರಕಾರ ಮತ್ತು ಶಿಕ್ಷಣ ಇಲಾಖೆಯ ನಿರ್ಧಾರ, ಖಾಸಗಿ ಶಾಲಾಡಳಿತ ಮಂಡಳಿಗಳ ವಿರೋಧ, ಕಾನೂನು ಹೋರಾಟ ಇವೆಲ್ಲವನ್ನೂ ಬದಿಗಿಟ್ಟು ಒಂದು ಕ್ಷಣ ವಿದ್ಯಾರ್ಥಿಗಳ ಬಗೆಗೆ ಯಾರೂ ತಲೆಕೆಡಿಸಿಕೊಳ್ಳದಿರುವುದು ವಿಪರ್ಯಾಸವೇ ಸರಿ. ಇದರ ಮಧ್ಯೆ ಮಾ.27ರಿಂದ ಪರೀಕ್ಷೆ ನಡೆಸಬೇಕು ಎಂದು ಹೈಕೋರ್ಟ್‌ ಹೇಳಿದೆ. ಮಾ.31ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿವೆ. ಇದರಿಂದಾಗಿ ಈ ಎರಡೂ ಪರೀಕ್ಷೆಗಳನ್ನು ಒಟ್ಟಿಗೇ ನಡೆಸಬೇಕಾದ ಅನಿವಾರ್ಯತೆಗೆ ಮಂಡಳಿ ಸಿಲುಕಲಿದೆ.

ಸರಕಾರ ಮತ್ತು ಖಾಸಗಿ ಶಾಲಾಡಳಿತ ಮಂಡಳಿಗಳು ಇದನ್ನೊಂದು ಪ್ರತಿಷ್ಠೆಯ ಪ್ರಶ್ನೆಯಾಗಿಸಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಅನವಶ್ಯಕವಾಗಿ ಗೊಂದಲ ಸೃಷ್ಟಿಸಿದುದು ಅಕ್ಷಮ್ಯ. ಇತ್ತಂಡಗಳೂ ಪರಸ್ಪರ ಮುಖಾಮುಖೀಯಾಗಿ ಕುಳಿತು ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು. ಇದನ್ನು ಬಿಟ್ಟು ಸುಖಾಸುಮ್ಮನೆ ವಿವಾದವನ್ನು ಬೇಕಾಬಿಟ್ಟಿ ಎಳೆದಾಡಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡಿದ್ದು ಸರ್ವಥಾ ಸರಿಯಲ್ಲ. ಪರೀಕ್ಷೆ ಬರೆಯಲು ಸಜ್ಜಾಗಿದ್ದ ವಿದ್ಯಾರ್ಥಿಗಳು ಮತ್ತೆ ಹತ್ತು ದಿನಗಳ ವಿರಾಮದ ಬಳಿಕ ಸನ್ನದ್ಧರಾಗಬೇಕಿದೆ. ಎಳೆಯ ಮಕ್ಕಳ ಮೇಲೆ ಈ ತೆರನಾದ ಅನಗತ್ಯ ಒತ್ತಡ ಹೇರುವುದನ್ನು ಸಹಿಸ ಲಾಗದು. ಶಿಕ್ಷಣ ನೀತಿ, ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯೇ ಪ್ರಧಾನ ಆದ್ಯತೆ ಯಾಗಿರಬೇಕು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next