ಬೆಳಗಾವಿ: ಒಂದಲ್ಲ, ಒಂದು ಲಕ್ಷ ಸಲ ನಾವು ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗುತ್ತೇವೆ. ನಾವು ಸಾಯವವರೆಗೂ ಜೈ ಮಹಾರಾಷ್ಟ್ರ ಎಂದು ಹೋರಾಟ ಮಾಡುತ್ತೇವೆ ಎಂದು ಬೆಳಗಾವಿ ಮಾಜಿ ಮೇಯರ್ ಸರಿತಾ ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿದರು.
ನಗರದ ಮರಾಠಾ ಮಂದಿರ ಸಭಾಭವನದಲ್ಲಿ ಕರ್ನಾಟಕ ರಾಜ್ಯೋತ್ಸವದಂದು ಮಹಾರಾಷ್ಟ್ರ ಏಕೀಕರಣ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಕರಾಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
2017ರಲ್ಲಿ ನಾನು ಮೇಯರ್ ಆಗಿದ್ದಾಗ ಜೈ ಮಹಾರಾಷ್ಟ್ರ ಎಂದಿದ್ದಕ್ಕೆ ಕೇಸು ಹಾಕಿದ್ದರು. ಈಗ ಆ ಕೇಸು ರೀ ಓಪನ್ ಮಾಡಿ ಹೆದರಿಸುತ್ತಿದ್ದಾರೆ. ಎಷ್ಟೇ ಕೇಸು ಹಾಕಿದರೂ ನಾವು ಯಾವುದಕ್ಕೂ ಹೆದರುವುದಿಲ್ಲ. ಇಂಥ ಅನೇಕ ಕೇಸುಗಳು ಎಂಇಎಸ್ ನಾಯಕರ ಮೇಲಿವೆ. ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಇದನ್ನೂ ಓದಿ:ಎಲ್ಲಾ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಡ್ಡಾಯಗೊಳಿಸುತ್ತೇವೆ:ಸಚಿವ ವಿ.ಸುನೀಲ್ ಕುಮಾರ್
ಬೆಳಗಾವಿ ಮರಾಠಿ ಭಾಷಿಕರಿಗೆ ಅನ್ಯಾಯ ಮಾಡುತ್ತಿರುವ ಕರ್ನಾಟಕ ಸರ್ಕಾರದ ಬಹಿರಂಗ ನಿಷೇಧ ಹೇರಬೇಕಾಗಿದೆ. ರಾಷ್ಟ್ರೀಯ ಪಕ್ಷಗಳಿಗೆ ಕಾರ್ಯಕರ್ತರು ಕಡಿಮೆ ಆಗಿದ್ದಾರೆ. ಹೀಗಾಗಿ ನಮ್ಮವರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಒಬ್ಬೊಬ್ಬರನ್ನಾಗಿ ನಮ್ಮ ಕಡೆ ಮತ್ತೆ ಎಳೆದು ತರುವ ಕೆಲಸ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಹಿಂದುತ್ವ ಪಕ್ಷ ಎಂದು ಹೇಳಿಕೊಳ್ಳುವವರು ಮಹಾನಗರ ಪಾಲಿಕೆ ಮೇಲೆ ಭಗವತ್ ಧ್ವಜ ಹಾರಿಸಬೇಕು. ನೂತನ ಪಾಲಿಕೆ ಸದಸ್ಯರು ಹಾಗೂ ಶಾಸಕರ ರಕ್ತದಲ್ಲಿ ಹಿಂದುತ್ವ ಇದ್ದಿದ್ದರೆ ಭಗವತ್ ಧ್ವಜ ಹಾರಿಸಲಿ. ನಿಮ್ಮ ಶಾಸಕತ್ವ ಹಾಗೂ ಮರಾಠಿ ಪ್ರೀತಿ ಆಗ ಗೊತ್ತಾಗಲಿದೆ. ಹಿಂದುತ್ವ ಪಕ್ಷದಲ್ಲಿ ಇರುವವರು ಹಿಂದೂ ಪ್ರೇಮ ತೋರಿಸಲಿ ಎಂದು ಬಿಜೆಪಿ ಸದಸ್ಯರಿಗೆ ಸವಾಲು ಹಾಕಿದರು.