ಬೀದರ: ಬರಹ ಎಂದರೆ ತಪಸ್ಸು ಇದ್ದಂತೆ. ಅದು ಶ್ರೇಷ್ಠವಾಗಲು ಭಾವನೆಗಳು ಸೇರಬೇಕು. ನಿರ್ದಿಷ್ಟ ಸಂದೇಶ ಸಾರುವ ಕಾವ್ಯ ಸಮಾಜಕ್ಕೆ ಪೂರಕವಾಗಿರುತ್ತದೆ ಎಂದು ಗುಲಬರ್ಗಾ ವಿವಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ| ಎಚ್.ಟಿ. ಪೋತೆ ಹೇಳಿದರು.
ನಗರದ ಕರ್ನಾಟಕ ಜಾನಪದ ವಿವಿ ಪ್ರಾದೇಶಿಕ ಕೇಂದ್ರದಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯುಗಾದಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕಾವ್ಯ ಒಂದು ತಾಯಿ ಇದ್ದ ಹಾಗೆ. ಅದು ಸಾಮಾಜಿಕ ಕಳಕಳಿ ಬಿಂಬಿಸುವ ನೈಜ ಬರಹದಿಂದ ಕೂಡಿರಬೇಕು. ಬರಹ ಚಿಂತನೆಗಳ ಸಂಘರ್ಷಕ್ಕೆ ಒಳಪಟ್ಟರೆ ಅದು ಸಾರ್ವತ್ರಿಕವಾಗುತ್ತದೆ. ಉತ್ತಮ ಕಾವ್ಯದಿಂದ ಶ್ರೇಷ್ಠ ಕವಿ ಹೊರ ಹೊಮ್ಮುತ್ತಾನೆ. ಕವಿಯು ಸಹ ತಾಯಿ ರೂಪ ಉಳ್ಳವನಾಗಿರಬೇಕು. ವರ್ತಮಾನ ಸನ್ನಿವೇಶಗಳಿಗೆ ಸಾಕ್ಷಿಯಾಗಿ ಬರಹ ಹೊರಬರಬೇಕು. ಸಮಾಜದ ಓರೆ, ಕೋರೆಗಳನ್ನು ತಿದ್ದುವಂಥ ಕಾವ್ಯ ನಿಜವಾದ ಕಾವ್ಯರೂಪ ಪಡೆದುಕೊಳ್ಳುತ್ತದೆ ಎಂದು ಹೇಳಿದರು.
ನಮ್ಮ ದೈನಂದಿನ ಕಾರ್ಯಗಳು ಪುನರಾವರ್ತನೆಯಾಗುವ ಶುಭ ಗಳಿಗೆಯೇ ಯುಗಾದಿ ಹಬ್ಬ. ಇದು ಮನುಷ್ಯನ ಸಾಮಾಜಿಕ ಜೀವನವನ್ನು ಪರಿಶುದ್ಧವಾಗಿಸುವುದಲ್ಲದೆ, ಉತ್ಸಾಹ, ಪ್ರೀತಿ, ಸ್ನೇಹದ ಪ್ರತೀಕವಾದ ಕ್ಷಣವಾಗಿದೆ. ಸುಖ, ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ, ಸಾಂಪ್ರದಾಯಿಕ ಬದುಕಿನತ್ತ ಮುಖ ಮಾಡುವುದೇ ನಿಜವಾದ ಯುಗಾದಿ ಹಬ್ಬ ಎಂದು ಪ್ರತಿಪಾದಿಸಿದರು.
ಪ್ರಾದೇಶಿಕ ಕೇಂದ್ರದ ಸಂಯೋಜನಾಧಿಕಾರಿ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ಯುಗಾದಿ ಕವಿಗೋಷ್ಠಿಯು ನಮ್ಮ ಬರವಣಿಗೆಗೆ ಮತ್ತಷ್ಟು ಇಂಬು ನೀಡುತ್ತದೆ. ಸ್ಪರ್ಧಾ ಮನೋಭಾವ ಬೆಳೆಯುತ್ತದೆ. ವಿಮಶಾìತ್ಮಕ ಕಾವ್ಯಗಳನ್ನು ಸಮಾಜಕ್ಕೆ ಧಾರೆ ಎರೆಯಲು ಇದೊಂದು ಉತ್ತಮ ಸನ್ನಿವೇಶವಾಗಿದ್ದು, ಇಂಥ ಕವಿಗೋಷ್ಠಿಯಲ್ಲಿ ಯುವ ಕವಿಗಳು ಹೆಚ್ಚಾಗಿ ಭಾಗವಹಿಸಬೇಕೆಂದು ಹೇಳಿದರು.
ಜಾನಪದ ಪರಿಷತ್ ಕಾರ್ಯದರ್ಶಿ ಸುನಿತಾ ಕೂಡ್ಲಿಕರ್ ಮಾತನಾಡಿದರು. ಪಿಎಚ್‌ಡಿ ಪದವಿ ಪುರಸ್ಕೃತ ಡಾ| ಮಹಾನಂದಾ ಮಡಕಿ ಮತ್ತು ಡಾ| ಸುರೇಖಾ ಬಿರಾದಾರ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಸಾವಿತ್ರಿಬಾಯಿ ಹೆಬ್ಟಾಳೆ, ಕಲಾವತಿ ಬಿರಾದಾರ, ಡಾ| ಧನಲಕ್ಷ್ಮೀ ಪಾಟೀಲ, ಮಹಾರುದ್ರ ಡಾಕುಳಗಿ, ಅಂಬಿಕಾ ಬಿರಾದಾರ, ಶ್ವೇತಾ ಬಿರಾದಾರ, ಮೀರಾ ಖೇಣಿ, ಮಲ್ಲಮ್ಮ ಸಂತಾಜಿ, ನಾಗಯ್ಯ ಸ್ವಾಮಿ ಮತ್ತಿತರರು ಕವನ ವಾಚನ ಮಾಡಿದರು. ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು. ರಾಜಕುಮಾರ ಹೆಬ್ಟಾಳೆ ನಿರೂಪಿಸಿದರು. ಎಸ್.ಬಿ. ಕುಚಬಾಳ ವಂದಿಸಿದರು.