ಹೊಸದಿಲ್ಲಿ: ನೀಟ್ ಯುಜಿ ಮತ್ತು ಪಿಜಿ ವೈದ್ಯಕೀಯ ಪ್ರವೇಶದ ವೇಳೆ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿ ನೀಡುವ ಕೇಂದ್ರ ಸರಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಗುರುವಾರ ಈ ಕುರಿತು ಅಂತಿಮ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್, ಸ್ಪರ್ಧಾತ್ಮಕ ಪರೀಕ್ಷೆಗಳು ಕೆಲವು ನಿರ್ದಿಷ್ಟ ವರ್ಗಗಳಿಗೆ ನೀಡಲಾದ ಆರ್ಥಿಕ ಸಾಮಾಜಿಕ ಪ್ರಯೋಜನವನ್ನು ಪ್ರತಿ ಬಿಂಬಿಸುವುದಿಲ್ಲ. ಅರ್ಹತೆ ಎನ್ನುವುದು ಸಾಮಾಜಿಕವಾಗಿ ಸಂದಭೋìಚಿತ ವಾಗಿರಬೇಕು. ಮೀಸಲಾತಿಯು ಅರ್ಹತೆಗೆ ವಿರುದ್ಧವಾದದ್ದಲ್ಲ. ಅದು ಅದರ ಹಂಚಿಕೆಯನ್ನು ಇನ್ನಷ್ಟು ವಿಶಾಲಗೊಳಿಸುತ್ತದೆ ಎಂದು ಹೇಳಿದೆ. ಜತೆಗೆ, ಸರಕಾರವು ಅಖೀಲ ಭಾರತ ಕೋಟಾ ಸೀಟುಗಳಿಗೆ ಮೀಸಲಾತಿ ಕಲ್ಪಿಸುವಾಗ ನಮ್ಮ ಅನುಮತಿ ಪಡೆಯಬೇಕಾದ ಅಗತ್ಯವಿಲ್ಲ. ಸರಕಾರದ ನಿರ್ಧಾರ ಸರಿಯಾಗಿಯೇ ಇದೆ ಎಂದೂ ನ್ಯಾಯಪೀಠ ಹೇಳಿದೆ.
ಜ.7ರಂದೇ ಈ ಕುರಿತು ಸಂಕ್ಷಿಪ್ತ ಆದೇಶ ಹೊರಡಿಸಿದ್ದ ನ್ಯಾ| ಡಿ.ವೈ.ಚಂದ್ರಚೂಡ್ ಮತ್ತು ನ್ಯಾ|ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ, ಒಬಿಸಿ ಮೀಸಲಾತಿಯ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿತ್ತು. ಜತೆಗೆ, ಆರ್ಥಿಕವಾಗಿ ದುರ್ಬಲ ವರ್ಗದ
ವರಿಗೆ ಮೀಸಲಾತಿ ನೀಡಲು ಇದ್ದ ವಾರ್ಷಿಕ 8 ಲಕ್ಷ ರೂ.ಗಳ ಆದಾಯದ ಮಿತಿಗೂ ಒಪ್ಪಿಗೆ ನೀಡಿತ್ತು. ಜತೆಗೆ, ಈ ಕುರಿತು ಸದ್ಯದಲ್ಲೇ ವಿಸ್ತೃತ ಆದೇಶವನ್ನು ಹೊರಡಿಸುವುದಾಗಿ ತಿಳಿಸಿತ್ತು. ಅದರಂತೆ, ಗುರುವಾರ ಸುಪ್ರೀಂನ ತೀರ್ಪು ಹೊರಬಿದ್ದಿದೆ.
ಇದೇ ವೇಳೆ, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮೀಸಲಾತಿ ವಿಚಾರ ಕುರಿತು ಮಾರ್ಚ್ ತಿಂಗಳ ಮೂರನೇ ವಾರದಲ್ಲಿ ವಿಸ್ತೃತವಾಗಿ ವಿಚಾರಣೆ ನಡೆಸುವುದಾಗಿಯೂ ಕೋರ್ಟ್ ಹೇಳಿದೆ.