Advertisement

ಮಕ್ಕಳ ಪ್ರಗತಿಗೆ ಮಾರ್ಗದರ್ಶಿ ಶಿಕ್ಷಕ: ಶಿಕ್ಷಣ ಇಲಾಖೆಯಿಂದ ಹೊಸ ಪರಿಕಲ್ಪನೆ ಜಾರಿ ಉದ್ದೇಶ

01:29 AM Jul 18, 2020 | Hari Prasad |

ಬೆಂಗಳೂರು: ಶಾಲಾರಂಭ ಅನಿಶ್ಚಿತವಾಗಿರುವುದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯ ಮೇಲೆ ನಿಗಾ ಇರಿಸಲು ‘ಮಾರ್ಗದರ್ಶಿ ಶಿಕ್ಷಕ’ (ಮೆಂಟರ್‌ ಶಿಕ್ಷಕ) ಪರಿಕಲ್ಪನೆಯನ್ನು ಶಿಕ್ಷಣ ಇಲಾಖೆ ಪರಿಚಯಿಸಲಿದೆ.

Advertisement

ಪ್ರತೀ 20ರಿಂದ 30 ಮಕ್ಕಳ ಶೈಕ್ಷಣಿಕ ಪ್ರಗತಿ ಗಮನಿಸಲು ಶಿಕ್ಷಕರೊಬ್ಬರನ್ನು ನಿಯೋಜಿಸಲಾಗುತ್ತದೆ.

ಇದರಿಂದ ಮಕ್ಕಳಿಗೆ ಶಾಲೆ ಮತ್ತು ಶಿಕ್ಷಕರ ಜತೆ ಬಾಂಧವ್ಯ ಗಟ್ಟಿಯಾಗುತ್ತದೆ.

ಲಾಕ್‌ಡೌನ್‌ ಸಡಿಲಿಕೆಯಾಗಿದ್ದರೂ ಶಾಲೆ ಯಾವಾಗ ಆರಂಭ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಹೀಗಾಗಿ ಮಕ್ಕಳು ಮತ್ತು ಶಾಲೆ, ಶಿಕ್ಷಕ, ಶಿಕ್ಷಕಿಯರ ನಡುವಣ ಶೈಕ್ಷಣಿಕ ಬಾಂಧವ್ಯವನ್ನು ಗಟ್ಟಿಗೊಳಿಸಲು ಇಲಾಖೆ ಈ ಪರಿಕಲ್ಪನೆಯನ್ನು ಆರಂಭಿಸುತ್ತಿದೆ.

ಪ್ರತೀ 20ರಿಂದ 30 ಮಕ್ಕಳಿಗೆ ಅಥವಾ ಶಿಕ್ಷಕರು-ಮಕ್ಕಳ ಅನುಪಾತಕ್ಕೆ ಅನುಗುಣವಾಗಿ ‘ಮಾರ್ಗದರ್ಶಿ ಶಿಕ್ಷಕ’ರ ನಿಯೋಜನೆ ಮಾಡಲಾಗುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

Advertisement

ಎಸೆಸೆಲ್ಸಿ ಸಿದ್ಧತೆ ಪ್ರೇರಣೆ
ಎಸೆಸೆಲ್ಸಿ ಮಕ್ಕಳ ಪರೀಕ್ಷಾ ಸಿದ್ಧತೆ, ಯೋಗಕ್ಷೇಮ ವಿಚಾರಿಸಲು ಪ್ರೌಢಶಾಲಾ ಶಿಕ್ಷಕರ ತಂಡವನ್ನು ರಚನೆ ಮಾಡಲಾಗಿತ್ತು. ಇದು ಅತ್ಯಂತ ವ್ಯವಸ್ಥಿತವಾಗಿ ಜಾರಿಯಾಗಿ, ಸುಗಮವಾಗಿ ಎಸೆಸೆಲ್ಸಿ ಪರೀಕ್ಷೆ ನಡೆಸಲು ಸಾಧ್ಯವಾಗಿದೆ. ಇದನ್ನು ಮುಂದುವರಿಸುವ ನಿಟ್ಟಿನಲ್ಲಿ ‘ಮಾರ್ಗದರ್ಶಿ ಶಿಕ್ಷಕ’ ಪರಿಕಲ್ಪನೆಯನ್ನು ಅನುಷ್ಠಾನ ಮಾಡುತ್ತಿದ್ದೇವೆ ಎಂದು ಸಚಿವ ಸುರೇಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಮಾರ್ಗದರ್ಶಿ ಶಿಕ್ಷಕರ ಕಾರ್ಯವೇನು?
– ಬಹುಮುಖ್ಯವಾಗಿ ಮಕ್ಕಳ ಆರೋಗ್ಯ, ಶೈಕ್ಷಣಿಕ ಪ್ರಗತಿಯ ಮೇಲೆ ನಿಗಾ.

– ವಾರದಲ್ಲಿ ಕನಿಷ್ಠ ಒಮ್ಮೆಯಾದರೂ ಪ್ರತೀ ವಿದ್ಯಾರ್ಥಿಯ ಮನೆ ಭೇಟಿ.

– ಮಕ್ಕಳ ಪಠ್ಯಾಧಾರಿತ ಸಂಶಯ ನಿವಾರಣೆ.

– ವಿದ್ಯಾರ್ಥಿಯ ಸಮಸ್ಯೆಗಳು, ಕಲಿಕೆಯ ಮಟ್ಟ ಮತ್ತು ಕಲಿಕೆಯ ನಿರಂತರತೆ ಕಾಯ್ದುಕೊಳ್ಳಲು ಏನೇನು ಮಾಡಬೇಕು ಎಂಬಿತ್ಯಾದಿ ಅಂಶಗಳ ಕ್ರೋಡೀಕರಣ.

– ದಿನ ಬಿಟ್ಟು ದಿನ ಅಥವಾ ಎರಡು-ಮೂರು ದಿನಗಳಿಗೊಮ್ಮೆ ದೂರವಾಣಿ ಮೂಲಕ ಮಕ್ಕಳೊಂದಿಗೆ ಸಂವಾದ.

– ಮಕ್ಕಳ ಪಾಲಕರೊಂದಿಗೂ ಮಾತುಕತೆ, ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಸಲಹೆ, ಸೂಚನೆ.

– ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮದ ವಿವರ ಒದಗಿಸುವುದು.

ಮಾರ್ಗದರ್ಶಿ ಶಿಕ್ಷಕರ ಕಾರ್ಯದ ಸಮಗ್ರ ಸುತ್ತೋಲೆಯನ್ನು ಶೀಘ್ರದಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಕ ಹೊರಡಿಸಲಾಗುತ್ತದೆ. ಶೈಕ್ಷಣಿಕ ಪ್ರಗತಿಯ ಜತೆಗೆ ಮಕ್ಕಳು – ಶಾಲೆ ಹಾಗೂ ಶಿಕ್ಷಕರ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದೇವೆ.
– ಎಸ್‌. ಸುರೇಶ್‌ ಕುಮಾರ್‌, ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next