Advertisement

LokSabha:1986ರಲ್ಲಿ ಎಂಇಎಸ್‌ ಕಿತಾಪತಿ; ಬೆಳಗಾವಿ ಲೋಕಸಭೆಗೆ 451 ಜನ ಸ್ಪರ್ಧಿಸಿದ್ದರು!

05:10 PM Mar 30, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಚುನಾವಣೆ ಮತ್ತು ಕಣದಲ್ಲಿರುವ ಆಭ್ಯರ್ಥಿಗಳ ಮಾತು ಬಂದಾಗ ಸಾಮಾನ್ಯವಾಗಿ 10 ಅಭ್ಯರ್ಥಿಗಳು ಸ್ಪರ್ಧೆಯಲ್ಲಿರುವುದು ಸಹಜ. ಆದರೆ ಬೆಳಗಾವಿ ಲೋಕಸಭಾ ಕ್ಷೇತ್ರ ಇದೆಲ್ಲವನ್ನೂ ಮೀರಿ ನಿಂತಿತ್ತು ಎಂದರೆ ನಿಮಗೆ
ಅಚ್ಚರಿಯಾಗಬಹುದು. ಈ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಒಟ್ಟು ಅಭ್ಯರ್ಥಿಗಳ ಸಂಖ್ಯೆ ಎಷ್ಟೆಂದು ಹೇಳುವುದನ್ನು ನಿಮ್ಮ ಊಹೆಗೆ ಬಿಟ್ಟರೆ ನೀವು 25 ಆಥವಾ 50 ಅಭ್ಯರ್ಥಿಗಳು ಎನ್ನಬಹುದು. ಆದರೆ ಈ ಲೆಕ್ಕಾಚಾರ, ಉತ್ತರ ಎಲ್ಲವೂ ತಪ್ಪು. ಬೆಳಗಾವಿ
ಲೋಕಸಭಾ ಕ್ಷೇತ್ರ ಒಮ್ಮೆ ಬರೋಬ್ಬರಿ 455 ಅಭ್ಯರ್ಥಿಗಳನ್ನು ಕಣದಲ್ಲಿ ನೋಡಿತ್ತು!

Advertisement

1996ರ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದ ಅಭ್ಯರ್ಥಿಗಳು ಮಾಡಿದ ಈ ನಿರ್ಧಾರ ಬಹುಶಃ ವಿಶ್ವದಾಖಲೆ ಆಗಿರಬಹುದು. ಮುಂದೆಯೂ ಇಂತಹ ಸಾಹಸವನ್ನು ಯಾರೂ ಮಾಡಲಾರರು. ಆದರೆ ಆಗ ಚುನಾವಣಾ ಆಯೋಗಕ್ಕಂತೂ ಇದೊಂದು ದೊಡ್ಡ ತಲೆನೋವಾಗಿ ಪರಿಣಿಮಿಸಿದ್ದು ಸುಳ್ಳಲ್ಲ. 1985ರಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಎಂಇಎಸ್‌ಗೆ ಬುದ್ಧಿ ಕಲಿಸಲು ಕನ್ನಡ ಸಂಘಟನೆಗಳ ಮುಖಂಡರು ಬೆಳಗಾವಿ ಕ್ಷೇತ್ರದಿಂದ 301 ಕನ್ನಡ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಎಂಇಎಸ್‌ ಲೋಕಸಭೆ ಚುನಾವಣೆಯಲ್ಲಿ 451 ಅಭ್ಯರ್ಥಿಗಳನ್ನು ನಿಲ್ಲಿಸಿ ಎಲ್ಲರ ಗಮನ ಸೆಳೆದಿತ್ತು.

1996ರ ಅವಧಿಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ವಿವಾದ ಬಹಳ ಜೋರಾಗಿತ್ತು. ಇಬ್ಬರಿಗೂ ಇದು ಪ್ರತಿಷ್ಠೆಯ ವಿಷಯ. ಗಡಿ ವಿವಾದ ಮುಂದೆ ಮಾಡಿ ಕನ್ನಡ ಮತ್ತು ಮರಾಠಿ ಭಾಷಿಕರ ಮಧ್ಯೆ ಭಿನ್ನಾಭಿಪ್ರಾಯ ಉಂಟು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ ರಾಜಕಾರಣಿಗಳು ಚುನಾವಣೆಯೇ ನಡೆಯಬಾರದು ಎನ್ನುವಂತೆ 451 ಆಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಈ ಮೂಲಕ ಚುನಾವಣೆ ಆಯೋಗಕ್ಕೆ ತಲೆಬಿಸಿ ಮಾಡುವದು ಮತ್ತು ಗಡಿ ಸಮಸ್ಯೆ ಬಗ್ಗೆ ಕೇಂದ್ರದ ಗಮನ ಸೆಳೆಯುವದು ಸಮಿತಿಯ ಲೆಕ್ಕಾಚಾರವಾಗಿತ್ತು.

455 ಜನರು ಕಣದಲ್ಲಿದ್ದರಿಂದ ಚುನಾವಣೆ ಅಯೋಗಕ್ಕೆ ಇದೊಂದು ಸವಾಲಾಗಿ ಪರಿಣಮಿಸಿತ್ತು. ಆದರೆ ಇದಕ್ಕೆ ಆಯೋಗ ತಲೆಕೆಡಿಸಿಕೊಳ್ಳಲಿಲ್ಲ. ಮತಪತ್ರ ಮುದ್ರಣ ಕಾರಣಕ್ಕಾಗಿ ಎರಡು ತಿಂಗಳ ಕಾಲ ಚುನಾವಣೆ ಮುಂದೂಡಿದ್ದ ಆಯೋಗ ದಿನಪತ್ರಿಕೆಯಷ್ಟು ದೊಡ್ಡದಾದ ಎರಡು ಪುಟಗಳ ಮತಪತ್ರಗಳನ್ನು ಸಿದ್ಧಪಡಿಸಿ ಚುನಾವಣೆ ನಡೆಸಿಯೇ ಬಿಟ್ಟಿತು.

ಈ ಚುನಾವಣೆಯಲ್ಲಿ ಎಲ್ಲರಿಗೂ ದಿಗಿಲು ಮೂಡಿಸಿದ್ದ ಎಂಇಎಸ್‌ ಬೆಂಬಲಿತ ಎಲ್ಲ ಪಕ್ಷೇತರ ಅಭ್ಯರ್ಥಿಗಳು ಠೇವಣೆ
ಕಳೆದುಕೊಂಡು ತೀವ್ರ ಮುಖಭಂಗ ಅನುಭವಿಸಿದ್ದು ಈಗ ಇತಿಹಾಸ. ಆದರೆ ದಾಖಲೆ ಸೃಷ್ಟಿಸಿದ ಈ ಚುನಾವಣೆ ಎಂಇಎಸ್‌ಗೆ ಸರಿಯಾದ ಪಾಠ ಕಲಿಸಿತು. ಚುನಾವಣೆ ನಂತರ ಎಂಇಎಸ್‌ ಬಲ ಮೊದಲಿನಂತೆ ಉಳಿಯಲಿಲ್ಲ. ಈ ಪಾಠದಿಂದ ಮುಂದೆ ಮತ್ತೂಮ್ಮೆ ಇಂತಹ ದುಸ್ಸಾಹಸ ಮಾಡುವ ಕೆಲಸಕ್ಕೆ ಸಮಿತಿ ನಾಯಕರು ಹೋಗಲಿಲ್ಲ.

Advertisement

ಹಾಗಾದರೆ ಗೆದ್ದಿದ್ದು ಯಾರು?
455 ಆಭ್ಯರ್ಥಿಗಳು ಕಣದಲ್ಲಿದ್ದರಿಂದ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಸಹಜವಾಗಿಯೇ ಇದು ಪ್ರತಿಷ್ಠೆಯ ವಿಷಯವಾಗಿತ್ತು. ಆದರೆ ಕಾಂಗ್ರೆಸ್‌ ಮತ್ತು ಬಿಜೆಪಿ ಲೆಕ್ಕಾಚಾರಗಳನ್ನೆಲ್ಲಾ ತಲೆಕೆಳಗೆ ಮಾಡಿದ ಜನತಾದಳ ಮೊದಲ ಬಾರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ವಿಜಯದ ಮಾಲೆ ಧರಿಸಿತು. ಅಭ್ಯರ್ಥಿಗಳ ಸಂಖ್ಯೆಯ ವಿಷಯದಲ್ಲಿ ಸಾರ್ವಕಾಲಿಕ ದಾಖಲೆ
ಮಾಡಿದ ಈ ಚುನಾವಣೆಯಲ್ಲಿ ಜನತಾದಳದ ಶಿವಾನಂದ ಕೌಜಲಗಿ ಬಿಜೆಪಿಯ ಬಾಬಾಗೌಡ ಪಾಟೀಲ ಅವರನ್ನು 70 ಸಾವಿರ ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಲೋಕಸಭೆ ಪ್ರವೇಶ ಮಾಡಿದ್ದರು. ಈ ಚುನಾವಣೆಯಲ್ಲಿ ಮೊದಲ ಬಾರಿ ಬೆಳಗಾವಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಭಾಕರ ಕೋರೆ ಮೂರನೇ ಸ್ಥಾನ ಗಳಿಸಿದ್ದರು.

*ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next