ಕ್ರಿಸ್‌ಮಸ್ ಅಂದಕೂಡಲೇ ಮೊದಲು ನೆನಪಾಗುವುದು ಕೇಕ್. ಆದರೆ, ಕೇಕ್‌ನಷ್ಟೇ ಸವಿಯಾದ ಡೋನಟ್, ರೋಸ್ ಕುಕೀಸ್‌ಗಳನ್ನೂ ಈ ಸಂದರ್ಭದಲ್ಲಿ ಮಾಡಲಾಗುತ್ತದೆ. ಇವೆಲ್ಲಾ ಬೇಕರಿಯಲ್ಲಿ ಸಿಗುವ ತಿನಿಸುಗಳಲ್ಲವಾ ಅಂತ ಅಚ್ಚರಿಯಾಗ್ತಿದೆಯಾ? ಖಂಡಿತಾ ಅಲ್ಲ. ಇವುಗಳನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಕ್ರಿಸ್‌ಮಸ್ ದಿನ ಸಾಮಾನ್ಯವಾಗಿ ತಯಾರಿಸುವ ನಾಲ್ಕು ತಿನಿಸುಗಳ ರೆಸಿಪಿ ಇಲ್ಲಿದೆ.
1. ಡೋನಟ್
ಬೇಕಾಗುವ ಸಾಮಗ್ರಿ: ಒಂದು ಬಟ್ಟಲು ಗೋಧಿ ಹಿಟ್ಟು, 1/4 ಬಟ್ಟಲು ಮೊಸರು, 1/4 ಬಟ್ಟಲು (ಅಥವಾ ಬೇಕಾಗುವಷ್ಟು)ಬೆಚ್ಚಗಿನ ಹಾಲು, 1 ಚಮಚ ಸಕ್ಕರೆ, 1 ಚಮಚ ಬೆಣ್ಣೆ, 1 ಚಮಚ ಬೇಕಿಂಗ್ ಪೌಡರ್, 1 ಚಮಚ ವೆನಿಲ್ಲಾ ಎಸ್ಸ್ ಸ್ , ಚಿಟಿಕೆ ಉಪ್ಪು ಮತ್ತು ಬೇಕಿಂಗ್ ಸೋಡಾ.
ಮಾಡುವ ವಿಧಾನ: ಗೋಧಿ ಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಉಪ್ಪು, ಸಕ್ಕರೆ, ಬೆಣ್ಣೆ, ವೆನಿಲ್ಲಾ ಎಸ್ಸ್ ಸ್ ಅನ್ನು ಒಟ್ಟಿಗೆ ಸೇರಿಸಿ. ಈ ಮಿಶ್ರಣಕ್ಕೆ ಮೊಸರು ಸೇರಿಸಿ, ನಂತರ ಸ್ವಲ್ಪಸ್ವಲ್ಪವೇ ಬೆಚ್ಚಗಿನ ಹಾಲು ಸೇರಿಸಿ, ಪೂರಿ ಹಿಟ್ಟಿನ ಹದಕ್ಕೆ ಕಲಸಿ, ಅರ್ಧ ಗಂಟೆ ನೆನೆಯಲು ಬಿಡಿ. ನಂತರ, ಉಂಡೆ ಮಾಡಿ, ಅರ್ಧ ಇಂಚು ದಪ್ಪಗಿರುವ ಚಪಾತಿಯಂತೆ ಲಟ್ಟಿಸಿ. ಒಂದು ಸಣ್ಣ ಡಬ್ಬ ಅಥವಾ ಬಾಟಲಿ ಮುಚ್ಚಳದಿಂದ ದುಂಡಗೆ ಒತ್ತಿ, ಕತ್ತರಿಸಿಕೊಳ್ಳಿ. ನಂತರ ನಡುವೆ ಮತ್ತೆ ಚಿಕ್ಕ ಮುಚ್ಚಳದಿಂದ ಸಣ್ಣ ತೂತು ಮಾಡಿ. (ಉದ್ದಿನ ವಡೆಗೆ ಮಾಡುವ ತೂತಿನಂತೆ ಇರಬೇಕು) ಇವನ್ನು, ಬೇಕಿದ್ದರೆ ಬೇಕ್ ಮಾಡಬಹುದು ಅಥವಾ ಎಣ್ಣೆಯಲ್ಲಿ ಕರಿಯಬಹುದು. ಬಿಸಿ ಇರುವಾಗಲೇ ಮೇಲೆ ಸಕ್ಕರೆ ಪುಡಿ ಉದುರಿಸಿದರೆ ಡೋನಟ್ ರೆಡಿ. ಬೇಕಿದ್ದರೆ ಮೇಲೆ ಚಾಕೋಲೇಟ್ ಸಾಸ್ ಹಾಕಿ, ಚಾಕೋ ಚಿಪ್ಸ್ ಅಥವಾ ಬಣ್ಣದ ಸಕ್ಕರೆ ಕಾಳು ಉದುರಿಸಬಹುದು.
2. ರೋಸ್ ಕುಕೀಸ್
ಬೇಕಾಗುವ ಸಾಮಗ್ರಿ: 1 ಬಟ್ಟಲು ಅಕ್ಕಿ ಹಿಟ್ಟು, 1/4 ಬಟ್ಟಲು ಮೈದಾ ಹಿಟ್ಟು, 1/2 ಬಟ್ಟಲು ಸಕ್ಕರೆ ಪುಡಿ/ ಸಕ್ಕರೆ, 1/2 ಬಟ್ಟಲು ಕಾಯಿ ಹಾಲು, ಚಿಟಿಕೆ ಉಪ್ಪು, ಏಳೆಂಟು ಹನಿ ವೆನಿಲ್ಲಾ ಎಸ್ಸ್ ಸ್, ಕರಿಯಲು ಎಣ್ಣೆ, ಕುಕೀಸ್ ಅಚ್ಚು.
ಮಾಡುವ ವಿಧಾನ: ಅರ್ಧ ಬಟ್ಟಲು ಹಸಿ ತೆಂಗಿನ ತುರಿಯನ್ನು ಮಿಕ್ಸಿಗೆ ಹಾಕಿ ರುಬ್ಬಿ, ಸೋಸಿ ಹಾಲು ತೆಗೆದಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು. ಮೈದಾ ಹಿಟ್ಟು, ಉಪ್ಪು, ವೆನಿಲ್ಲಾ ಎಸ್ಸ್ ಸ್, ಕಾಯಿಹಾಲು, ಸಕ್ಕರೆ ಪುಡಿ ಹಾಕಿ ಕಲಸಿ. ಆ ಹಿಟ್ಟು ದೋಸೆ ಹಿಟ್ಟಿನ ಹದ ಇರಬೇಕು. ಅಚ್ಚನ್ನು ಕಾಯುವ ಎಣ್ಣೆಯಲ್ಲಿ ಸರಿಯಾಗಿ ಮುಳುಗುವಂತೆ ಕಾಯಲು ಇಡಿ. ಕಾಯ್ದ ಅಚ್ಚು ಅರ್ಧ ಅಥವಾ ಅರ್ಧಕ್ಕಿಂತ ಸ್ವಲ್ಪವೇ ಹೆಚ್ಚು ಹಿಟ್ಟಿನಲ್ಲಿ ಮುಳುಗುವಂತೆ ಅದ್ದಿ, (ಹಿಟ್ಟಿನಲ್ಲಿ ಪೂರ್ತಿ ಮುಳುಗಿದರೆ ಬಿಡಿಸಲು ಬರುವುದಿಲ್ಲ) ಎಣ್ಣೆಯಲ್ಲಿ ಕರಿಯಲು ಇಡಿ. ಸ್ವಲ್ಪ ಕರಿದ ನಂತರ, ಚಾಕುವಿನ ಸಹಾಯದಿಂದ ಕುಕೀಸ್ ಅನ್ನು ಬಿಡಿಸಿ ಹೊಂಬಣ್ಣಕ್ಕೆ ಕರಿದು ತೆಗೆಯಿರಿ. ಅಚ್ಚಿನಿಂದ ಕುಕೀಸ್ ಬಿಡಿಸಿದ ಮೇಲೆ ಮತ್ತೆ ಅಚ್ಚನ್ನು ಎಣ್ಣೆಯಲ್ಲಿಯೇ ಕಾಯಲು ಇಟ್ಟು ನಂತರ ಹಿಟ್ಟಿನಲ್ಲಿ ಅದ್ದಬೇಕು. ಹೀಗೆ ಪ್ರತಿ ಸಲ ಮಾಡಬೇಕು.
3. ಕಲ್ಕಲ್
ಬೇಕಾಗುವ ಸಾಮಗ್ರಿ: ಮೈದಾ ಹಿಟ್ಟು- 1/4 ಕೆ.ಜಿ, ತುಪ್ಪ-6 ಚಮಚ, ಚಿಟಿಕೆ ಉಪ್ಪು, ಸಕ್ಕರೆ ಪುಡಿ, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೈದಾ ಹಿಟ್ಟಿಗೆ, ಉಪ್ಪು, ಬಿಸಿ ಮಾಡಿದ ತುಪ್ಪ ಹಾಕಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ (ಬೇಕಿದ್ದರೆ ತಣ್ಣಗಿನ ಹಾಲು ಹಾಕಬಹುದು) ಗಟ್ಟಿಯಾಗಿ ಕಲಸಿ, ಹಿಟ್ಟನ್ನು 20 ನಿಮಿಷ ನೆನೆಯಲು ಇಡಿ. ನಂತರ, ಸಣ್ಣ ಅಡಿಕೆ ಗಾತ್ರದಷ್ಟು ಉಂಡೆ ಮಾಡಿ, ಫೋರ್ಕ್ ಮೇಲೆ ಇಟ್ಟು ಒತ್ತಿ, ಸುರುಳಿ ಮಾಡಿ, ಸಣ್ಣ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಿರಿ. ಒಂದು ಡಬ್ಬದಲ್ಲಿ ಸಕ್ಕರೆ ಪುಡಿ ಹಾಕಿ, ಕರಿದ ಕಲ್ಕಲ್ ಹಾಕಿ ಅಲುಗಾಡಿಸಿ. ಸಕ್ಕರೆ ಮೆತ್ತಿದ ಮೇಲೆ ತೆಗೆದು, ಡಬ್ಬದಲ್ಲಿ ತುಂಬಿಸಿಡಿ. ಪುಡಿ ಸಕ್ಕರೆಯ ಬದಲಾಗಿ ಏರು ಪಾಕದಲ್ಲಿಯೂ ಹಾಕಿ ತೆಗೆಯಬಹುದು.
4. ಖಾರ ಸೇವ್
ಬೇಕಾಗುವ ಸಾಮಗ್ರಿ: ಕಡಲೆ ಹಿಟ್ಟು -1/2 ಕೆ.ಜಿ, ಅಕ್ಕಿ ಹಿಟ್ಟು- 100 ಗ್ರಾಂ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಚ್ಚಖಾರದ ಪುಡಿ, ನೀರು, ಕರಿಯಲು ಎಣ್ಣೆ.
ಮಾಡುವ ವಿಧಾನ: ಪಾತ್ರೆಯಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಚಿಟಿಕೆ ಉಪ್ಪು, ಅಚ್ಚ ಖಾರಪುಡಿ ಹಾಕಿ ಬೆರೆಸಿ. ನಂತರ, ಒಂದೆರಡು ಸೌಟು ಕಾದ ಎಣ್ಣೆ, ಸ್ವಲ್ಪ ನೀರು ಹಾಕಿ ಚಕ್ಕುಲಿ ಹಿಟ್ಟಿನಂತೆ ಕಲಸಿಕೊಳ್ಳಿ. ಇದನ್ನು ಚಕ್ಕುಲಿ ಒತ್ತಳ್ಳಿನಲ್ಲಿ ಸೇವ್ ಬಿಲ್ಲೆ ಹಾಕಿ, ಕಾಯ್ದ ಎಣ್ಣೆಯಲ್ಲೇ ಒತ್ತಿ, ಕರಿದು ತೆಗೆಯಿರಿ. (ಖಾರಪುಡಿ ಬದಲಾಗಿ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಜಜ್ಜಿ ಸೇರಿಸಬಹುದು).
-ಜಯಶ್ರೀ ಕಜ್ಜರಿ