Advertisement

ಒತ್ತಡದ ಬದುಕಿನಿಂದ ಮಾನಸಿಕ ರೋಗ 

04:19 PM May 26, 2022 | Team Udayavani |

ಹಾವೇರಿ: ಆಧುನಿಕ ಯುಗದ ನಿರಂತರ ಒತ್ತಡದ ಬದುಕಿನಿಂದ ಮಾನವ ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದಾನೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಪಿ. ಆರ್‌. ಹಾವನೂರು ಹೇಳಿದರು.

Advertisement

ನಗರದ ಜಿ.ಎಚ್‌.ಕಾಲೇಜಿನಲ್ಲಿ ಬುಧವಾರ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಸಹಯೋಗದಲ್ಲಿ ನಡೆದ ವಿಶ್ವ ಸ್ಕಿಜೋಫ್ರಿನಿಯಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯವಾಗಿ 15 ರಿಂದ 30ವರ್ಷ ವಯೋಮಾನದವರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಇಂದು ಎಲ್ಲರೂ ತಂತ್ರಜ್ಞಾನಕ್ಕೆ ಅಂಟಿಕೊಂಡು ಅತಿಯಾದ ಆಲೋಚನೆಗೆ ಒಳಗಾಗಿ ಒಂದಿಲ್ಲೊಂದು ಮಾನಸಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿಗಳು ವಿವಿಧ ರೀತಿಯ ಮಾನಸಿಕ ಕಾಯಿಲೆಗೆ ಒಳಪಡುತ್ತಿದ್ದಾರೆ. ವಿದ್ಯಾಥಿಗಳು ಅತಿಯಾದ ಆಲೋಚನೆ ಮಾಡಬಾರದು ಹಾಗೂ ಮೊಬೈಲ್‌ ಬಳಕೆ ಕಡಿಮೆ ಮಾಡಿ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಬೇಕು. ರಾತ್ರಿ ಮಲಗುವ ಸಮಯದಲ್ಲಿ ದಿನಚರಿಯಲ್ಲಿ ನಡೆದ ವಿಷಯಗಳ ಬಗ್ಗೆ ಅತಿಯಾದ ಯೋಚನೆ ಒಳ್ಳೆಯದಲ್ಲ ಎಂದು ಸಲಹೆ ನೀಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ| ಚನಬಸಯ್ಯ ವಿರಕ್ತಮಠ ಮಾತನಾಡಿ, ಸ್ಕೀಜೊಫ್ರೇನಿಯಾ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಅರ್ಥವಿಲ್ಲದ ಮತ್ತು ಅಸಂಭದ್ದ ಮಾತುಗಳು, ಸೂಕ್ತವಲ್ಲದ ಭಾವನೆಗಳನ್ನು ವ್ಯಕ್ತಪಡಿಸುವುದು, ಕಾರಣವಿಲ್ಲದೆ ಅಳುವುದು, ನಗುವುದು ಮತ್ತು ಕೋಪ ಮಾಡಿಕೊಳ್ಳುವುದು, ಭಾವನೆಗಳೇ ಇಲ್ಲದ ಹಾಗೆ ಇರುವುದು, ತನ್ನ ಲೋಕದಲ್ಲಿ ಒಂಟಿಯಾಗಿರುವುದು, ಇಲ್ಲದ ವಾಸನೆ ಇದೆ ಎನ್ನುವುದು, ಸ್ಪರ್ಶಾನುಭವ  ಇಲ್ಲದಿರುವುದು, ಸ್ವಚ್ಛತೆ, ಹಸಿವು ಮತ್ತು ಬಾಯಾರಿಕೆ ಬಗ್ಗೆ ನಿರ್ಲಕ್ಷ್ಯ, ಕೆಲಸ ಕರ್ತವ್ಯಗಳನ್ನು ಮಾಡದೇ ಇರುವುದು ಕಂಡುಬರುತ್ತವೆ. ಈ ಲಕ್ಷಣಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಬಹುದಾಗಿದೆ ಎಂದು ಹೇಳಿದರು.

ಮನೋವೈದ್ಯ ಡಾ|ವಿಜಯಕುಮಾರ ಬಿ. ಉಪನ್ಯಾಸ ನೀಡಿ, ಸ್ಕಿಜೋಫ್ರಿನಿಯಾ ಒಂದು ಅನುಮಾನದ ಕಾಯಿಲೆಯಾಗಿದೆ. ಅನವಶ್ಯಕವಾಗಿ ಆಲೋಚನೆಗೆ ಒಳಪಡಿಸುತ್ತದೆ. ಆದರೆ, ರೋಗಿಯನ್ನು ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದು. ಇದೊಂದು ಅನುವಂಶಿಕ ರೋಗವಾಗಿದ್ದು, ವಂಶವಾಹಿಯಾಗಿ ಶೇ. 10ರಷ್ಟು ಮಕ್ಕಳಿಗೆ ಬಾಧಿಸಿದರೆ, ಶೇ. 90ರಷ್ಟು ಇದರ ಲಕ್ಷಣಗಳು ಕಂಡುಬರುವುದಿಲ್ಲ ಎಂದರು.

Advertisement

ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ಉಪಪ್ರಾಚಾರ್ಯ ಪ್ರೊ.ಡಿ.ಎ. ಕೊಲ್ಹಾಪುರೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ ಡಾ|ಪ್ರಭಾಕರ ಕುಂದೂರು, ಡಾ|ಜೆ.ಎಫ್‌.ಹೊಸಮನಿ, ಪ್ರೊ|ನಾಗರತ್ನ ಇತರರಿದ್ದರು. ಪ್ರೊ|ಎಸ್‌.ಎಸ್‌.ಸಣ್ಣಶಿವಣ್ಣನವರ ಸ್ವಾಗತಿಸಿ, ಯಲ್ಲಪ್ಪ ಓಬಣ್ಣನವರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next