Advertisement

ಮಾನಸಿಕ ಹಸಿವಿಗೆ ಸಂಗೀತ ಅನ್ನ

04:07 PM Jan 28, 2018 | |

ಬೀದರ: ಮಾನವನ ಹೊಟ್ಟೆ ಹಸಿವಿಗೆ ಅನ್ನ- ನೀರು ಹೇಗೆಯೋ, ಮಾನಸಿಕ ಹಸಿವಿಗೆ ನೃತ್ಯ-ಸಂಗೀತ ಅನ್ನವಾಗಿದೆ ಎಂದು ಹಿರಿಯ ಸಾಹಿತಿ ಬಿ.ಆರ್‌. ಲಕ್ಷ್ಮಣರಾವ್‌ ಹೇಳಿದರು.

Advertisement

ನಗರದ ರಂಗ ಮಂದಿರದಲ್ಲಿ ಶನಿವಾರ ನಾಟ್ಯಶ್ರೀ ನೃತ್ಯಾಲಯವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ “ರಾಜ್ಯ ಮಟ್ಟದ ಸಂಗೀತ ಮತ್ತು ನೃತ್ಯೋತ್ಸವ’ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಹಿತ್ಯ, ಸಂಗೀತ, ನೃತ್ಯ, ಕಲೆಯಿಂದ ಲೌಕಿಕ ಲಾಭಕ್ಕಿಂತ
ಮಾನಸಿಕ ಆತ್ಮಾನಂದ ಪಡೆಯಲು ಸಾಧ್ಯ. ಇದರಿಂದ ಮನುಷ್ಯನ ಬದುಕು ಸಂತೃಪ್ತಿ ನೆಮ್ಮದಿಯಿಂದ ಸಾಗುತ್ತದೆ. ಈ ನಿಟ್ಟಿನಲ್ಲಿ ನಾಟ್ಯಶ್ರೀ ನೃತ್ಯಾಲಯದಿಂದ ಮುಂದಿನ ಜನಾಂಗಕ್ಕೆ ಭರತನಾಟ್ಯ ಕಲಿಸುತ್ತಿರುವುದು ಶ್ಲಾಘನಿಯ ಎಂದರು. 

ಹಿರಿಯ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್‌ ಮಾತನಾಡಿ, ಬೀದರನಲ್ಲಿ ಅರವತ್ತರ ದಶಕದಲ್ಲಿ ಭರತನಾಟ್ಯಕ್ಕೆ
ಪ್ರೋತ್ಸಾಹವಿರಲಿಲ್ಲ. ನಾಟ್ಯವನ್ನು ಕಲೆಗಾಗಿ ಕಲೆಯನ್ನಾಗಿ ಮಾಡದೆ, ಬದುಕಿನ ಸಂಸ್ಕೃತಿಯಾಗಿ ಮಾಡಿರುವ ನಾಟ್ಯಶ್ರೀ ನೃತ್ಯಾಲಯ ಬೀದರನಲ್ಲಿ ಕಲೆಯ ವಾತವರಣ ನಿರ್ಮಿಸಿದೆ ಎಂದರು. 

ಶಾಸಕ ರಹೀಮ್‌ ಖಾನ್‌ ಮಾತನಾಡಿ, ಕಲೆಗೆ ಯಾವುದೇ ಜಾತಿ ಧರ್ಮವಿಲ್ಲ, ಸಾಮರಸ್ಯದ ಸಂಕೇತವಾಗಿರುವ
ಭರತನಾಟ್ಯವನ್ನು ಬೀದರಗೆ ಪರಿಚಯಿಸಿರುವ ನಾಟ್ಯಶ್ರೀ ನೃತ್ಯಾಲಯ ಕಾರ್ಯ ಅದ್ಭುತ ಎಂದರು. ಬೆಂಗಳೂರಿನ ಗಿರಿಜಾ ಲಕ್ಷ್ಮಣರಾವ್‌ ಮಾತನಾಡಿದರು. ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಗಾಯನ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಅಂಧ ಕಲಾವಿದ ದೀಲಿಪ ಕಾಡವಾದ ಅವರಿಗೆ
“ನಾಟ್ಯಶ್ರೀ ಪ್ರಶಸ್ತಿ’ ಪ್ರಧಾನ ಮಾಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿರಿಯ ಸಂಗೀತ ಕಲಾವಿದ ರಾಜೇಂದ್ರಸಿಂಗ್‌ ಪವಾರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಪ್ರತಿಭಾ ಚಾಮಾ ನಿರೂಪಿಸಿದರು. ಸತ್ಯಮೂರ್ತಿ ಸ್ವಾಗತಿಸಿದರೆ ಪ್ರೊ| ವೀರಶೆಟ್ಟಿ ಮೈಲೂರಕರ ಪ್ರಶಸ್ತಿ ಪ್ರದಾನ ಮಾಡಿದರು. 

Advertisement

ಬೆಳಗ್ಗೆ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಬುರಗಿಯ ನಾಟ್ಯಾಂಜಲಿ ನೃತ್ಯ ತಂಡದ ಸಂಧ್ಯಾ ಪಿ. ಭಟ್‌, ದೀಕ್ಷಾ ಮತ್ತು ಸಂಗಡಿಗರು ಹಾಗೂ ನಾಟ್ಯಶ್ರೀ ನೃತ್ಯಾಲಯದ ಕಲಾವಿದರಿಂದ ವಿಶೇಷ ಭರತನಾಟ್ಯ ಪ್ರದರ್ಶನ ಜರುಗಿತು.

ಮಧ್ಯಾಹ್ನ ಬೆಂಗಳೂರಿನ ನಾಟ್ಯಾಂಜಲಿಯ ಗುರು ಅಶೋಕಕುಮಾರ ಅವರ ಮಾರ್ಗದರ್ಶನದಲ್ಲಿ ಬೀದರನಲ್ಲಿ ಪ್ರಪ್ರಥಮ ಬಾರಿಗೆ ಭರತನಾಟ್ಯ-ಕಥಕ್‌ ನೃತ್ಯ ಪ್ರದರ್ಶನ, ನೃತ್ಯೋಲ್ಲಾಸ ಕಾರ್ಯಕ್ರಮ ಮನರಂಜಿಸಿತು. ಹಿರಿಯ ಕಲಾವಿದ ಶಂಭುಲಿಂಗ ವಾಲದೊಡ್ಡಿ ಮತ್ತು ಸಂಗಡಿಗರಿಂದ ಜಾನಪದ ಗೀತೆ ಗಾಯನ, ಬಾನುಪ್ರಿಯಾ ಅರಳಿ, ಶೈಲಜಾ ದಿವಾಕರ್‌ ಮತ್ತು ರೇಣುಕಾ ಎನ್‌.ಬಿ. ಹಾಗೂ ಸಂಗಡಿಗರು ದಾಸರ ಪದಗಳ ಗಾಯನ ನೆಡೆಸಿಕೊಟ್ಟರು. ಶಿವಕುಮಾರ ಪಂಚಾಳ ಮತ್ತು ಸಂಗಡಿಗರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಹಿರಿಯ ಸಾಹಿತಿ ಶಶಿಕಲಾ ವಸ್ತ್ರದ, ಶಿವಶರಣಪ್ಪಾ ವಾಲಿ, ಪ್ರೊ| ಸಿದ್ರಾಮಪ್ಪ ಮಾಸಿಮಾಡೆ, ಬಸವರಾಜ ರುದನೂರ, ಬಸವರಾಜ ಮೂಲಗೆ, ಗಂಗಶೆಟ್ಟಿ ಖಾನಪೂರೆ, ಗುರುಮೂರ್ತಿ ಮತ್ತಿತರರು ಇದ್ದರು. 

ಸಾಹಿತ್ಯ, ಸಂಗೀತ, ನೃತ್ಯ, ಕಲೆಯಿಂದ ಲೌಕಿಕ ಲಾಭಕ್ಕಿಂತ ಮಾನಸಿಕ ಆತ್ಮಾನಂದ ಪಡೆಯಲು ಸಾಧ್ಯ.
ಇದರಿಂದ ಮನುಷ್ಯನ ಬದುಕು ಸಂತೃಪ್ತಿ ನೆಮ್ಮದಿಯಿಂದ ಸಾಗುತ್ತದೆ. ಈ ನಿಟ್ಟಿನಲ್ಲಿ ನಾಟ್ಯಶ್ರೀ ನೃತ್ಯಾಲಯದಿಂದ
ಯುವ ಜನಾಂಗಕ್ಕೆ ಭರತನಾಟ್ಯ ಕಲಿಸುತ್ತಿರುವುದು ಶ್ಲಾಘನಿಯ. 
 ಬಿ.ಆರ್‌. ಲಕ್ಷ್ಮಣರಾವ್‌, ಹಿರಿಯ ಕವಿ 

Advertisement

Udayavani is now on Telegram. Click here to join our channel and stay updated with the latest news.

Next