Advertisement

ಅಪಾಯಕಾರಿ ಮರ ತೆರವಿಗೆ ಮುಂದಾಗಲಿ ಮೆಸ್ಕಾಂ

09:25 AM Apr 16, 2018 | Team Udayavani |

ವೇಣೂರು: ಮುಂಗಾರು ಪ್ರಾರಂಭವಾಗಲು ಹೆಚ್ಚು ದೂರವೇನೂ ಇಲ್ಲ. ಮಳೆಗಾಲ ಶುರುವಾಗುವ ಹಾಗೂ ಮುಗಿಯುವ ಹಂತದಲ್ಲಿ ಬಿರುಗಾಳಿಗೆ ಪ್ರತಿ ವರ್ಷವೂ ನೂರಾರು ಮರಗಳು ಧರಾಶಾಹಿಯಾಗುತ್ತವೆ. ವಿದ್ಯುತ್‌ ಲೈನ್‌ ಮೇಲೆ ಮರ ಬಿದ್ದರಂತೂ ಅನಾಹುತ ಇನ್ನೂ ಹೆಚ್ಚು. ಇಂತಹ ಘಟನೆಗಳು ಪ್ರತಿ ವರ್ಷ ಮರುಕಳಿಸುತ್ತಿದ್ದು, ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಮೊದಲೇ ಎಚ್ಚೆತ್ತುಕೊಂಡು ಅಪಾಯಕಾರಿ ಮರಗಳ ತೆರವಿಗೆ ಮುಂದಾಗಬೇಕೆಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.

Advertisement

ವಿದ್ಯುತ್‌ ತಂತಿ ಹಾಗೂ ಪರಿವರ್ತಕಗಳಿಗೆ ತಾಗಿಕೊಂಡಿರುವ ಮರಗಳನ್ನು ಕಡಿಯಲು ಮೆಸ್ಕಾಂ ಈಗಲೇ ಮುಂದಾಗಬೇಕು. ಇದಕ್ಕೆ ಅರಣ್ಯ ಇಲಾಖೆಯೂ ತ್ವರಿತಗತಿಯಲ್ಲಿ ಅನುಮತಿ ನೀಡುವಂತಾಗಬೇಕು. 2016ರ ಮೇ ತಿಂಗಳಲ್ಲಿ ಬೀಸಿದ ಭಾರೀ ಸುಂಟರಗಾಳಿಗೆ ಹೊಸ ಪಟ್ಣ, ಅಂಡಿಂಜೆ, ನಾರಾವಿ, ಕುತ್ಲೂರು ಪರಿಸರದಲ್ಲಿ ನೂರಾರು ಮರಗಳು ಧರಾಶಾಹಿಯಾಗಿದ್ದವು. ನೂರಾರು ವಿದ್ಯುತ್‌ ಕಂಬಗಳು ಧರೆಗುರುಳಿ ವಾರಗಟ್ಟಲೆ ವಿದ್ಯುತ್‌ ಇಲ್ಲದೆ ನಾಗರಿಕರು ಪರದಾಡುವಂತಾಗಿತ್ತು.

ಪೆರ್ಮುಡದಲ್ಲಿ ಅಪಾಯಕಾರಿ ಮರ
ನಿಟ್ಟಡೆ ಗ್ರಾಮದ ಪೆರ್ಮುಡದ ಪಿಲಿಯೂರು ಎಂಬಲ್ಲಿ ಅಪಾಯಕಾರಿ ಬೃಹದಾಕಾರದ ಮರ ಇದ್ದು, ಅದರ ಗೆಲ್ಲುಗಳು ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿವೆ. ವಿದ್ಯುತ್‌ ಪರಿವರ್ತಕದಿಂದ ಅನತಿ ದೂರ ದಲ್ಲಿರುವ ಹೊಳೆ ಬದಿಯ ಇನ್ನೊಂದು ವಿದ್ಯುತ್‌ ಪರಿವರ್ತಕದ ಕಡೆಗೆ ಹಾದು ಹೋಗುವ ಎಚ್‌ಟಿ ಲೈನ್‌ನ ತಂತಿಯ ಮೇಲೆ ಈ ಬೃಹದಾಕಾರಾದ ಗೆಲ್ಲುಗಳು ಬಾಗಿವೆ. ಕಳೆದ ವರ್ಷ ಮರದ ಇನ್ನೊಂದು ಪಾರ್ಶ್ವದ ಗೆಲ್ಲುಗಳು ಮುರಿದು ಬಿದ್ದು ಆತಂಕ ಸೃಷ್ಟಿಯಾಗಿತ್ತು. ಗಾಳಿ, ಮಳೆಗೆ ಮರ ಬಿದ್ದರೆ ಶಾರ್ಟ್‌ ಸರ್ಕ್ಯೂಟ್‌ ಆಗಿ ಮನೆಗಳ ವಿದ್ಯುತ್‌ ಉಪಕರಣಗಳು ನಷ್ಟವಾಗುವುದು ಖಚಿತ ಎಂದು ಗ್ರಾಮಸ್ಥರು ಭೀತಿ ತೋಡಿಕೊಂಡಿದ್ದಾರೆ.

ಕಳೆದ ವರ್ಷ
ಕಳೆದ ವರ್ಷ ಪೆರ್ಮುಡ ಸಮೀಪದ ಫಂಡಿಜೆಯಲ್ಲಿ ವಿದ್ಯುತ್‌ ತಂತಿಯ ಮೇಲೆ ಮರ ಬಿದ್ದ ಪರಿಣಾಮ 8 ವಿದ್ಯುತ್‌ ಕಂಬಗಳು ಉರುಳಿ ಲಕ್ಷಾಂತರ ರೂ. ನಷ್ಟ ಸಂಭವಿಸಿತ್ತು. ಇಂತಹುದೇ ಸನ್ನಿವೇಶ ಇದೀಗ ಕಾಡುಪ್ರದೇಶವಾದ ಪಿಲಿಯೂರಿನಲ್ಲಿ ಸೃಷ್ಟಿಯಾಗಿದ್ದು, ಮೆಸ್ಕಾಂ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿದೆ.

ಮಾಹಿತಿ ನೀಡಿದ್ದೇವೆ
ಪಿಲಿಯೂರು ಬಳಿ ಇರುವ ಬೃಹದಾಕಾರದ ಮರ ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಈ ಬಗ್ಗೆ ವೇಣೂರು ಮೆಸ್ಕಾಂಗೆ ಮಾಹಿತಿ ನೀಡಿದ್ದೇವೆ. ಬಂದು ವೀಕ್ಷಿಸಿ ಹೋಗಿದ್ದಾರೆ. ಒಂದೊಮ್ಮೆ ಆ ಮರ ಬಿದ್ದರೆ ಏಳೆಂಟು ಕಂಬಗಳು ಉರುಳಿ ಅನಾಹುತ ಸಂಭವಿಸುವ ಸಾಧ್ಯತೆ ಇದ್ದು, ಕೂಡಲೇ ಮರವನ್ನು ತೆರವುಗೊಳಿಸಬೇಕು.
– ಪ್ರಕಾಶ್‌ ಕಣಿಲ, ಪಿಲಿಯೂರು, ಗ್ರಾಮಸ್ಥ

Advertisement

ಅರಣ್ಯ ಇಲಾಖೆ ತೆರವು ಮಾಡಬೇಕು
ಪಿಲಿಯೂರು ಬಳಿಯಿರುವ ಅಪಾಯಕಾರಿ ಮರದ ಬಗ್ಗೆ ಗಮನಕ್ಕೆ ಬಂದಿದ್ದು, ಸ್ಥಳಕ್ಕೆ ತೆರಳಿ ವೀಕ್ಷಿಸಿದ್ದೇವೆ. ಬೆಳ್ತಂಗಡಿ ಎಇಇ ಅವರ ಗಮನಕ್ಕೂ ತರಲಾಗಿದ್ದು, ಬೃಹದಾಕಾರದ ಮರ ಆಗಿರುವ ಕಾರಣ ಅರಣ್ಯ ಇಲಾಖೆಯೇ ತೆರವುಗೊಳಿಸಬೇಕಿದೆ. ವಿದ್ಯುತ್‌ ತಂತಿಗಳಿಗೆ ತಾಗಿಕೊಂಡಿರುವ ಮರದ ಗೆಲ್ಲುಗಳನ್ನು ಕಡಿಯುತ್ತೇವೆ. ಆದರೆ 3 ಮೀ.ಗಿಂತ ದೂರದಲ್ಲಿದ್ದರೆ ಮರಗಳನ್ನು ತೆಗೆಯಲು ಅರಣ್ಯ ಇಲಾಖೆಯ ಅನುಮತಿ ಬೇಕಾಗುತ್ತದೆ.
– ಗಂಗಾಧರ್‌, ಮೆಸ್ಕಾಂ ಶಾಖಾಧಿಕಾರಿ, ವೇಣೂರು

— ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next