Advertisement

ಮೆಸ್ಸಿ ವರ್ಸಸ್‌ ಫ್ರಾನ್ಸ್‌ ಫಿಫಾ ಮಹಾಸಮರ: “ವಿದಾಯ ಪಂದ್ಯ’ದಲ್ಲಿ ಚೊಚ್ಚಲ ವಿಶ್ವಕಪ್‌ ಗೆಲ್ಲುವರೇ ಮೆಸ್ಸಿ?

11:31 PM Dec 17, 2022 | Team Udayavani |

ದೋಹಾ: ರವಿವಾರ ರಾತ್ರಿಯ ಫಿಫಾ ಫೈನಲ್‌ ಮಹಾಸಮರಕ್ಕೆ ದಿಗ್ಗಜ ತಂಡಗಳೆರಡು ಸಜ್ಜಾಗಿವೆ. ಅದು ಎರಡು ಬಾರಿಯ ಚಾಂಪಿಯನ್ಸ್‌ ಹಾಗೂ ಸಮಬಲದ ಪಡೆಗಳಾದ ಆರ್ಜೆಂಟೀನಾ ಮತ್ತು ಫ್ರಾನ್ಸ್‌. ಆದರೆ ಕ್ರೀಡಾಜಗತ್ತು ಮಾತ್ರ ಆರ್ಜೆಂಟೀನಾ ಹಾಗೂ ಸೂಪರ್‌ಸ್ಟಾರ್‌ ಫ‌ುಟ್ಬಾಲಿಗ ಲಿಯೋನೆಲ್‌ ಮೆಸ್ಸಿ ಮೇಲೆ ಕೇಂದ್ರೀಕೃತಗೊಂಡಿದೆ.
ಇಂದಲ್ಲದಿದ್ದರೆ ಮತ್ತೆಂದೂ ಇಲ್ಲ ಎಂಬ ಸ್ಥಿತಿಯಲ್ಲಿ, ಅಂತಿಮ ನಿರೀಕ್ಷೆಯಲ್ಲಿದ್ದಾರೆ 35ರ ಹರೆಯದ ಸೂಪರ್‌ಸ್ಟಾರ್‌ ಮೆಸ್ಸಿ. ಹೆಚ್ಚು ಕಡಿಮೆ 2011ರ ಏಕದಿನ ವಿಶ್ವಕಪ್‌ ಫೈನಲ್‌ ವೇಳೆ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಎದುರಿಸುತ್ತಿದ್ದಂಥ ಸ್ಥಿತಿ ಅದು!

Advertisement

ರವಿವಾರ ರಾತ್ರಿ 80 ಸಾವಿರದಷ್ಟು ಅಗಾಧ ಪ್ರೇಕ್ಷಕರ ಸಮ್ಮುಖದಲ್ಲಿ, “ಲುಸೈಲ್‌ ಸ್ಟೇಡಿಯಂ’ನಲ್ಲಿ ನಡೆಯಲಿರುವ ವಿಶ್ವಕಪ್‌ ಫ‌ುಟ್‌ಬಾಲ್‌ ಫೈನಲ್‌ನಲ್ಲಿ ಆರ್ಜೆಂಟೀನಾ ಹಾಲಿ ಚಾಂಪಿಯನ್‌ ಫ್ರಾನ್ಸ್‌ ತಂಡವನ್ನು ಎದುರಿಸಲಿದೆ. ಆದರೆ ಫ‌ುಟ್‌ಬಾಲ್‌ ಜಗತ್ತು ಮಾತ್ರ ಮೆಸ್ಸಿ ವರ್ಸಸ್‌ ಫ್ರಾನ್ಸ್‌ ಎಂದೇ ಈ ಮಹಾಸಮರವನ್ನು ಬಣ್ಣಿಸುತ್ತಿದೆ. ಕಾರಣ, ಜಗತ್ತನ್ನೇ ಕಾಲ್ಚೆಂಡಿನಲ್ಲಿ ಕುಣಿಸಿದ ಮೆಸ್ಸಿ ಈ ಸಲ ಖಂಡಿತ ಟ್ರೋಫಿ ಎತ್ತಿ ಸ್ಮರಣೀಯ ವಿದಾಯ ಹೇಳಲಿದ್ದಾರೆ ಎಂಬ ದೃಢ ನಂಬಿಕೆಯಿಂದ!

ಇದು ಮೆಸ್ಸಿ ಪಾಲಿನ ದಾಖಲೆಯ 26ನೇ ವಿಶ್ವಕಪ್‌ ಪಂದ್ಯವೂ ಆಗಿದೆ. ಸದ್ಯ ಅವರು ಜರ್ಮನಿಯ ಲೋಥರ್‌ ಮ್ಯಾಥ್ಯೂಸ್‌ ಜತೆ ಜಂಟಿ ಅಗ್ರಸ್ಥಾನಿಯಾಗಿದ್ದಾರೆ (25 ಪಂದ್ಯ).

ಒಂದೇ ಟ್ರೋಫಿಯ ಕೊರತೆ
37 ಕ್ಲಬ್‌ ಟ್ರೋಫಿಗಳು, 7 ಬ್ಯಾಲನ್‌ ಡಿ’ಓರ್‌ ಪ್ರಶಸ್ತಿ, 6 ಯುರೋಪಿಯನ್‌ ಗೋಲ್ಡನ್‌ ಬೂಟ್ಸ್‌, ಒಂದು “ಕೊಪಾ ಅಮೆರಿಕ’ ಚಾಂಪಿಯನ್‌ ಪಟ್ಟ, ಒಂದು ಒಲಿಂಪಿಕ್‌ ಚಿನ್ನದ ಪದಕ… 18 ವರ್ಷಗಳ ಈ ಸುದೀರ್ಘ‌ ಫ‌ುಟ್‌ಬಾಲ್‌ ಬಾಳ್ವೆಯಲ್ಲಿ ಇಷ್ಟೆಲ್ಲವನ್ನೂ ಬಾಚಿಕೊಂಡರೂ ಮೆಸ್ಸಿ ಪಾಲಿಗೆ ವಿಶ್ವಕಪ್‌ ಎಂಬುದು ಮರೀಚಿಕೆಯೇ ಆಗಿ ಉಳಿದಿರುವುದು ವಿಪರ್ಯಾಸ. 2014ರಲ್ಲೇ ಇದಕ್ಕೊಂದು ಬಾಗಿಲು ತೆರೆದಿತ್ತಾದರೂ ಜರ್ಮನಿ ಅಡ್ಡಗಾಲಿಕ್ಕಿತು. ಹೀಗಾಗಿ ಮೆಸ್ಸಿ ಪಾಲಿಗೆ ವಿಶ್ವಕಪ್‌ ಗೆಲ್ಲಲು ಇರುವ ಕಟ್ಟಕಡೆಯ ಅವಕಾಶ, ರವಿವಾರ ರಾತ್ರಿಯ ಫೈನಲ್‌.

ಅಂದು ಸಚಿನ್‌ ತೆಂಡುಲ್ಕರ್‌ ಕೂಡ ಇಂಥದೇ ಸುದೀರ್ಘ‌ ನಿರೀಕ್ಷೆಯಲ್ಲಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಡಿಯಿರಿಸಿ 22 ವರ್ಷಗಳುರುಳಿದರೂ ಏಕದಿನ ವಿಶ್ವಕಪ್‌ ಮಾತ್ರ ದೂರವೇ ಉಳಿದಿತ್ತು. ಕೊನೆಗೂ 2011ರ ಅಂತಿಮ ಅವಕಾಶದಲ್ಲಿ ಕ್ರಿಕೆಟ್‌ ದೇವರಿಗೆ ವಿಶ್ವಕಪ್‌ ಎತ್ತುವ ಭಾಗ್ಯ ಲಭಿಸಿತು. ಅವರ ಕ್ರಿಕೆಟ್‌ ಬದುಕು ಸಾರ್ಥಕ್ಯ ಕಂಡಿತ್ತು. ಮೆಸ್ಸಿಗೂ ಇಂಥದೇ ಗೆಲುವಿನ ವಿದಾಯ ಲಭಿಸೀತೇ?

Advertisement

ಸವಾಲು ಸುಲಭದ್ದಲ್ಲ
ಆದರೆ ಆರ್ಜೆಂಟೀನಾ ಮುಂದಿರುವ ಸವಾಲು ಸುಲಭದ್ದಲ್ಲ. ಎದುರಾಳಿ, ಹಾಲಿ ಚಾಂಪಿಯನ್‌ ಫ್ರಾನ್ಸ್‌ ಸಾಮಾನ್ಯ ತಂಡವೇನಲ್ಲ. ಅದು ಕೂಡ ಇತಿಹಾಸದ ಹೊಸ್ತಿಲಲ್ಲಿದೆ. ಟ್ರೋಫಿ ಉಳಿಸಿಕೊಳ್ಳಲು ಟೊಂಕ ಕಟ್ಟಿದೆ. ವಿಶ್ವಕಪ್‌ ಇತಿಹಾಸದಲ್ಲಿ ಈವರೆಗೆ ಸತತ 2 ಸಲ ಚಾಂಪಿಯನ್‌ ಆದ ತಂಡಗಳು ಎರಡು ಮಾತ್ರ-ಇಟಲಿ (1934 ಮತ್ತು 1938) ಹಾಗೂ ಬ್ರಝಿಲ್‌ (1958 ಮತ್ತು 1962). ಅರ್ಥಾತ್‌, ಕಳೆದ 60 ವರ್ಷಗಳ ಸುದೀರ್ಘ‌ ಚರಿತ್ರೆಯಲ್ಲಿ ಯಾವ ತಂಡವೂ ಫಿಫಾ ಟ್ರೋಫಿ ಉಳಿಸಿಕೊಂಡಿಲ್ಲ. ಇಂಥ ಸುವರ್ಣಾವಕಾಶವನ್ನು ಫ್ರಾನ್ಸ್‌ ಬಿಟ್ಟಿತೇ?

ಫ್ರೆಂಚ್‌ ಸೇನೆಯೂ ಸ್ಟಾರ್‌ ಆಟಗಾರರಿಂದ ಹೊರತಲ್ಲ. 23 ವರ್ಷದ ಫಾರ್ವರ್ಡ್‌ ಆಟಗಾರ ಕೈಲಿಯನ್‌ ಎಂಬಪೆ ಆರ್ಜೆಂಟೀನಾ-ಮೆಸ್ಸಿ ನಡುವೆ ದೊಡ್ಡ ಗೋಡೆಯಾಗಿ ನಿಲ್ಲುವುದರಲ್ಲಿ ಅನುಮಾನವಿಲ್ಲ. ಮೆಸ್ಸಿಯಂತೆ ಎಂಬಪೆ ಕೂಡ “ಗೋಲ್ಡನ್‌ ಬೂಟ್‌’ ರೇಸ್‌ನಲ್ಲಿದ್ದಾರೆ.

ಈ ಸ್ಪರ್ಧೆ ಕೇವಲ ಮೆಸ್ಸಿ ಮತ್ತು ಎಂಬಪೆಗೆ ಸೀಮಿತವಲ್ಲ. ಔಲೀನ್‌ ಶೊಮೆನಿ, ನಹೆÌಲ್‌ ಮೊಲಿನ, ಎಂಝೊ ಫೆರ್ನಾಂಡಿಸ್‌, ಆ್ಯಂಟೋಯಿನ್‌ ಗ್ರೀಝ್ಮನ್‌, ಜೂಲಿಯನ್‌ ಅಲ್ವರೆಝ್ ಮೊದಲಾದವರೆಲ್ಲ ಹೀರೋಗಳಾಗುವ ಎಲ್ಲ ಸಾಧ್ಯತೆ ಇದೆ.

3ನೇ ಸಲ ವಿಶ್ವ ಚಾಂಪಿಯನ್‌
1998ರ ಚಾಂಪಿಯನ್‌ ತಂಡದ ಆಟಗಾರ ದಿದಿಯರ್‌ ಡೆಶ್‌ಚಾಂಪ್ಸ್‌ ಫ್ರಾನ್ಸ್‌ ತಂಡದ ಕೋಚ್‌ ಆಗಿದ್ದು, ಇವರಿಗೂ ಇಲ್ಲಿ ಮೈಲುಗಲ್ಲು ನೆಡುವ ಅವಕಾಶವಿದೆ. ಫ್ರಾನ್ಸ್‌ ಗೆದ್ದರೆ ಸತತ 2 ವಿಶ್ವಕಪ್‌ ಚಾಂಪಿಯನ್‌ ತಂಡದ ಕೋಚ್‌ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಇಟಲಿಯ ವಿಟೋರಿಯೊ ಪೊಝೊ ಇಂಥ ಏಕೈಕ ಸಾಧಕ (1934 ಮತ್ತು 1938).

ಯಾವ ತಂಡ ಗೆದ್ದರೂ 3ನೇ ಸಲ ವಿಶ್ವ ಚಾಂಪಿಯನ್‌ ಆಗಲಿದೆ ಎಂಬುದಷ್ಟೇ ಈ ಹೊತ್ತಿನ ಸತ್ಯ!

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next